ಕರ್ನಾಟಕ

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ: ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ, ಹೀಗಾಗಿ ನನ್ನನ್ನು ಟಾರ್ಗೆಟ್‌ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಸಚಿವ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಅಂದಿನ ಸರಕಾರ ತೆಗೆದುಕೊಂಡ ಸರ್ವಾನುಮತದ ನಿರ್ಣಯಕ್ಕೂ, ಕಾಂಗ್ರೆಸ್‌ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಇದರಿಂದ ಚುನಾವಣಾ ಫಲಿತಾಂಶದ ಮೇಲೆ ದುಷ್ಪರಿಣಾಮವುಂಟಾಯಿತು ಎಂಬುದನ್ನು ನಾನು ಒಪ್ಪಿಕೊಳ್ಳುವುದಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.

ಈ ನಿರ್ಣಯ ತೆಗೆದುಕೊಳ್ಳುವಾಗ ಸಂಪುಟದಲ್ಲಿ ಡಿ.ಕೆ. ಶಿವಕುಮಾರ್‌, ಎಂ.ಬಿ.ಪಾಟೀಲ್‌, ವಿನಯ್‌ ಕುಲಕರ್ಣಿ, ಎಸ್‌.ಎಸ್‌.ಮಲ್ಲಿಕಾರ್ಜುನ ಎಲ್ಲರೂ ಇದ್ದರು. ಸರ್ವಾನುಮತದ ನಿರ್ಣಯ ಎಂದ ಮೇಲೆ ಸಂಪುಟದ ಎಲ್ಲಾ ಸಚಿವರೂ ಅದರ ಭಾಗ. ಹೀಗಾಗಿ ಕೆಲವರು ತೆಗೆದುಕೊಂಡ ನಿರ್ಣಯ ಎಂದು ಯಾರೂ ಹೇಳುವಂತಿಲ್ಲ. ಈ ವಿಚಾರದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಯಾವುದೇ ಜಾತಿ ಅಥವಾ ಧರ್ಮವನ್ನು ಒಡೆಯುವ ಉದ್ದೇಶಕ್ಕಾಗಿ ಈ ಪ್ರಸ್ತಾಪವನ್ನು ಕೇಂದ್ರಕ್ಕೆ ಕಳುಹಿಸಿಲ್ಲ. ಈ ಕಾರಣಕ್ಕಾಗಿ ನನ್ನ ತೇಜೋವಧೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಾನು ತಪ್ಪೇ ಮಾಡಿಲ್ಲ ಎಂದಾದ ಮೇಲೆ ನನ್ನನ್ನು ಯಾರ್ರೀ ಟಾರ್ಗೆಟ್‌ ಮಾಡ್ತಾರೆ ? ಎಂದು ಪ್ರಶ್ನಿಸಿದರು.

ಸಂಬಂಧವಿಲ್ಲ
ಡಿ.ಕೆ.ಶಿವಕುಮಾರ್‌ ಈ ಸಂದರ್ಭದಲ್ಲಿ ಯಾಕೆ ಈ ಮಾತುಗಳನ್ನು ಆಡಿದರು ಎಂಬುದು ನನಗೆ ಗೊತ್ತಿಲ್ಲ. ಅದು ಅವರ ವೈಯಕ್ತಿಕ ಹೇಳಿಕೆಯಾಗಿರಬಹುದು. ಅಂದಿನ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳುವಾಗ ಏನೇನು ಚರ್ಚೆಯಾಯ್ತು ? ಡಿ.ಕೆ.ಶಿವಕುಮಾರ್‌ ಸಂಪುಟ ಸಭೆಯಲ್ಲಿ ಏನು ಮಾತನಾಡಿದರು ಎಂಬುದನ್ನೆಲ್ಲ ಬಹಿರಂಗಗೊಳಿಸಲು ಸಾಧ್ಯವೇ ? ಸಂಪುಟ ಸಭೆಯಲ್ಲಿ ಸರ್ವಾನುಮತದಿಂದ ತೆಗೆದುಕೊಂಡ ನಿರ್ಣಯವೆಂದ ಮೇಲೆ ಅದು ಸರಕಾರದ ನಿರ್ಧಾರ. ಇದರಲ್ಲಿ ವೈಯಕ್ತಿಕ ನಿಲುವುಗಳ ಪ್ರಶ್ನೆ ಬರುವುದಿಲ್ಲ. ಸಂಪುಟ ಸಭೆಯಲ್ಲಿ ಏನೇನು ನಡೆಯಿತು ಎಂಬ ಬಗ್ಗೆ ಮಾಜಿ ಸಚಿವ ಎಂ.ಬಿ.ಪಾಟೀಲ್‌ ಈಗಾಗಲೇ ಮಾತನಾಡಿದ್ದಾರೆ ಎಂದರು.

