ಕರ್ನಾಟಕ

ನಾನ್ಯಾಕೆ ಕ್ಷಮೆ ಕೇಳಬೇಕು ಎಂದ ಶ್ರುತಿ ಹರಿಹರನ್, ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲವೆಂದ ಅರ್ಜುನ್ ಸರ್ಜಾ: ಅಂಬರೀಷ್ ನೇತೃತ್ವದ ಸಭೆ ವಿಫಲ

Pinterest LinkedIn Tumblr


ಬೆಂಗಳೂರು: ಕೋರ್ಟ್ ಕಟಕಟೆಯವರೆಗೂ ಹೋಗಿರುವ ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ನಡುವಿನ ವಿವಾದವನ್ನು ಶಮನ ಮಾಡುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸಂಧಾನ ಪ್ರಯತ್ನ ಸದ್ಯಕ್ಕೆ ಫಲ ಕೊಟ್ಟಿಲ್ಲ. ಚಿತ್ರರಂಗದ ಹಿರಿಯ ಅಂಬರೀಷ್ ನೇತೃತ್ವದಲ್ಲಿ ನಡೆದ 3 ಗಂಟೆಗಳ ಸುದೀರ್ಘ ಸಭೆಯಲ್ಲಿ ವಿವಾದಕ್ಕೆ ಯಾವುದೇ ತಾರ್ಕಿಕ ಅಂತ್ಯ ಸಿಗುವ ಸೂಚನೆ ಸಿಕ್ಕಿಲ್ಲ. ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಅವರನ್ನು ಪ್ರತ್ಯೇಕವಾಗಿ ಮಾತನಾಡಿಸಿ ಅಹವಾಲು ಕೇಳಲಾಯಿತು. ಬಳಿಕ ಇಬ್ಬರನ್ನೂ ಸಮಧಾನ ಮಾಡಿ ಕೈ ಕುಲುಕುವಂತೆ ಕೇಳಲಾಯಿತಾದರೂ ಇಬ್ಬರೂ ಈ ಸಲಹೆಗೆ ಒಪ್ಪಿಕೊಂಡಿಲ್ಲವೆನ್ನಲಾಗಿದೆ.

ಸಭೆಯ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಂಬರೀಷ್, ಈ ಪ್ರಕರಣ ಕೋರ್ಟ್​ನಲ್ಲಿರುವುದರಿಂದ ತಾವು ಹೆಚ್ಚೇನೂ ಮಾಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಒಂದೆಡೆ, ಅರ್ಜುನ್ ಸರ್ಜಾ ಅವರು ಕಾಂಪ್ರೊಮೈಸ್ ಮಾಡಿಕೊಳ್ಳಲು ಸುತಾರಾಂ ಒಪ್ಪಿಕೊಂಡಿಲ್ಲ. ಕೋರ್ಟ್​ನಲ್ಲಿ ಶ್ರುತಿ ಹರಿಹರನ್ ವಿರುದ್ಧ ಹೋರಾಟ ಮಾಡಿಯೇ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇನ್ನೊಂದೆಡೆ, ಶ್ರುತಿ ಹರಿಹರನ್ ಅವರು ಕ್ಷಮೆ ಕೇಳಲು ಸ್ಪಷ್ಟವಾಗಿ ನಿರಾಕರಿಸಿದರು. ನಾಳೆ ಫಿಲಂ ಚೇಂಬರ್​ನಲ್ಲಿ ನಡೆಯುವ ಮತ್ತೊಂದು ಸಭೆಯಲ್ಲಿ ಅಂತಿಮ ನಿರ್ಧಾರ ಬರುವವರೆಗೂ ಕಾಯುತ್ತೇನೆ ಎಂದೂ ಶ್ರುತಿ ತಿಳಿಸಿದರು.

ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲವೆಂದ ಅರ್ಜುನ್ ಸರ್ಜಾ:

ತನ್ನ ತೇಜೋವಧೆ ಮಾಡಲು ಕಾಣದ ಕೈಗಳು ಪ್ರಯತ್ನಿಸುತ್ತಿವೆ. ಯಾಕೆ ಎಂದು ಗೊತ್ತಿಲ್ಲ. ಮುಂದೆ ಎಲ್ಲ ಸತ್ಯವೂ ಹೊರಬರುತ್ತದೆ ಎಂದು ಅರ್ಜುನ್ ಸರ್ಜಾ ಪ್ರತಿಕ್ರಿಯಿಸಿದ್ದಾರೆ. ಫಿಲಂ ಚೇಂಬರ್​ನಲ್ಲಿ ರಾಜಿ ಸಂಧಾನವನ್ನು ನಯವಾಗಿ ತಿರಸ್ಕರಿಸಿದ ಅರ್ಜುನ್ ಸರ್ಜಾ, ತಾನು ಕಾಂಪ್ರೊಮೈಸ್ ಆದರೆ ತನ್ನದೇ ತಪ್ಪಾದಂತಾಗುತ್ತದೆ. ಆ ಕಾರಣಕ್ಕೆ ತಾನು ರಾಜಿ ಮಾಡಿಕೊಳ್ಳುವ ಪ್ರಶ್ನೆಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ತನ್ನೊಬ್ಬನಿಗೆ ನೋವಾಗಿದ್ದರೆ ಮರೆತುಬಿಡುತ್ತಿದ್ದೆ. ಇದು ನನಗೆ ಸಣ್ಣ ವಿಷಯ. ಆದರೆ, ನೋವಾಗಿರುವುದು ನನ್ನ ಕುಟುಂಬ, ಹಿತೈಷಿಗಳು ಹಾಗೂ ಕರ್ನಾಟಕ, ತಮಿಳುನಾಡು, ಕೇರಳದಲ್ಲಿರುವ ನನ್ನ ಅಭಿಮಾನಿಗಳಿಗೆ. ಹೀಗಾಗಿ, ಇದನ್ನು ಇಲ್ಲಿಗೇ ಬಿಡಲು ಸಾಧ್ಯವಿಲ್ಲ. ಇದು ಎಲ್ಲರಿಗೂ ಉದಾಹರಣೆಯಾಗಬೇಕು. ಅಮಾಯಕರು ಇಂಥ ಸಂಚುಗಳಿಗೆ ಬಲಿಯಾಗಬಾರದು ಎಂದು ಅರ್ಜುನ್ ಸರ್ಜಾ ಹೇಳಿದರು.

ಇದೇ ವೇಳೆ, ಮೀ ಟೂ ಅಭಿಯಾನದ ಆಶಯವನ್ನು ಶ್ಲಾಘಿಸಿದ ಅರ್ಜುನ್ ಸರ್ಜಾ, ಇಂಥ ಒಳ್ಳೆಯ ವೇದಿಕೆಯನ್ನು ದುರುಪಯೋಗಿಸಿಕೊಳ್ಳಲಾಗುತ್ತಿದೆ ಎಂದು ವಿಷಾದಿಸಿದರು. ಪ್ರತೀ ಕ್ಷಣವೂ ಅನಾಥ ಹೆಣ್ಮಕ್ಕಳು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಅವರ ಪರವಾಗಿ ಹೋರಾಟ ಮಾಡೋಣ. ಆದರೆ, ಸಿನಿಮಾ ಚಿತ್ರೀಕರಣದಲ್ಲಿ ತನ್ನನ್ನು ಹೀಗೆ ಮುಟ್ಟಿದರು. ಊಟಕ್ಕೆ ಕರೆದರು ಎಂದೆಲ್ಲಾ ಆರೋಪ ಮಾಡುವುದು ಎಷ್ಟು ಸರಿ ಎಂದು ಅರ್ಜುನ್ ಸರ್ಜಾ ಪ್ರಶ್ನಿಸಿದರು.

ನಾನ್ಯಾಕೆ ಕ್ಷಮೆ ಕೇಳಬೇಕು ಎಂದ ಶ್ರುತಿ ಹರಿಹರನ್:

ಅರ್ಜುನ್ ಸರ್ಜಾ ನಂತರ ಮಾಧ್ಯಮಗಳ ಮುಂದೆ ಮಾತನಾಡಿದ ಶ್ರುತಿ ಹರಿಹರನ್, ಒಂದು ಹೆಣ್ಣು ಅನ್ಯಾಯವಾಗಿದೆ ಎಂದರೂ ಆಕೆಯದ್ದೇ ತಪ್ಪು ಎನ್ನುವಷ್ಟರ ಮಟ್ಟಕ್ಕೆ ಸಮಾಜ ತಲುಪಿದೆ ಎಂದು ವಿಷಾದಿಸಿದರು.

