ಕರ್ನಾಟಕ

ಸೌತ್ ಏಷ್ಯಾ ಲಾಡ್ಲಿ ಮೀಡಿಯಾ ಪ್ರಶಸ್ತಿಯ ಪಡೆದ ಪ್ರಜಾವಾಣಿಯ ಪತ್ರಕರ್ತ ರಾಜೇಶ್ ರೈ ಚಟ್ಲ

Pinterest LinkedIn Tumblr


ಬೆಂಗಳೂರು: ಲೈಂಗಿಕ ಕಾರ್ಯಕರ್ತೆಯರ ಬದುಕಿನ ಬವಣೆ ಮತ್ತು ಸೂಕ್ಷ್ಮತೆಗಳ ಬಗ್ಗೆ ವಿಶೇಷ ವರದಿಗಳನ್ನ ಬರೆದಿದ್ದ ಪ್ರಜಾವಾಣಿಯ ಮುಖ್ಯ ವರದಿಗಾರ ರಾಜೇಶ್ ರೈ ಚಟ್ಲ ಅವರಿಗೆ ಪ್ರತಿಷ್ಠಿತ ದಕ್ಷಿಣ ಏಷ್ಯಾ ಲಾಡ್ಲಿ ಮೀಡಿಯಾ ಅವಾರ್ಡ್ ಲಭಿಸಿದೆ. ಮುಂಬೈನಲ್ಲಿ ಇದೆ ಶುಕ್ರವಾರ ರಾತ್ರಿ ನಡೆದ ಸಮಾರಂಭದಲ್ಲಿ ‘ದಿ ಪ್ರಿಂಟ್’ನ ಮುಖ್ಯ ಸಂಪಾದಕ ಶೇಖರ್ ಗುಪ್ತಾ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಪಾಪುಲೇಶನ್ ಫಸ್ಟ್ ಸಂಸ್ಥೆಯ ಕಾರ್ಯಕಾರಿ ಟ್ರಸ್ಟಿ ಎಸ್.ವಿ. ಸಿಸ್ಟಾ ಹಾಗೂ ನಿರ್ದೇಶಕಿ ಡಾ| ಎ.ಎಲ್. ಶಾರದಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಾಜೇಶ್ ರೈ ಸೇರಿ ಒಟ್ಟು 13 ಮಂದಿಗೆ ಸೌಥ್ ಏಷ್ಯಾ ಲಾಡ್ಲಿ ಮೀಡಿಯಾ ಪ್ರಶಸ್ತಿ ಲಭಿಸಿತು. ಈ ಪ್ರತಿಷ್ಠಿತ ಪ್ರಶಸ್ತಿ ಕನ್ನಡ ಮಾಧ್ಯಮದವರಿಗೆ ಸಿಕ್ಕಿದ್ದು ಇದೇ ಮೊದಲ ಬಾರಿಯಾಗಿದೆ.

ಮುಂಬೈನ ‘ಪಾಪುಲೇಶನ್ ಫಸ್ಟ್’ ಸಂಸ್ಥೆ ಹಾಗೂ ಇಂಟರ್​ನ್ಯಾಷನಲ್ ಅಡ್ವರ್ಟೈಸಿಂಗ್ ಅಸೋಸಿಯೇಶನ್(ಐಎಎ) ಜಂಟಿಯಾಗಿ ಈ ವಾರ್ಷಿಕ ಪ್ರಶಸ್ತಿಗಳನ್ನು ನೀಡುತ್ತಾ ಬಂದಿವೆ. ಎಲೆಕ್ಟ್ರಾನಿಕ್, ಪತ್ರಿಕೆ, ವೆಬ್, ಬ್ಲಾಗ್ ಮೊದಲಾದ ಮಾಧ್ಯಮಗಳಲ್ಲಿ ಮಹಿಳೆಯರಿಗೆ ಆಗುತ್ತಿರುವ ಲಿಂಗಭೇದದ ವಿರುದ್ಧ ಮಾಡಲಾದ ವಿಶೇಷ ಲೇಖನ, ವರದಿಗಳನ್ನ ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.

ಇದೇ ವೇಳೆ, ಈ ಎರಡು ಸಂಸ್ಥೆಗಳು 2006ರಿಂದಲೂ ಲಾಡ್ಲಿ ಮೀಡಿಯಾ ಪ್ರಶಸ್ತಿಗಳನ್ನು ನೀಡುತ್ತಾ ಬಂದಿವೆ. ಕಳೆದ ತಿಂಗಳಷ್ಟೇ ಕನ್ನಡ ಮಾಧ್ಯಮದ ಇಬ್ಬರು ಸೇರಿ ಒಟ್ಟು 86 ಮಂದಿಗೆ ಲಾಡ್ಲಿ ಮೀಡಿಯಾ ಪ್ರಶಸ್ತಿ ನೀಡಲಾಗಿತ್ತು. ರಾಜೇಶ್ ರೈ ಚಟ್ಲ ಹಾಗೂ ಸ್ತ್ರೀ ಜನಜಾಗೃತಿ ನಿಯತಕಾಲಿಕೆಯ ಮಂಜುಳಾ ರಾಜ್ ಅವರಿಗೆ ಪ್ರಶಸ್ತಿ ಸ್ವೀಕರಿಸಿದ್ದರು.

ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ರಾಜೇಶ್ ರೈ ಚಟ್ಲ ವಿಶೇಷ ವರದಿಗಳು:

ಪ್ರಜಾವಾಣಿಯ ಮುಖ್ಯವರದಿಗಾರರಾಗಿರುವ ರಾಜೇಶ್ ರೈ ಚಟ್ಲ ಅವರು ಕರ್ನಾಟಕದಲ್ಲಿರುವ ಲೈಂಗಿಕ ಕಾರ್ಯಕರ್ತೆಯರ ಆರೋಗ್ಯ, ಸುರಕ್ಷತೆ, ಕಳ್ಳಸಾಗಣೆ ಇತ್ಯಾದಿ ವಿಚಾರಗಳ ವಸ್ತುಸ್ಥಿತಿಯನ್ನು ತಮ್ಮ ಸರಣಿ ಲೇಖನಗಳಿಂದ ಪ್ರಸ್ತುಪಡಿಸಿದ್ದರು. ಕರ್ನಾಟಕ ಸರಕಾರ ರಚಿಸಿದ ಸಮಿತಿಯೊಂದು ಲೈಂಗಿಕ ಕಾರ್ಯಕರ್ತೆಯರ ಬದುಕನ್ನು ಅಧ್ಯಯನ ನಡೆಸಿತ್ತು. ಆ ಸಮಿತಿಯ ವರದಿಯ ಅಂಶಗಳನ್ನು ಆಧಾರವಾಗಿಟ್ಟುಕೊಂಡು ರಾಜೇಶ್ ಅವರು ಮನೋಜ್ಞವಾಗಿ ಲೇಖನಗಳನ್ನ ಬರೆದಿದ್ದರು. ಇದು ಅವರಿಗೆ ದಕ್ಷಿಣ ಏಷ್ಯಾ ಲಾಡ್ಲಿ ಮೀಡಿಯಾ ಅವಾರ್ಡ್ ತಂದುಕೊಟ್ಟಿದೆ.

ಲಿಂಗತಾರತಮ್ಯ ವಿರುದ್ಧ ಮಂಜುಳಾ ರಾಜ್ ಹೋರಾಟ:

ಮತ್ತೊಬ್ಬ ಪ್ರಶಸ್ತಿ ಸ್ವೀಕೃತ ವ್ಯಕ್ತಿ ಮಂಜುಳಾ ರಾಜ್ ಅವರು ಸ್ತ್ರೀ ಜಾಗೃತಿ ಎಂಬ ನಿಯತಕಾಲಿಕೆಯಲ್ಲಿ ಸ್ತ್ರೀ ಸಂವೇದನೆ ಬಗ್ಗೆ ವಿಶೇಷ ಲೇಖನಗಳನ್ನು ಬರೆದು ಹೆಸರು ಮಾಡಿದವರಾಗಿದ್ದಾರೆ. ಲಿಂಗ ತಾರತಮ್ಯ ನೀಗಬೇಕಾದರೆ ಮಹಿಳೆಯರು ಪುರುಷರೊಂದಿಗೆ ಕೂಡಿ ಸರಿಸಮಾನವಾಗಿ ಕೆಲಸ ಮಾಡಿ ತೋರಿಸಬೇಕು ಎಂಬುದು ಅವರ ಪ್ರತಿಪಾದನೆ. ಮಹಿಳೆಯರಿಗೆ ಶಿಕ್ಷಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ನಾರಿಯರ ಮಾಸಿಕ ಸಮಸ್ಯೆಯಾದ ಋತುಸ್ರಾವದ ಬಗ್ಗೆಯೂ ವಿಶೇಷ ಅಸ್ಥೆ ಹೊಂದಿರುವ ಅವರು ಪರಿಸರಸ್ನೇಹಿ ಪ್ಯಾಡ್​ಗಳ ಬಳಕೆ ಬಗ್ಗೆಯೂ ತಮ್ಮ ಲೇಖನಗಳಲ್ಲಿ ಜನಜಾಗೃತಿ ಮೂಡಿಸುತ್ತಾರೆ. ಪ್ರಸ್ತುತ “ಬೆಂಕಿಯನ್ನು ಮುಟ್ಟಿದರೆ ಕೈ ಸುಟ್ಟು ಹೋದೀತು ಜೋಕೆ” ಎಂಬ ಅವರ ವಿಶೇಷ ಲೇಖನವೊಂದಕ್ಕೆ ಲಾಡ್ಲಿ ಮೀಡಿಯಾ ಅವಾರ್ಡ್ ಲಭಿಸಿದೆ.

Comments are closed.