ಕರ್ನಾಟಕ

ಅಪ್ರಾಪ್ತ ವಯಸ್ಸಿನ ಆಟಗಾರ್ತಿಯೊಂದಿಗೆ ಅಸಭ್ಯ ವರ್ತನೆ ಆರೋಪ: ಕಬಡ್ಡಿ ಕೋಚ್ ರುದ್ರಪ್ಪ ಹೊಸಮನಿ ಆತ್ಮಹತ್ಯೆ

Pinterest LinkedIn Tumblr


ಬೆಂಗಳೂರು: ಅಪ್ರಾಪ್ತ ವಯಸ್ಸಿನ ಆಟಗಾರ್ತಿಯೊಂದಿಗೆ ಅಸಭ್ಯ ವರ್ತಿಸಿದ ಆರೋಪ ಹೊತ್ತು ಅಮಾನತುಗೊಂಡಿದ್ದ ಮಹಿಳಾ ಕಬಡ್ಡಿ ಕೋಚ್ ರುದ್ರಪ್ಪ ವಿ. ಹೊಸಮನಿ ಅವರು ದಾವಣಗೆರೆ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಎಂ.ಎಸ್. ಲಾಡ್ಜ್​ನಲ್ಲಿ ರುದ್ರಪ್ಪ ನೇಣುಬಿಗಿದುಕೊಂಡು ಸಾವನ್ನಪ್ಪಿರುವುದು ಗೊತ್ತಾಗಿದೆ. ಮೂರು ದಿನಗಳ ಹಿಂದೆಯೇ ಈ ಘಟನೆ ನಡೆದರೂ ಇವತ್ತು ಪ್ರಕರಣ ಬೆಳಕಿಗೆ ಬಂದಿದೆ. ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೈದ ರುದ್ರಪ್ಪ ಹೊಸಮನಿ ಅವರು ಪತ್ನಿ ಹಾಗೂ ಒಬ್ಬ ಮಗನನ್ನು ಅಗಲಿದ್ದಾರೆ.

ಬೆಂಗಳೂರಿನ ಸಾಯ್ ಕೇಂದ್ರ(ಎಸ್​ಎಐ)ದಲ್ಲಿ ಮಹಿಳೆಯರಿಗೆ ಕಬಡ್ಡಿ ತರಬೇತುದಾರರಾಗಿದ್ದ ರುದ್ರಪ್ಪ ಹೊಸಮನಿ ಅಕ್ಟೋಬರ್ 9ರಂದ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದರೆನ್ನಲಾಗಿದೆ. ಜ್ಞಾನಭಾರತಿ ಠಾಣೆ ಪೊಲೀಸರು ಕೊಟ್ಟಿರುವ ಮಾಹಿತಿ ಪ್ರಕಾರ, ಅಂದು ಸಾಯ್ ಕೇಂದ್ರದ ಎಲ್ಲಾ ಕೋಚ್​ಗಳು ಮತ್ತು ಅಥ್ಲೀಟ್​ಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಗ ಲಾಕರ್ ರೂಮಿನಲ್ಲಿ 13 ವರ್ಷದ ಬಾಲಕಿಯು ಬಟ್ಟೆ ಬದಲಿಸುವಾಗ ರುದ್ರಪ್ಪ ಇಣುಕಿ ನೋಡುತ್ತಾರೆ. ಇದು ಗೊತ್ತಾಗಿ ಆ ಹುಡುಗಿ ಭಯಗೊಂಡು ಚೀರುತ್ತಾ ಹೊರಗೆ ಓಡುತ್ತಾಳೆ. ಬಳಿಕ ತನ್ನ ತಾಯಿಗೆ ಕರೆ ಮಾಡಿ ವಿಷಯ ತಿಳಿಸುತ್ತಾಳೆ. ಕೂಡಲೇ ಆ ಬಾಲಕಿಯ ತಂದೆ ಹಾಗೂ ಚಿಕ್ಕಪ್ಪ ಆಗಮಿಸಿ ರುದ್ರಪ್ಪರ ಮೇಲೆ ಹಲ್ಲೆ ಮಾಡುತ್ತಾರೆ. ನಂತರ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಬಾಲಕಿಯಿಂದ ಲಿಖಿತ ದೂರು ಕೊಡಿಸುತ್ತಾರೆ. ಆ ಸಂದರ್ಭದಲ್ಲಿ ರುದ್ರಪ್ಪ ಹೊಸಮನಿ ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ.

ವಿದ್ಯಾರ್ಥಿನಿಯಿಂದ ದೂರು ಬಂದ ನಂತರ ಭಾರತೀಯ ಕ್ರೀಡಾ ಪ್ರಾಧಿಕಾರವು ರುದ್ರಪ್ಪರನ್ನು ಅಮಾನತು ಮಾಡಿ ದೆಹಲಿಯ ಕಚೇರಿಗೆ ಹೋಗುವಂತೆ ಆದೇಶ ನೀಡಿತ್ತು.

