ಕರ್ನಾಟಕ

ಮೃತ ದೇಹಕ್ಕೆ ಚಿಕಿತ್ಸೆ: ಕುಟುಂಬ ಸದಸ್ಯರ ಪ್ರತಿಭಟನೆಗೆ ಮಣಿದು ಶವ ನೀಡಿದ ಆಸ್ಪತ್ರೆ!

Pinterest LinkedIn Tumblr


ಬೆಂಗಳೂರು: ಹಣಕ್ಕಾಗಿ ಮೃತದೇಹಕ್ಕೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎನ್ನುವ ಆರೋಪ ನಗರದ ಖಾಸಗಿ ಆಸ್ಪತ್ರೆಯ ಮೇಲೆ ಬಂದಿದೆ.

ಚಿಕಿತ್ಸೆಯ ನೆಪವೊಡ್ಡಿ, ಬರೋಬ್ಬರಿ 17 ದಿನಗಳ ಕಾಲ ದಾಖಲಿಸಿಕೊಂಡು ಚಾಮರಾಜಪೇಟೆಯ ಬೃಂದಾವನ್ ಏರಿಯಾನ್ ಆಸ್ಪತ್ರೆ ಹಣ ದೋಚಲು ಮುಂದಾಗಿದೆ ಎಂದು ಮೃತ ವ್ಯಕ್ತಿಯ ಸಂಬಂಧಿಕರು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಆಡಳಿತ ಮಂಡಳಿ ಚಿಕಿತ್ಸೆಯ ವೆಚ್ಚವನ್ನು ಪಡೆಯದೇ ಮೃತ ದೇಹವನ್ನು ನೀಡಿ ರಾಜಿ ಮಾಡಿಕೊಂಡಿದೆ.

ಏನಿದು ಪ್ರಕರಣ?:
ಚನ್ನಪಟ್ಟಣ ಮೂಲದ ಬುಕ್ಕಸಾಗರ ನಿವಾಸಿ ಮಹದೇವಪ್ಪ (46) ಎಚ್1 ಎನ್1 ಗೆ ತುತ್ತಾಗಿ ಇದೇ ತಿಂಗಳು 1ರಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದರು. ಚಿಕಿತ್ಸೆ ಪಡೆದ ಅವರು 5 ದಿನಕ್ಕೆ ಚೇತರಿಕೆಗೊಂಡಿದ್ದರೂ, ಆಸ್ಪತ್ರೆಯ ಸಿಬ್ಬಂದಿ ಕುಂಟು ನೆಪ ಹೇಳಿ ಚಿಕಿತ್ಸೆ ಮುಂದುವರಿಸಿದ್ದರು. ಬೆಡ್ ಮೇಲೆ ಕಟ್ಟಿ ಅನಸ್ತೇಶಿಯಾ ನೀಡಿ ಚಿಕಿತ್ಸೆ ನೀಡುವುದಾಗಿ ಹೇಳಿದ್ದರು.

ಈ ಸಂದರ್ಭದಲ್ಲಿ ರೋಗಿಯನ್ನು ಮಾತನಾಡಿಸಲು ಬಿಡದೇ ಬರೋಬ್ಬರಿ 17 ದಿನಗಳ ಕಾಲ ಚಿಕಿತ್ಸೆ ನೀಡಿದ್ದಾರೆ. ರೋಗಿಯನ್ನು ಮಾತನಾಡಿಸಲು ಮುಂದಾಗುತ್ತಿದ್ದಂತೆ ತಡೆಯುತ್ತಿದ್ದ ವೈದ್ಯರು, ನಿಮ್ಮವರು ಚೆನ್ನಾಗಿದ್ದಾರೆ. ತೊಂದರೆ ಕೊಡಬೇಡಿ ಅಂತಾ ಸೂಚನೆ ನೀಡಿದ್ದಾರೆ. ವೈದ್ಯರ ಮಾತಿಗೆ ಬೆಲೆ ನೀಡಿ ಸಂಬಂಧಿಕರು ಮಹದೇವಪ್ಪ ಹುಷಾರಾಗುತ್ತಿದ್ದಾರೆ ಎಂದೇ ನಂಬಿದ್ದರು. ಆದರೆ ಇಂದು ಬೆಳಗ್ಗೆ ನಾಲ್ಕು ಗಂಟೆಗೆ ಫೋನ್ ಮಾಡಿ, ಮಹದೇವಪ್ಪ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಸಂಬಂಧಿ ರಘುಸ್ವಾಮಿ ದೂರಿದ್ದಾರೆ.

ಮೃತಪಟ್ಟ ವಿಚಾರ ತಿಳಿದ ಕುಟುಂಬಸ್ಥರು ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಇದನ್ನು ಅರಿತ ಆಸ್ಪತ್ರೆಯ ಸಿಬ್ಬಂದಿ, ಮಹದೇವಪ್ಪ ಚೆನ್ನಾಗಿದ್ದಾರೆ. ನೀವು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿ ಮನವೊಲಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಮಹಾದೇವಪ್ಪ ಸಹೋದರಿ ಆಸ್ಪತ್ರೆ ಸಿಬ್ಬಂದಿಗೆ ಫುಲ್ ಜಾರ್ಜ್ ತೆಗೆದುಕೊಂಡಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಆಸ್ಪತ್ರೆ ಸಿಬ್ಬಂದಿ ಪರೋಕ್ಷವಾಗಿ ತಪ್ಪೊಪ್ಪಿಕೊಂಡು, ರಾಜಿ ಮಾಡಿಕೊಂಡು ಚಿಕಿತ್ಸೆ ಚಾರ್ಜ್ ಪಡೆಯದೇ ಶವ ನೀಡಿದ್ದಾರೆ.

Comments are closed.