ಕರ್ನಾಟಕ

15 ವರ್ಷಗಳ ಹಿಂದೆ ಹೆಂಡತಿ ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ ಬಂಧನ

Pinterest LinkedIn Tumblr


ಬೆಂಗಳೂರು: ಹದಿನೈದು ವರ್ಷಗಳ ಹಿಂದೆ ಗುಜರಾತ್‌ನಲ್ಲಿ ಪತ್ನಿಯನ್ನು ಹತ್ಯೆಗೈದು ಬಳಿಕ ಹೆಸರು ಬದಲಾಯಿಸಿಕೊಂಡು ಬೆಂಗಳೂರಿನಲ್ಲಿ ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿಯ ಸೀನಿಯರ್‌ ಮ್ಯಾನೇಜರ್‌ ಆಗಿದ್ದ ಟೆಕ್ಕಿಯೊಬ್ಬನನ್ನು ಸಿಸಿಬಿ ಪೊಲೀಸರು ರೋಚಕ ಕಾರ್ಯಾಚರಣೆ ನಂತರ ಬಂಧಿಸಿದ್ದಾರೆ.

ಹದಿನೈದು ವರ್ಷಗಳಿಂದ ಗುಜರಾತ್‌ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿ ಸೋತಿದ್ದರು. ಆದರೆ, ಕೇವಲ ಮೂರು ದಿನಗಳ ಕಾರ್ಯಾಚರಣೆಯಲ್ಲಿ ಸಿಸಿಬಿ ಎಸಿಪಿ ವೆಂಕಟೇಶ್‌ ಪ್ರಸನ್ನ ಮತ್ತು ಇನ್ಸ್‌ಪೆಕ್ಟರ್‌ ಉಮಾಶಂಕರ್‌ ನೇತೃತ್ವದ ತಂಡ ಟೆಕ್ಕಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ತಾನೇ ದೂರುಕೊಟ್ಟಿದ್ದ: ತರೂಟ್‌ ಜಿನ್‌ರಾಜ್‌ ಬಂಧಿತ ಆರೋಪಿ. ಕೇರಳ ಮೂಲದ ಈತ ಓದಿದ್ದು ಬೆಳೆದದ್ದೆಲ್ಲಾ ಗುಜರಾತ್‌ನಲ್ಲಿ. ಈತನ ತಂದೆ ಕೇಂದ್ರ ಸರಕಾರಿ ನೌಕರರಾಗಿದ್ದು ಗುಜರಾತ್‌ಗೆ ವರ್ಗಾವಣೆ ಗೊಂಡಿದ್ದರಿಂದ ಇಡೀ ಕುಟುಂಬ 22 ವರ್ಷಗಳ ಹಿಂದೆಯೇ ಗುಜರಾತ್‌ಗೆ ತೆರಳಿತ್ತು. 2001ರಲ್ಲಿ ಅಹಮದಾಬಾದ್‌ನ ಸಜಿನಿ (26) ಅವರನ್ನು ಮದುವೆ ಮಾಡಿಕೊಂಡಿದ್ದ. ಮದುವೆಯಾದ ಕೆಲವು ತಿಂಗಳುಗಳಲ್ಲೇ ಆಕೆಗೆ ಮತ್ತೊಬ್ಬನ ಜತೆ ಅನೈತಿಕ ಸಂಬಂಧ ಇದೆ ಎನ್ನುವ ಸುಳಿವು ಸಿಕ್ಕಿ ವೈವಾಹಿಕ ಜೀವನ ಧೂಳೀಪಟವಾಗಿತ್ತು. ಹೀಗಿದ್ದಾಗಲೆ 2003 ರಲ್ಲಿ ಸಜಿನಿಯ ಕೊಲೆ ನಡೆದು ಹೋಗಿತ್ತು. ತಾನೇ ಸ್ವತಃ ಅಹಮದಾಬಾದ್‌ ನಗರ ಠಾಣೆಗೆ ಧಾವಿಸಿದ ಜಿನ್‌ರಾಜ್‌ ದರೋಡೆಕೋರರು ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ದೋಚಿರುವುದಲ್ಲದೆ ಪತ್ನಿಯನ್ನು ಕೊಲೆ ಮಾಡಿ ಹೋಗಿದ್ದಾರೆ ಎಂದು ದೂರು ನೀಡಿದ್ದ. ದೂರಿನ ಆಧಾರದ ಮೇಲೆ ತನಿಖೆಗೆ ಇಳಿದ ಪೊಲೀಸರು ತಿಂಗಳುಗಟ್ಟಲೆ ಪ್ರಕರಣ ಭೇದಿಸಲು ಯತ್ನಿಸಿದ್ದರು. ಆದರೆ ಯಾವ ಕೋನದಿಂದ ತನಿಖೆ ನಡೆಸಿದರೂ ಘಟನಾ ಸ್ಥಳದಲ್ಲಿ ಸಿಕ್ಕ ಸುಳಿವುಗಳು ದರೋಡೆ ನಡೆದಿಲ್ಲ ಎಂದೇ ಹೇಳುತ್ತಿದ್ದವು. ಕೊನೆಗೆ ದರೋಡೆ ದಿಕ್ಕಿನಿಂದ ಕೌಟುಂಬಿಕ ಕಲಹದ ದಿಕ್ಕಿಗೆ ತನಿಖೆಯನ್ನು ತಿರುಗಿಸಿದ್ದರು. ಅಷ್ಟೊತ್ತಿಗೆ ಜಿನ್‌ರಾಜ್‌ ಗುಜರಾತ್‌ನಿಂದ ಜಾಗ ಖಾಲಿ ಮಾಡಿದ್ದ.