ಅರ್ಜುನ್ ಸರ್ಜಾಗೆ ಕ್ಷಮೆ ಕೋರಬೇಕೆಂಬ ಸಲಹೆಯನ್ನು ಸಾರಸಗಟಾಗಿ ತಿರಸ್ಕರಿಸಿದ ನಟಿ, ತಾನ್ಯಾವ ತಪ್ಪು ಮಾಡಿದ್ದೇನೆಂದು ಕ್ಷಮೆ ಕೇಳಬೇಕು. ಒಂದುದು ಹೆಣ್ಣಿಗೆ ಯಾಕೆ ಇಂಥ ಸಮಸ್ಯೆಗಳು..? ನಾನು ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ. ನಾಳೆ ಬೆಳಗ್ಗೆ ಫಿಲಂ ಚೇಂಬರ್​ನವರು ಅವರು ಅಂತಿಮ ನಿರ್ಧಾರ ತಿಳಿಸುತ್ತಾರೆ. ಅಲ್ಲಿಯವರೆಗೂ ಕಾಯುತ್ತೇನೆ ಎಂದು ಶ್ರುತಿ ಹರಿಹರನ್ ಹೇಳಿದರು.

ತಮ್ಮ ವಿರುದ್ಧ ಅರ್ಜುನ್ ಸರ್ಜಾ ಕೋರ್ಟ್​ನಲ್ಲಿ ಪ್ರಕರಣಗಳನ್ನು ದಾಖಲಿಸಿರುವ ಬಗ್ಗೆ ಮಾತನಾಡಿದ ಅವರು, ಈ ಸಮಸ್ಯೆಯನ್ನು ಎದುರಿಸಲು ಅವರು ಕೋರ್ಟ್​ಗೆ ಹೋಗಿರುವುದು ಸಂತೋಷದ ವಿಚಾರ ಎಂದು ಸ್ವಾಗತಿಸಿದರು.

ಇದರೊಂದಿಗೆ ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ಅವರು ಕೋರ್ಟ್ ಕಟಕಟೆಯಲ್ಲೇ ಹೋರಾಟ ನಡೆಸಲು ಬಹುತೇಕ ನಿಶ್ಚಯಿಸಿದ್ದಾರೆ. ಅಂಬರೀಷ್, ಚಿನ್ನೇಗೌಡ, ಸಾರಾ ಗೋವಿಂದು ಮೊದಲಾದವರು ನಡೆಸಿದ ಸಂಧಾನ ಸಭೆ ಬಹುತೇಕ ವಿಫಲವಾದಂತಾಗಿದೆ.

ಅಸ್ಸಹಾಯಕ ಅಂಬರೀಷ್:

ಸುದ್ದಿಗೋಷ್ಠಿಯಲ್ಲಿ ಮೊದಲು ಮಾತನಾಡಿದ ಅಂಬರೀಷ್, ಈ ವಿಚಾರವನ್ನು ಇಲ್ಲಿಗೇ ಬಿಟ್ಟು ಕೈ ಕುಲುಕಿ ಹೊರಟುಬಿಡಿ ಎಂದು ಅವರಿಬ್ಬರಿಗೆ ಸಲಹೆ ಕೊಟ್ಟಿದ್ದಾಗಿ ತಿಳಿಸಿದರು.

