ಕರ್ನಾಟಕ

ಸದ್ಯಕ್ಕೆ ಬಸ್‌ ಪ್ರಯಾಣ ದರ ಏರಿಕೆ ಇಲ್ಲ: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಬಸ್‌ ಪ್ರಯಾಣ ದರ ಏರಿಕೆ ಮಾಡದೇ ನಷ್ಟ ಸರಿದೂಗಿಸಲು ಪರ್ಯಾಯ ಪ್ರಯತ್ನಗಳನ್ನು ನಡೆಸುವಂತೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಶುಕ್ರವಾರ ಸಾರಿಗೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸಿಎಂ ಕುಮಾರಸ್ವಾಮಿ ಅವರು ದರ ಏರಿಕೆ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು. ಡೀಸೆಲ್‌ ದರ ಏರಿಕೆಯಿಂದಾಗಿ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ತೈಲ ದರ ಲೀಟರ್‌ಗೆ 58 ರೂ. ಇದ್ದ ಸಂದರ್ಭದಲ್ಲಿ ಬಸ್‌ ಪ್ರಯಾಣ ದರ ಏರಿಕೆಯಾಗಿತ್ತು. ಅಲ್ಲಿಂದ ಈವರೆಗೆ ಏರಿಕೆ ಆಗಿಲ್ಲ.

ಇದರಿಂದ ಸಾರಿಗೆ ನಿಗಮಗಳು ಸುಮಾರು 3 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಅನುಭವಿಸಿವೆ. ಆದರೂ, ಪ್ರಯಾಣಿಕರಿಗೆ ಹೊರೆಯಾಗುವುದನ್ನು ತಪ್ಪಿಸಲು ದರ ಏರಿಕೆ ಸದ್ಯಕ್ಕೆ ಬೇಡ ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಈ ವರ್ಷ ಸಾರಿಗೆ ಇಲಾಖೆಯಲ್ಲಿ ಆದಾಯ ಸಂಗ್ರಹದಲ್ಲಿ 131 ಕೋಟಿ ರೂ. ಹೆಚ್ಚಳವಾಗಿದೆ. ಹೀಗಾಗಿ, ದರ ಹೆಚ್ಚಳ ಮಾಡದೆ ಪರ್ಯಾಯ ಮಾರ್ಗಗಳ ಮೂಲಕ ನಷ್ಟ ಸರಿದೂಗಿಸಲು ಯೋಜನೆ ರೂಪಿಸುವಂತೆ ಸೂಚಿಸಲಾಗಿದೆ. ಬಸ್‌ ಸೌಲಭ್ಯ ಮಾತ್ರವಲ್ಲದೆ ಪ್ರಯಾಣಿಕರಿಗೆ ಅಗತ್ಯ ಮೂಲಭೂತ ಸೌಕರ್ಯ ಹೆಚ್ಚಿಸಲು ಹಾಗೂ ಪ್ರಯಾಣಿಕರ ಅಗತ್ಯ, ಆಶಯಗಳಿಗೆ ತಕ್ಕಂತೆ ಕಾರ್ಯನಿರ್ವಹಿಸಲು ಸಾರಿಗೆ ನಿಗಮಗಳಿಗೆ ಸೂಚನೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಬಿಎಂಟಿಸಿ ಮತ್ತು ಮೆಟ್ರೊ ರೈಲು ಮಧ್ಯೆ ಸಮನ್ವಯ ಸಾಧಿಸಲು ಗಮನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸಾರಿಗೆ ನಿಗಮಗಳ ನಷ್ಟ ಸರಿದೂಗಿಸುವ ಸಂಬಂಧ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸೂಕ್ತ ಯೋಜನೆ ರೂಪಿಸಲು ಸೂಚಿಸಲಾಗಿದ್ದು, ಆ ಬಳಿಕ ಮತ್ತೊಮ್ಮೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲು ಬಯಸಿರುವುದಾಗಿ ಸಿಎಂ ಹೇಳಿದರು.

Comments are closed.