ಸಂಬಂಧಿಕರ ಬಂಧನ: ಅಹಮದಾಬಾದ್‌ ಪೊಲೀಸರು ತನಿಖೆಯ ದಿಕ್ಕನ್ನು ಬದಲಾಯಿಸಿದಾಗ ಪತಿಯೇ ಪೂರ್ವಯೋಜಿತವಾಗಿ ಕೊಲೆ ಮಾಡಿರುವುದು ದೃಢಪಟ್ಟಿತ್ತು. ಜಿನ್‌ರಾಜ್‌ ಕುಟುಂಬದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರೂ ಕೊಲೆಯಲ್ಲಿ ಭಾಗಿ ಆಗಿದ್ದನ್ನು ಒಪ್ಪಿಕೊಂಡರಲ್ಲದೆ, ಸಜಿನಿಗೆ ಅನೈತಿಕ ಸಂಬಂಧ ಇತ್ತು ಎನ್ನುವ ಕಾರಣದಿಂದ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡರು.ಅಷ್ಟೊತ್ತಿಗಾಗಲೇ ಊರು ಖಾಲಿ ಮಾಡಿದ್ದ ಜಿನ್‌ರಾಜ್‌ ಎಲ್ಲಿದ್ದಾನೆ ಎನ್ನುವ ಮಾಹಿತಿ ಕುಟುಂಬದ ಯಾರೊಬ್ಬರಿಗೂ ಇರಲಿಲ್ಲ. ಅಹಮದಾಬಾದ್‌ ಪೊಲೀಸರು ವಿಶೇಷ ತಂಡ ರಚಿಸಿ ಸತತ ಐದು ವರ್ಷಗಳ ಕಾಲ ತನಿಖೆ ನಡೆಸಿದರೂ ಪ್ರಯೋಜನ ಆಗಲಿಲ್ಲ.