ತಾನು ದೆಹಲಿಗೆ ಹೋಗುತ್ತಿರುವುದಾಗಿ ತನ್ನ ಕುಟುಂಬದವರಿಗೆ ತಿಳಿಸಿ ಹೊರಟಿದ್ದ ರುದ್ರಪ್ಪ ವಿ. ಹೊಸಮನಿ ಅವರು ಮೂರು ದಿನಗಳ ಹಿಂದೆ ಹರಿಹರದ ಎಂ.ಎಸ್. ಲಾಡ್ಜ್​ನಲ್ಲಿ ರೂಮ್ ಬುಕ್ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಅವರು ಅಲ್ಲಿಗೆ ಹೋಗಿರುವ ಶಂಕೆ ಇದೆ. ಅವರು ಬರೆದ ಡೆತ್​ನೋಟ್​ನಲ್ಲಿ ತನ್ನ ಪತ್ನಿ, ಮಗನ ಬಳಿ ಕ್ಷಮೆ ಕೋರಿದ್ದಾರೆ. ತನ್ನ ಸಹೋದ್ಯೋಗಿಗಳಿಗೆ ಶುಭ ಹಾರೈಸಿದ್ದಾರೆ. ಆದರೆ, ತನ್ನ ಮೇಲಿನ ಲೈಂಗಿಕ ಕಿರುಕುಳ ಆರೋಪಗಳಿಗೆ ಯಾವ ಸ್ಪಷ್ಟನೆಯನ್ನೂ ಅವರು ನೀಡಿಲ್ಲ.

ಡೆತ್​ನೋಟ್​ನಲ್ಲೇನಿದೆ..?

ದೇವಿಕಾ, ರಾಕೇಶ್,

ನನ್ನ ಕ್ಷಮಿಸಿ. ನಿಮಗೆ ಬಹಳ ತೊಂದರೆ ಮಾಡಿದೆ. ಮೊಬೈಲ್ ಇಲ್ಲ, ನನ್ನ ಪರ್ಸಲ್ಲಿ ನಿಮ್ಮಿಬ್ಬರ ಫೋಟೋನೂ ಇಲ್ಲ. ಬಹಳ ಬಹಳ ನೋಡಬೇಕೆನಿಸಿತ್ತು.

ರಾಕೇಶ, ಅಮ್ಮನ ಕಾಳಜಿ ತಗೋ. ನಿನ್ನ ಕೆಲಸದಲ್ಲಿ ಇನ್ನೂ ವೇಗವಾಗಿ, ದೃಢವಾಗಿ ಮುಂದುವರೆ. ದೇವರು ಒಳ್ಳೆಯದು ಮಾಡುತ್ತಾನೆ.

ನನ್ನ ಆತ್ಮೀಯ ಬಂಧುಗಳಿಗೆ ಹಾಗೂ ನನ್ನ ಆತ್ಮೀಯ ಗೆಳೆಯವರಿಗೆ ನನ್ನ ಧನ್ಯವಾದಗಳು.

ನಿಮಗೆ ತೊಂದರೆ ಆಗಿದೆ. ದಯವಿಟ್ಟು ಕ್ಷಮಿಸಿ. ನನ್ನ ದೇಹವನ್ನು ಯಾವುದಾದರೂ ಆಸ್ಪತ್ರೆಗೆ ದಾನ ಮಾಡಿ.

ಹೀಗೆಂದು ರುದ್ರಪ್ಪ ವಿ. ಹೊಸಮನಿ ಅವರು ಬರೆದಿದ್ದಾರೆ. ಅದರ ಕೆಳಗೆ 7 ಮೊಬೈಲ್ ನಂಬರ್​ಗಳನ್ನ ಪಟ್ಟಿ ಮಾಡಿದ್ದಾರೆ. ಅದರ ಕೆಳಗೆ ತಮ್ಮ ಸಾಯ್ ಕೇಂದ್ರ ಸಹೋದ್ಯೋಗಿಗಳು ಹಾಗೂ ಟ್ರೈನಿಗಳಿಗೆ ಇಂಗ್ಲೀಷ್​ನಲ್ಲಿ ಧನ್ಯವಾದಗಳನ್ನ ಬರೆದು ತಿಳಿಸಿದ್ದಾರೆ. ಆರ್​.ಡಿ. ಎಂಬುವವರಲ್ಲಿ ಕ್ಷಮೆಯನ್ನೂ ಕೋರಿದ್ಧಾರೆ. ತನ್ನ ಟ್ರೈನಿಗಳಿಗೆ ಭವಿಷ್ಯದಲ್ಲಿ ಒಳ್ಳೆಯದಾಗಲಿ ಎಂದು ಶುಭಹಾರೈಸಿದ್ದಾರೆ.

Comments are closed.