ಜಮಖಂಡಿ ಹಾಗೂ ಬಳ್ಳಾರಿ ಕ್ಷೇತ್ರದಲ್ಲಿ ವೀರಶೈವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂಬ ಕಾರಣಕ್ಕೆ ಶಿವಕುಮಾರ್‌ ಈ ಹೇಳಿಕೆ ನೀಡಿದ್ದಾರೆಯೇ ? ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಎಂಟು ತಿಂಗಳು ಹಿಂದೆ ನಾವು ತೆಗೆದುಕೊಂಡ ನಿರ್ಧಾರಕ್ಕೂ, ಈ ಉಪ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಡಿ.ಕೆ.ಶಿವಕುಮಾರ್‌ ಏಕೆ ಈ ಹೇಳಿಕೆ ನೀಡಿದರು ಎಂಬ ಬಗ್ಗೆ ನೀವು ಅವರನ್ನೇ ಪ್ರಶ್ನಿಸಿ ಎಂದರು.

ಮಾಧ್ಯಮದ ಮೇಲೆ ಗರಂ
ದೇವೇಗೌಡರ ಜತೆ ಜಂಟಿ ಸುದ್ದಿಗೋಷ್ಠಿ ನಡೆಸುವ ಸಂದರ್ಭದಲ್ಲೇ ಸುದ್ದಿಗಾರರು ಈ ಬಗ್ಗೆ ಪ್ರಶ್ನಿಸಿದಾಗ ಸಿಟ್ಟಿಗೆದ್ದ ಸಿದ್ದರಾಮಯ್ಯ, ‘ನಾನು ಈ ವೇದಿಕೆಯಲ್ಲಿ ಈ ಬಗ್ಗೆ ಉತ್ತರ ನೀಡುವುದಿಲ್ಲ. ಡಿ.ಕೆ.ಶಿವಕುಮಾರ್‌ ಹೇಳಿಕೆ ಬಗ್ಗೆ ನಾನು ಪ್ರತ್ಯೇಕವಾಗಿ ಮಾತನಾಡುತ್ತೇನೆ’ ಎಂದರು. ಇದಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಪ್ರತಿ ಪ್ರಶ್ನೆಗೂ ಕೋಪದಿಂದಲೇ ಉತ್ತರ ನೀಡಿದರು. ಟಿವಿ ವಾಹಿನಿ ವರದಿಗಾರರು ಪ್ರತ್ಯೇಕ ಚಿಟ್‌ಚಾಟ್‌ಗೆ ಮುಂದಾದಾಗ ಮೈಕ್‌ ತಳ್ಳಿ ಮುಂದೆ ನಡೆದರು.

ಮತ್ತೆ ಹೇಳಿಕೆ ಸಮರ್ಥಿಸಿಕೊಂಡ ಡಿಕೆ
‘ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಸಂಬಂಧ ನಾನು ನೀಡಿರುವ ಹೇಳಿಕೆಗೆ ಈಗಲೂ ಬದ್ಧ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮತ್ತೆ ಪುನರುಚ್ಚರಿಸಿದ್ದಾರೆ.

Comments are closed.