ಅರ್ಜುನ್ ಸರ್ಜಾ ಮತ್ತು ಶ್ರುತಿ ಹರಿಹರನ್ ಮಧ್ಯೆ ಏನು ನಡೆದಿದೆ ಎಂಬುದನ್ನು ತಾನು ಕಣ್ಣಾರೆ ನೋಡಿಲ್ಲ. ಹೀಗಾಗಿ ಆ ಬಗ್ಗೆ ತಾನು ಮಾತನಾಡಲು ಆಗುವುದಿಲ್ಲ. ಈ ಪ್ರಕರಣ ಕೋರ್ಟ್​ನಲ್ಲಿರುವುದರಿಂದಲೂ ಹೆಚ್ಚು ಮಾತನಾಡಲು ಆಗುವುದಿಲ್ಲ. ಬುದ್ಧಿವಾದ ಹೇಳೋದು ನನ್ನ ಕೆಲಸ. ಇಬ್ಬರಿಗೂ ಇದನ್ನು ಇಲ್ಲಿಯೇ ಬಿಟ್ಟುಬಿಡಿ ಎಂದು ಹೇಳಿದ್ದೇನೆ. ಈ ಸಲಹೆ ಒಪ್ಪುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ರೆಬೆಲ್ ಸ್ಟಾರ್ ಅಂಬರೀಶ್ ಹೇಳಿದರು.

ಅಂಬರೀಷ್ ಅವರ ಮಾತುಗಳಲ್ಲಿ ಫೈರ್ ಸಂಸ್ಥೆ ಬಗ್ಗೆ ಅಸಮಾಧಾನ ಹಾಗೂ ಅರ್ಜುನ್ ಸರ್ಜಾ ಪರ ಸಾಫ್ಟ್ ಕಾರ್ನರ್ ಕಾಣುತ್ತಿತ್ತೆಂಬುದು ಗಮನಾರ್ಹ. ಲವ್ ದೃಶ್ಯಗಳಲ್ಲಿ ಅಭಿನಯಿಸುವಾಗ ತಬ್ಬಿಕೊಂಡಾಗ ಮುಖ ಆ ಕಡೆ ತಿರುಗಿಸಿಕೊಂಡರೆ ಆಗುತ್ತದಾ? ಎಂದು ಅಂಬರೀಷ್ ಪ್ರಶ್ನಿಸಿದರು.

ಇನ್ನು, ಶ್ರುತಿ ಹರಿಹರನ್ ಬೆನ್ನಿಗೆ ನಿಂತಿರುವ ಫೈರ್ ಸಂಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಅಂಬರೀಶ್ ಅಭಿಪ್ರಾಯ. ಫೈರ್ ಸಂಸ್ಥೆಯ ಅಧ್ಯಕ್ಷ ಪಟ್ಟ ಬೇಡ ಎಂದು ಪ್ರಿಯಾಂಕಾ ಉಪೇಂದ್ರ ಹೇಳಿದ್ದು, ಈ ಸಂಸ್ಥೆಯೇ ರಾಂಗ್ ಎಂದಾಯಿತಲ್ಲ ಎಂದು ಮಾಧ್ಯಮಗಳ ಮುಂದೆ ಅಂಬರೀಷ್ ಹೇಳಿದರು.

ಒಟ್ಟಿನಲ್ಲಿ ಅಂಬರೀಷ್ ನೇತೃತ್ವದಲ್ಲಿ ನಡೆದ ರಾಜಿ ಸಂಧಾನ ಹೆಚ್ಚೂಕಡಿಮೆ ವಿಫಲವಾದಂತಾಗಿದೆ. ನಾಳೆ ಚೇಂಬರ್​ನ ವಿವಿಧ ಗಣ್ಯರು ಸೇರಿ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆನ್ನಲಾಗಿದೆ. ಈಗ ಕೋರ್ಟ್ ಕಟಕಟೆಯಲ್ಲಿರುವುದರಿಂದ ಹಾಗೂ ಶ್ರುತಿ-ಅರ್ಜುನ್ ಇಬ್ಬರೂ ತಮ್ಮ ಬಿಗಿಪಟ್ಟು ಸಡಿಲಿಸದಿರಲು ನಿರ್ಧರಿಸಿರುವುದರಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಯತ್ನ ಸದ್ಯಕ್ಕೆ ಕೈಗೂಡುವ ಸಾಧ್ಯತೆಯಂತೂ ಇಲ್ಲ. ನಾಳೆ, ಚೇಂಬರ್​ನ ನಿರ್ಧಾರಕ್ಕಿಂತ ಕೋರ್ಟ್​ನಲ್ಲಿ ಅರ್ಜುನ್ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯತ್ತಲೇ ಎಲ್ಲರ ಕಣ್ಣು ನೆಟ್ಟಿದೆ.

Comments are closed.