ಕರ್ನಾಟಕ

ಉಪಚುನಾವಣೆ: 2ನೇ ದಿನದ ಪ್ರಚಾರದಲ್ಲಿ ಕುಮಾರಸ್ವಾಮಿ!

Pinterest LinkedIn Tumblr


ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಸಿ.ಎಂ. ಎಚ್​​ಡಿ ಕುಮಾರಸ್ವಾಮಿ ಅವರು ಇಂದು ಎರಡನೇ ದಿನದ ಪ್ರಚಾರ ಕಾರ್ಯ ನಡೆಸಿದ್ಧಾರೆ. ಪಾಂಡವಪುರ ಮತ್ತು ಕೆ.ಆರ್.ಪೇಟೆ ಪಟ್ಟಣದಲ್ಲಿ ಪ್ರಚಾರ ಮಾಡುವ ಮೂಲಕ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚಿಸಿದರು. ಎರಡನೇ ದಿನ ಸಿಎಂ ಪ್ರಚಾರದ ವೇಳೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎನ್ನಲಾಗಿದೆ.

ಮಂಡ್ಯದ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಶಿವರಾಮೇಗೌಡ ಕಣದಲ್ಲಿದ್ಧಾರೆ. ಹೀಗಾಗಿ ಅಭ್ಯರ್ಥಿ ಪರವಾಗಿ ಸಿ.ಎಂ ಕುಮಾರಸ್ವಾಮಿ ಜಿಲ್ಲೆಯಾದ್ಯಂತ ಸಂಚರಿಸಿ ಪ್ರಚಾರ ನಡೆಸಿದ್ದಾರೆ. ಮಂಡ್ಯ, ಮಳವಳ್ಳಿ, ಮದ್ದೂರು ,ಶ್ರೀರಂಗಪಟ್ಟಣ ಸೇರಿದಂತೆ ಜಿಲ್ಲೆಯ ಹಲವು ಕಡೆ ಪ್ರಚಾರ ಹಮ್ಮಿಕೊಳ್ಳಲಾಗಿತ್ತು.

ಎರಡನೇ ದಿನ ಸಿಎಂ ಕುಮಾರಸ್ವಾಮಿ ಅವರು ಪಾಂಡವಪುರ ಮತ್ತು ಕೆ.ಆರ್.ಪೇಟೆಯಲ್ಲಿ ಬಹಿರಂಗ ಸಭೆ ನಡೆಸಿದರು. ತಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು. ಈ ವೇಳೆ ಪಾಂಡವಪುರದ ಸಭೆಯೊಂದರಲ್ಲಿ ಮಾತನಾಡಿದ ಸಿ‌.ಎಂ‌ ನಾನು ಈಗಲೇ ಸಾಯಲ್ಲ, ಇನ್ನೂ 85 ವರ್ಷ ಬದುಕುತ್ತೇನೆ ಎಂದರು. ಈ ಮೂಲಕ ಮಳವಳ್ಳಿಯಲ್ಲಿ ಸಾಯಬೇಕೆ ಎಂದು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಇದೇ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾರ್ಯಕರ್ತನೋರ್ವ ಪ್ರಚಾರ ಸಭೆ ನಡೆಯುತ್ತಿದ್ದ ವೇಳೆ ನಾಲೆಯೊಂದರಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಕೂಡ ನಡೆಯಿತು. ಸಾವನ್ನಪ್ಪಿದ ಕಾರ್ಯಕರ್ತನ‌ ಅಂತಿಮ ದರ್ಶನದ ಸಂದರ್ಭದಲ್ಲಿ ಸಿಎಂ ಕೈ ಬೆರಳಿಗೆ ಗಾಯವೂ ಕೂಡ ಆಗಿತ್ತು.

ಬೆರಳಿಗೆ ಪ್ರಥಮ ಚಿಕಿತ್ಸೆ ಪಡೆದ ಬಳಿಕ ಕೊನೆಯದಾಗಿ ಸಿಎಂ ಕೆ.ಆರ್.ಪೇಟೆಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಭೆಯನ್ನುದ್ದೇಶಿಸಿ ಮಾತಾಡಿದ ಸಿಎಂ ಮೈತ್ರಿ‌ ಸರ್ಕಾರ ರೈತ ಮತ್ತು ಜನಪರ ಸರ್ಕಾರವಾಗಿದೆ. ಇನ್ನು ಶಿವರಾಮೇಗೌಡ ಅವರಿಗೆ ಟಿಕೆಟ್​​ ನೀಡಿದ್ದು, ಸಚಿವ ರೇವಣ್ಣ ಅವರೇ. ನಾಲ್ಕುವರೆ ತಿಂಗಳ ಹಿಂದೆ ನಡೆದ ಸಭೆಯಲ್ಲಿ ಈ ವಿಚಾರ ನಿರ್ಧರವಾಗಿತ್ತು ಎಂದರು.

ಒಟ್ಟಾರೆ ಈ ಬಾರಿಯ ಮಂಡ್ಯದ ಉಪಚುನಾವಣೆಯನ್ನು ಜೆಡಿಎಸ್ ಹಾಗೂ ಬಿಜೆಪಿ ಪಕ್ಷ ಪ್ರತಿಷ್ಟೆಯಾಗಿ ತಗೆದುಕೊಂಡಿವೆ. ಪಕ್ಷದ ಅಭ್ಯರ್ಥಿ ಪರವಾಗಿ ಎರಡು ಪಕ್ಷಗಳು ಭರ್ಜರಿ ಪ್ರಚಾರ ಮಾಡುತ್ತಿವೆ. ಸಿಎಂ ಎಚ್​ಡಿಕೆ ಮತ್ತು ಬಿಎಸ್​ವೈ ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚಿಸುತ್ತಿದ್ಧಾರೆ. ಆದರೆ, ಜಿಲ್ಲೆಯ ಮತದಾರ ಯಾರ ಕೈ ಹಿಡಿಯಲಿದ್ದಾನೋ ಕಾದು ನೋಡ ಬೇಕಿದೆ.

Comments are closed.