ಬೆಂಗಳೂರು: ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನದಿಂದ ಆಂಗ್ಲ ಭಾಷೆಯಲ್ಲಿರುವ ಯಾವುದೇ ಕಡತಕ್ಕೆ ಸಹಿ ಹಾಕದೆ ವಾಪಸ್ ಕಳಿಸುವ ಮಹತ್ವದ ಹಾಗೂ ದಿಟ್ಟ ತೀರ್ಮಾನವನ್ನು ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾಡಿದ್ದಾರೆ.
‘ಆಡಳಿತದಲ್ಲಿ ಕನ್ನಡ ಬಳಕೆ ಕಡ್ಡಾಯ’ಕ್ಕೆ ಹೊರಡಿಸುತ್ತಿರುವ ಸರಣಿ ಆದೇಶ, ಸುತ್ತೋಲೆಗಳಿಗೆ ವಿಶೇಷವಾಗಿ ಐಎಎಸ್ ಅಧಿಕಾರಿಗಳ ಮಟ್ಟದಲ್ಲಿ ಕಿಮ್ಮತ್ತು ಸಿಗದ ಹಿನ್ನೆಲೆಯಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗಟ್ಟಿ ತೀರ್ಮಾನ ಕೈಗೊಂಡಿದ್ದಾರೆ.
ರಾಜ್ಯದಲ್ಲಿ ಕನ್ನಡ ಭಾಷೆಗೆ ಮೊದಲ ಸ್ಥಾನ ಎಂದು ಮೇಲಿಂದ ಮೇಲೆ ಘೋಷಣೆ ಮಾಡಿ ಸುತ್ತೋಲೆ ಹೊರಡಿಸುತ್ತಿದ್ದರೂ ಐಎಎಸ್ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಬಹಳಷ್ಟು ಐಎಎಸ್, ಐಪಿಎಸ್ ಅಧಿಕಾರಿಗಳು ಕನ್ನಡ ಭಾಷೆ ಬಳಕೆ ಬಗ್ಗೆ ಅಸಡ್ಡೆ ಭಾವನೆ ಹೊಂದಿದ್ದಾರೆ ಎಂಬ ಹಿನ್ನೆಲೆಯಲ್ಲಿ ಸಿಎಂ ಈ ನಿರ್ಧಾರಕ್ಕೆ ಬಂದಿದ್ದಾರೆ. ಕಡತ ಕನ್ನಡ ಭಾಷೆಯಲ್ಲಿದ್ದರೆ ಮಾತ್ರ ಸಹಿ ಮಾಡುವ ತೀರ್ಮಾನದ ಮೂಲಕ ಕನ್ನಡ ಭಾಷಾ ಬಳಕೆಯ ಅನಿವಾರ್ಯತೆ ಸೃಷ್ಟಿಸುವ ಪ್ರಯತ್ನ ಇದಾಗಿದೆ.
”ಇತ್ತೀಚೆಗೆ ಐಎಎಸ್, ಐಪಿಎಸ್‌ನಂತಹ ಅಖಿಲ ಭಾರತ ಸೇವೆಯಲ್ಲಿ ರಾಜ್ಯ ಕೇಡರ್‌ಗೆ ಆಯ್ಕೆಯಾಗುತ್ತಿರುವವರು ಹೊರರಾಜ್ಯದವರೇ ಅಧಿಕ. ಉತ್ತರ ಭಾರತೀಯ ಈ ಅಧಿಕಾರಿಗಳಿಗೆ ಸ್ಥಳೀಯ ಭಾಷೆ, ಜನರ ಬಗ್ಗೆ ಕಾಳಜಿ, ಆಸಕ್ತಿ ಇಲ್ಲ. ಸೇವೆಗೆ ಸೇರಿದ ಆರಂಭದಲ್ಲೇ ಎಸಿ, ಜಿಲ್ಲಾ ಪಂಚಾಯಿತಿ ಸಿಇಒಗಳಾಗಿ ನೇಮಕಗೊಳ್ಳುವ ಈ ಅಧಿಕಾರಿಗಳು ಗ್ರಾಮೀಣ ಭಾಗದ ಜನಸಾಮಾನ್ಯರ ಕಷ್ಟಗಳಿಗೂ ಸ್ಪಂದಿಸುವ ಆಸಕ್ತಿ ತೋರುತ್ತಿಲ್ಲ. ಹೀಗಾಗಿ, ಕನ್ನಡ ಭಾಷಾ ಬಳಕೆಯ ಅನಿವಾರ್ಯತೆ ಸೃಷ್ಟಿಸುವುದು ಸಿಎಂ ಉದ್ದೇಶವಾಗಿದೆ. ಅದಕ್ಕಾಗಿ ನೆರೆಯ ತಮಿಳುನಾಡು ಮಾದರಿಯಲ್ಲಿ ಈ ಪ್ರಯತ್ನ ಆರಂಭಿಸುವ ತೀರ್ಮಾನ ಮಾಡಿದ್ದಾರೆ,” ಎಂದು ಸಿಎಂ ಆಪ್ತ ಮೂಲಗಳು ಖಚಿತಪಡಿಸಿವೆ.
Comments are closed.