ಹಳೆ ಫೋಟೋ ತಂದರು: ಅಕ್ಕ ಪಕ್ಕದ ಎಲ್ಲಾ ರಾಜ್ಯಗಳಲ್ಲೂ ಆರೋಪಿಗಾಗಿ ಹುಡುಕಾಡಿದ್ದ ಅಲ್ಲಿನ ಪೊಲೀಸರು ವಾರದ ಹಿಂದೆ ಸಿಸಿಬಿ ಡಿಸಿಪಿ ಗಿರೀಶ್‌ ಅವರನ್ನು ಭೇಟಿಯಾಗಿ ಬೆಂಗಳೂರಿನಲ್ಲಿ ಆತನ ಪತ್ತೆಗೆ ಸಹಕರಿಸುವಂತೆ ಕೋರಿದ್ದರು. ಡಿಸಿಪಿ ಈ ಪ್ರಕರಣವನ್ನು ಎಸಿಪಿ ವೆಂಕಟೇಶ್‌ ಪ್ರಸನ್ನ ಅವರಿಗೆ ಒಪ್ಪಿಸಿದರು. ಅಹಮದಾಬಾದ್‌ ಪೊಲೀಸರ ಬಳಿ ಆರೋಪಿಯ 15 ವರ್ಷಗಳ ಹಿಂದಿನ ಫೋಟೋ ಹೊರತಾಗಿ ಬೇರೆ ಯಾವ ಸುಳಿವೂ ಇರಲಿಲ್ಲ. ಆತ ಬೆಂಗಳೂರಿನಲ್ಲಿ ಇದ್ದಿರಬಹುದು ಎನ್ನುವ ಅನುಮಾನ ಮಾತ್ರ ಇತ್ತು. ಸಿಸಿಬಿ ಕಾರ್ಯಾಚರಣೆ ಶುರುವಾಯಿತು. ಆರೋಪಿ ಎಲ್ಲೇ ತಪ್ಪಿಸಿಕೊಂಡಿದ್ದರೂ ಕುಟುಂಬದ ಯಾರನ್ನಾದರೂ ಅಪರೂಪಕ್ಕಾದರೂ ಮಾತಾಡಿಸುತ್ತಾನೆ ಎನ್ನುವುದನ್ನು ತಿಳಿದು ಗುಜರಾತ್‌ನಿಂದಲೇ ತಮ್ಮ ತನಿಖೆ ಆರಂಭಿಸಿದರು. ಆರೋಪಿಯ ತಾಯಿಗೆ ಅಪರೂಪಕ್ಕೆ ಬೆಂಗಳೂರಿನ ಮೊಬೈಲ್‌ನಿಂದ ಕರೆ ಬಂದಿರುವುದನ್ನು ಪತ್ತೆ ಹಚ್ಚಿದರು. ಆ ನಂಬರಿನ ಬೆನ್ನು ಬಿದ್ದರು. ಅದು ಬಿಟಿಎಂ ಲೇಔಟ್‌ ವ್ಯಾಪ್ತಿಯಲ್ಲಿ ಚಾಲನೆಯಲ್ಲಿತ್ತು. ಅದು ಪ್ರವೀಣ್‌ ಬಾಟಲೆ ಎನ್ನುವವರ ಹೆಸರಿನಲ್ಲಿತ್ತು. ಸಿಸಿಬಿ ಪೊಲೀಸರು ನಿರಾಶರಾದರು.

ಎಸ್‌ ನಾನೇ ಜಿನ್‌ರಾಜ್‌…: ತಾವು ಬೆನ್ನತ್ತಿದ ನಂಬರ್‌ ಪ್ರವೀಣ್‌ ಎನ್ನುವವರ ಹೆಸರಿನಲ್ಲಿದ್ದದ್ದು ಮಾತ್ರವಲ್ಲದೆ ಅದು ನಗರದ ಪ್ರತಿಷ್ಠಿತ ಒರಾಕಲ್‌ ಕಂಪನಿಯ ಸೀನಿಯರ್‌ ಮ್ಯಾನೇಜರ್‌ ಎಂದು ಕಂಪನಿಯ ಹೆಸರಿನಲ್ಲೇ ನೊಂದಣಿ ಆಗಿತ್ತು. ಹೀಗಾಗಿ ಅವರನ್ನು ಸಲೀಸಾಗಿ ವಿಚಾರಣೆ ನಡೆಸುವಂತಿರಲಿಲ್ಲ. ಇದೇ ಕಂಪನಿಯ ಇತರೆ ಸಿಬ್ಬಂದಿ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಮುಂದಾದರೆ ಅಲ್ಲಿದ್ದದ್ದು 12 ಸಾವಿರ ಮಂದಿ. ಆಗ ಎಸಿಪಿ ವೆಂಕಟೇಶ್‌ ಅವರು ಒಂದು ಸಣ್ಣ ಉಪಾಯ ಮಾಡಿದರು. ಯಾವುದಕ್ಕೂ ಪ್ರವೀಣ್‌ ಬಾಟಲೆ ಅವರನ್ನೇ ಭೇಟಿ ಆಗಿ ಮಾತನಾಡುವುದು ಒಳ್ಳೆಯದು ಎಂದು ತೀರ್ಮಾನಿಸಿ ತಾವು ಪೊಲೀಸರು ಎನ್ನುವ ಸುಳಿವು ಬಿಟ್ಟು ಕೊಡದೆ ಮಂಗಳವಾರ ಮಧ್ಯರಾತ್ರಿ ಸೀದಾ ಕಂಪನಿಗೆ ಹೋಗಿ ಅವರ ಚೇಂಬರ್‌ ಬಳಿ ಹೋದರು. ಎದುರಿಗಿದ್ದ ಪ್ರವೀಣ್‌ ಅವರನ್ನು ‘ತರುಣ್‌ ಜಿನ್‌ರಾಜ್‌’ ಎಂದು ಹೆಸರಿಡಿದು ಕರೆದು ಬಿಟ್ಟರು. ತನ್ನ ಹುಟ್ಟು ಹೆಸರನ್ನು ಇನ್ನೂ ಮರೆತಿರದ ಪ್ರವೀಣ್‌, ‘ಎಸ್‌ ನಾನೇ ಜಿನ್‌ರಾಜ್‌’ ಎಂದು ಪ್ರತಿಕ್ರಿಯಿಸಿಬಿಟ್ಟ. ಏನಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ತಾನು ಪೊಲೀಸರಿಗೆ ಟ್ರಾಪ್‌ ಆದೆ ಎನ್ನುವುದು ಗೊತ್ತಾಯಿತು.

