ಕರ್ನಾಟಕ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಕಳವು ಮಾಡಿದ ಬೈಕ್‌ ಕೊಟ್ಟವನ ಬಂಧನ

Pinterest LinkedIn Tumblr


ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಹಿನ್ನೆಲೆಯಲ್ಲಿ ಆರೋಪಿಗಳು ಓಡಾಡಲು ಮತ್ತು ಕೊಲೆ ನಡೆದ ದಿನ ಬಳಸಲಾಗಿದ್ದ ಬೈಕ್‌ ಒದಗಿಸಿದ್ದ ಮಹಾರಾಷ್ಟ್ರ ಮೂಲದ ಆರೋಪಿ ವಾಸುದೇವ್‌ ಸೂರ್ಯವಂಶಿ (29) ಎಂಬಾತನನ್ನು ಬಂಧಿಸಿದ್ದಾರೆ.

ಶಸ್ತ್ರಾಸ್ತ್ರ ಪ್ರಕರಣದಲ್ಲಿ ವಾಸುದೇವ್‌ನನ್ನು ಮಹಾರಾಷ್ಟ್ರ ಎಟಿಎಸ್‌ ಪೊಲೀಸರು ಜಲಗಾಂವ್‌ನಲ್ಲಿ ಸೆ.10ರಂದು ಬಂಧಿಸಿದ್ದರು. ಡಾ.ಧಾಬೋಲ್ಕರ್‌ ಹತ್ಯೆ ಪ್ರಕರಣದಲ್ಲಿ ಸಿಬಿಐ ಕೂಡಾ ವಾಸುದೇವ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಾಡಿ ವಾರೆಂಟ್‌ ಮೇಲೆ ಎಸ್‌ಐಟಿ ಪೊಲೀಸರು ವಶಕ್ಕೆ ಪಡೆದು ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ಕಾಲ ಎಸ್‌ಐಟಿ ವಶಕ್ಕೆ ಪಡೆಯಲಾಗಿದೆ.

ಜುಲೈ ಕೊನೆ ವಾರದಲ್ಲಿ ಸೀಗೆಹಳ್ಳಿಯಲ್ಲಿ ತುಮಕೂರು ಮೂಲದ ಸಿವಿಲ್‌ ಗುತ್ತಿಗೆದಾರ ಸುರೇಶ್‌ ಕುಮಾರ್‌ ಎಂಬುವರನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದರು. ಗೌರಿ ಮನೆ ವಿಳಾಸ ಹುಡುಕಲು ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕ್‌ಗಾಗಿ ಪೊಲೀಸರು ಬೆನ್ನತ್ತಿದ್ದರು. ಆದರೆ, ಕೃತ್ಯಕ್ಕೆ ಬಳಸಿದ್ದ ಬೈಕ್‌ ಎಲ್ಲಿದೆ ಎಂಬುದನ್ನೂ ಪೊಲೀಸರು ಕಲೆ ಹಾಕುತ್ತಿದ್ದಾರೆ.

ಕೋಡ್‌ ಹೆಸರು ಮೆಕ್ಯಾನಿಕ್‌

ಪ್ರಮುಖ ಆರೋಪಿ ಕಾಳೆ ಬಳಿ ಪತ್ತೆಯಾದ ಡೈರಿಯಲ್ಲಿ ವಾಸುದೇವ್‌ನ ಕುರಿತು ಸುಳಿವು ಇತ್ತು. ಆತನ ಫೋನ್‌ ನಂಬರ್‌ ಬರೆದು ಮೆಕ್ಯಾನಿಕ್‌ ಎಂಬ ಕೋಡ್‌ ಹೆಸರಿನಿಂದ ಕರೆಯಲಾಗುತ್ತಿತ್ತು. ಕಾಳೆ ಬಂಧನ ನಂತರ ಮೊಬೈಲ್‌ ನಂಬರ್‌ ಸ್ವಿಚ್‌ ಆಫ್‌ ಮಾಡಿಕೊಂಡಿಂದ್ದ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಧಾಬೋಲ್ಕರ್‌ ಪ್ರಕರಣದಲ್ಲಿ ಶರದ್‌ ಕಲಸ್ಕರ್‌ನಿಂದ ಬೈಕ್‌ವೊಂದನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಆಗ ಗೌರಿ ಹತ್ಯೆಗೆ ಬಳಸಲಾಗಿತ್ತು ಎಂದು ತಿಳಿಸಿದ್ದಾನೆ. ಆದರೆ, ಆ ಬೈಕ್‌ ಒರ್ವ ಗ್ಯಾರೇಜ್‌ ಮೆಕ್ಯಾನಿಕ್‌ಗೆ ಸೇರಿದ್ದೆಂದು ತಿಳಿಸಿದ್ದ. ಬಳಿಕ ಕಾಳೆ ಡೈರಿಯಲ್ಲಿ ಮಾಡಿದ್ದ ಎಂಟ್ರಿ ಆಧರಿಸಿ ವಾಸುದೇವ್‌ನನ್ನು ಗೌರಿ ಹತ್ಯೆ ಕೇಸ್‌ನಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Comments are closed.