ಕರ್ನಾಟಕ

ರಾಮನಗರ ಉಪ ಚುನಾವಣೆ: ಬಿಜೆಪಿಯಿಂದ ಕೊನೆ ಕ್ಷಣದಲ್ಲಿ ಅಭ್ಯರ್ಥಿ ಬದಲಾವಣೆ

Pinterest LinkedIn Tumblr


ರಾಮನಗರ: ರಾಮನಗರ ಉಪ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯು ಕೊನೆ ಕ್ಷಣದಲ್ಲಿ ತನ್ನ ಅಭ್ಯರ್ಥಿಯನ್ನು ಬದಲಾಯಿಸುವ ಮೂಲಕ ಈವರೆಗಿನ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ. ಕಾಂಗ್ರೆಸ್ ಪಕ್ಷದ ಒಳ ಜಗಳದ ಲಾಭ ಪಡೆಯುವ ಪ್ಲಾನ್ ಮಾಡಿರುವ ಬಿಜೆಪಿಯು ಚುನಾವಣೆಯಲ್ಲಿ ಕಾಂಗ್ರೆಸ್​ನ ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪನವರ ಮಗ ಎಂ. ಚಂದ್ರಶೇಖರ್​ಗೆ ಟಿಕೆಟ್ ಘೋಷಣೆ ಮಾಡಿದೆ. ಈ ಮೂಲಕ ಒಕ್ಕಲಿಗರ ಭದ್ರ ಕೋಟೆ ಎಂದೇ ಕರೆಯಲಾಗುವ ರಾಮನಗರದಲ್ಲಿ ಮತಗಳನ್ನು ಒಡೆದು ಅಧಿಕಾರ ಪಡೆಯಲು ರಣತಂತ್ರ ರೂಪಿಸಿದೆ‌.

ಇದ್ದಕ್ಕಿದ್ದಂತೆಯೇ ಎಂ. ಚಂದ್ರಶೇಖರ್​ರನ್ನು ಕಣಕ್ಕಿಳಿಸುವ ತೀರ್ಮಾನ ಕೈಗೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್​ ಯಡಿಯೂರಪ್ಪ ಶನಿವಾರ ರಾತ್ರಿ ಅವರನ್ನು ತಮ್ಮ ಡಾಲರ್ಸ್​ ಕಾಲೊನಿಯ ಮನೆಗೆ ಕರೆಸಿ ಬಿ. ಫಾರಂ ನೀಡಿದ್ದಾರೆ. ಎಂ ಚಂದ್ರಶೇಖರ್​ ಸೋಮವಾರ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆನ್ನಲಾಗಿದೆ. ಈ ಹಿಂದೆ ರಾಮನಗರ ಕ್ಷೇತ್ರದಿಂದ ಪಕ್ಷದ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಹೀಗಾಗಿ ಅವರು ರಾಮನಗರ ಕ್ಷೇತ್ರದಲ್ಲಿ ಪಕ್ಷದ ಪರವಾಗಿ ಪ್ರಚಾರವನ್ನೂ ಆರಂಭಿಸಿದ್ದರು. ಆದರೀಗ ಅಂತಿಮ ಕ್ಷಣದಲ್ಲಿ ಎಲ್ಲವೂ ಬದಲಾಗಿದೆ.

ಜೆಡಿಎಸ್​ನಿಂದ ಅನಿತಾ ಕುಮಾರಸ್ವಾಮಿ

ಜೆಡಿಎಸ್​ ಹಾಗೂ ಕಾಂಗ್ರೆಸ್​ ಮೈತ್ರಿ ಮಾಡಿಕೊಂಡಿದ್ದು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೆಂಡತಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ. ಇವರು ಕೂಡಾ ಸೋಮವಾರ ನಾಮಪತ್ರ ಸಲ್ಲಿಕೆ ಮಾಡುತ್ತಾರೆ.

ಐದು ದಿನಗಳ ಹಿಂದೆಯಷ್ಟೇ ಚಂದ್ರಶೇಖರ್​ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದರು. ಇನ್ನು ಚಂದ್ರಶೇಖರ್​ರವರು ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕಾರಣ, ಬಿಜೆಪಿಯು ಆ ಸಮುದಾಯದ ಮತಗಳನ್ನು ಸೆಳೆಯಲು ಈ ತಂತ್ರ ಹೆಣೆದಿದೆ ಎನ್ನಲಾಗಿದೆ. ಇತ್ತ ರುದ್ರೇಶ್​ರನ್ನು ಮನವೊಲಿಸುವಲ್ಲಿಯೂ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.

ಇಕ್ಕಟ್ಟಿಗೆ ಸಿಲುಕಿದ ಸಿ. ಎಂ ಲಿಂಗಪ್ಪ

ಬಿಜೆಪಿಯ ಈ ಕೊನೆಯ ಕ್ಷಣದ ನಿರ್ಧಾರದಿಂದಾಗಿ ಕಾಂಗ್ರೆಸ್​ನ ಹಿರಿಯ ಮುಖಂಡ ಲಿಂಗಪ್ಪನವರು ಇಕ್ಕಟ್ಟಿಗೆ ಸಿಲುಕಿದಂತಾಗುದೆ. ಉಪಚುನಾವಣೆಯಲ್ಲಿ ಮಗನನ್ನು ಬೆಂಬಲಿಸಬೇಕೋ ಅಥವಾ ಕಾಂಗ್ರೆಸ್​, ಜೆಡಿಎಸ್​ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಬೇಕೋ ಎಂದು ತಿಳಿಯದೆ ಒದ್ದಾಡುತ್ತಿದ್ದಾರೆ‌.

ಒಟ್ಟಾರೆಯಾಗಿ ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತಿರುವ ರಾಮನಗರ ಉಪ ಚುನಾವಣೆ ಭಾರೀ ಕುತೂಹಲ ಕೆರಳಿಸಿದೆ. ಮೈತ್ರಿ ಹಾಗೂ ಕಮಲ ಪಾಳಯಗಳೆರಡೂ ಗೆಲುವಿಗಾಗಿ ಇಲ್ಲದ ಕಸರತ್ತು ನಡೆಸುತ್ತಿವೆ. ಅದೇನಿದ್ದರೂ ನವೆಂಬರ್ 3 ರಂದು ನಡೆಯುವ ಈ ಚುನಾವಣೆಯಲ್ಲಿ ಮತದಾರ ಯಾರಿಗೆ ಬೆಂಬಲ ನೀಡುತ್ತಾನೆ ಎಂಬುವುದನ್ನು ಕಾದು ನೋಡಬೇಕಷ್ಟೇ.

Comments are closed.