ಎಲ್ಲಾ ದಾಖಲೆಗಳನ್ನೂ ಬದಲಿಸಿಕೊಂಡಿದ್ದ: ಗುಜರಾತ್‌ನಿಂದ ಜಾಗ ಖಾಲಿ ಮಾಡಿದ ಜಿನ್‌ರಾಜ್‌ ಕೆಲವೇ ದಿನಗಳಲ್ಲಿ ತನ್ನ ಹೆಸರನ್ನು ಪ್ರವೀಣ್‌ ಎಂದು ಬದಲಾಯಿಸಿಕೊಂಡಿದ್ದಲ್ಲದೆ ಡಿಎಲ್‌ ಸೇರಿದಂತೆ ಎಲ್ಲಾ ದಾಖಲೆಗಳನ್ನೂ ಇದೇ ಹೆಸರಿನಲ್ಲಿ ಪಡೆದುಕೊಂಡಿದ್ದ. ಇದೇ ಹೆಸರಿನಲ್ಲಿ ಒರಾಕಲ್‌ ಕಂಪನಿಗೆ ಸೇರಿ ನಿಷ್ಠೆಯಿಂದ ಕೆಲಸ ಮಾಡುತ್ತಾ ಸೀನಿಯರ್‌ ಮ್ಯಾನೇಜರ್‌ವರೆಗೂ ಪ್ರಮೋಷನ್‌ ಪಡೆದಿದ್ದ.

ಎರಡನೇ ಪತ್ನಿಗೆ ಇಬ್ಬರು ಮಕ್ಕಳು: ಸಿಸಿಬಿ ಪೊಲೀಸರು ಜಿನ್‌ರಾಜ್‌ ಅಲಿಯಾಸ್‌ ಪ್ರವೀಣ್‌ನನ್ನು ಬಿಟಿಎಂ ಲೇಔಟ್‌ನಲ್ಲಿರುವ ಆತನ ಮನೆಗೆ ಕರೆದುಕೊಂಡು ಹೋದಾಗ ಮನೆಯಲ್ಲಿದ್ದ ಈತನ ಎರಡನೇ ಪತ್ನಿಗೆ ಕಣ್ಣೆದುರು ನಡೆಯುತ್ತಿರುವುದು ಸಿನಿಮಾವೋ, ನಿಜವೋ ಎನ್ನುವುದೇ ಗೊತ್ತಾಗದಷ್ಟು ಶಾಕ್‌ ಆಗಿತ್ತು. ಹನ್ನೊಂದು ವರ್ಷಗಳ ಹಿಂದೆ ಪ್ರವೀಣ್‌ ಹೆಸರಿನಲ್ಲೇ ಎರಡನೇ ಮದುವೆ ಮಾಡಿಕೊಂಡಿದ್ದ ಜಿನ್‌ರಾಜ್‌ಗೆ ಇಬ್ಬರು ಮಕ್ಕಳಿದ್ದಾರೆ.

Comments are closed.