ಬಾಗಲಕೋಟೆ: ಶಿವಮೊಗ್ಗದಲ್ಲಿ ಮೈತ್ರಿ ಅಭ್ಯರ್ಥಿ ಗೆದ್ದರೆ ನಮ್ಮ ಸರ್ಕಾರ ಉಳಿಯುತ್ತದೆ ಎಂಬ ಮಾತನ್ನು ಸಿಎಂ ಕುಮಾರಸ್ವಾಮಿ ಆಡಿದ್ದಾರೆ. ಅಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತವಾಗಿದ್ದು, ಉಪಚುನಾವಣೆ ಬಳಿಕ ಸರ್ಕಾರ ಉಳಿಯಲ್ಲ ಎನ್ನುವುದು ಮುಖ್ಯಮಂತ್ರಿಗೆ ಖಾತ್ರಿಯಾಗಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಜಮಖಂಡಿ ಉಪಚುನಾವಣೆ ಪ್ರಚಾರಕ್ಕೆ ಸೋಮವಾರ ಬಾಗಲಕೋಟೆಗೆ ಆಗಮಿಸಿದ ಬಿಎಸ್ವೈ, ಸುದ್ದಿಗಾರರ ಜತೆ ಮಾತನಾಡಿದರು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರ ಯಾವುದೇ ವಿಶೇಷ ಅನುದಾನ ಬಿಡುಗಡೆ ಮಾಡಿಲ್ಲ. ಈ ಸರ್ಕಾರ ಹೆಚ್ಚು ದಿನ ಬಾಳಲ್ಲ. ಆದಷ್ಟು ಬೇಗ ಉರುಳುತ್ತದೆ ಎಂದರು.
ವಾಲ್ಮೀಕಿ ಸಮುದಾಯದ ಮುಖಂಡ ಶ್ರೀರಾಮುಲುಗೆ ಸಿದ್ದರಾಮಯ್ಯ 420 ಎಂದಿದ್ದಾರೆ. ಅದರ ಅರ್ಥವಾದರೂ ಅವರಿಗೆ ಗೊತ್ತಿದೆಯಾ? ಮಹರ್ಷಿ ವಾಲ್ಮೀಕಿ ಜಯಂತಿಯಂದು ಸಿಎಂ ಮತ್ತು ಡಿಸಿಎಂ ಬೆಂಗಳೂರಲ್ಲೇ ಇದ್ದರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಪ್ರಶಸ್ತಿ ಸ್ವೀಕರಿಸದೆ ದೇವೇಗೌಡರು ಇಡೀ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ವಾಲ್ಮೀಕಿ ಸಮಾಜದವರು ಒಂದು ವೋಟು ಅವರಿಗೆ ಹಾಕಿದರೂ ಅದು ವಾಲ್ಮೀಕಿ ಹಾಗೂ ಶ್ರೀರಾಮುಲುಗೆ ಅಪಮಾನ ಮಾಡಿದಂತೆ ಎಂದು ತಿಳಿಸಿದರು.
ಡಾ.ಅಂಬೇಡ್ಕರ್ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತಾರೆ. ಅವರದ್ದೇ ಪಕ್ಷ ಅಂಬೇಡ್ಕರ್ರನ್ನು ಚುನಾವಣೆಯಲ್ಲಿ ಎರಡು ಬಾರಿ ಸೋಲಿಸಿತು. ಅವರು ನಿಧನರಾದಾಗ ರಾಜ್ಘಾಟ್ನಲ್ಲಿ ಅಂತ್ಯಸಂಸ್ಕಾರಕ್ಕೆ ಜಾಗ ನೀಡಲಿಲ್ಲ. ಇಂಥವರಿಗೆ ಅಂಬೇಡ್ಕರ್ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ವಿದೇಶದಲ್ಲಿ ಓದಿದ, ವಾಸವಿದ್ದ ಜಾಗ ಅಭಿವೃದ್ಧಿಪಡಿಸಿ ಗೌರವ ನೀಡಿದ್ದಾರೆ ಎಂದರು.
ನ.6ಕ್ಕೆ ಮೈತ್ರಿ ಸರ್ಕಾರ ಪತನ
ಬಾಗಲಕೋಟೆ: ದೋಸ್ತಿ ಪಕ್ಷಗಳಲ್ಲಿ ನಡೆದ ಬೆಳವಣಿಗೆಗಳಿಂದ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಿದ್ದೆವು. ಆದರೀಗ ಹೇಳುತ್ತಿದ್ದೇವೆ, ನವೆಂಬರ್ 6 ಮೈತ್ರಿ ಸರ್ಕಾರಕ್ಕೆ ಇರೋ ಡೆಡ್ಲೈನ್ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಜಮಖಂಡಿ ಉಪಚುನಾವಣೆ ಅಖಾಡಕ್ಕೆ ಸೋಮವಾರ ಇಳಿದಿರುವ ಅವರು ತುಬಚಿ ಗ್ರಾಮದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ನಮ್ಮಲ್ಲಿ ಈಗ ಇರುವ ಶಾಸಕರ ಸಂಖ್ಯೆ 104. ಜಮಖಂಡಿ ಗೆದ್ದರೆ 105 ಆಗುತ್ತದೆ. ಆದರೆ, 113 ಶಾಸಕರ ಸಂಖ್ಯೆ ಹೇಗಾಗುತ್ತದೆ. ಮ್ಯಾಜಿಕ್ ಹೇಗೆ ಅನ್ನೋದನ್ನು ನೀವು ನೋಡುತ್ತೀರಿ ಎಂದರು. ಹಾಗಂತ ನಾವೇನು ಆಪರೇಷನ್ ಕಮಲ ಮಾಡುವುದಿಲ್ಲ. ಅವರೇ ಮಾಡಿಕೊಳ್ಳುತ್ತಾರೆ. ಜಮಖಂಡಿ ಫಲಿತಾಂಶ ಬಳಿಕ ರಾಜಕೀಯ ಧ್ರುವೀಕರಣ ಆಗಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಯಡಿಯೂರಪ್ಪ ಸಿಎಂ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಹು, ಕೇತು, ಶನಿ ಒಂದಾಗಿ ಚಾಮುಂಡಿಯಲ್ಲಿ ನನ್ನ ಸೋಲಿಸಿದರು ಎಂದು ಸಿದ್ದರಾಮಯ್ಯ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಹೇಳುತ್ತಿದ್ದಾರೆ. ಆದರೆ, ಹೆಸರು ಹೇಳಿಲ್ಲ. ನಮ್ಮ ಪ್ರಕಾರ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಅವರೇ ಸಿದ್ದರಾಮಯ್ಯರಿಗೆ ರಾಹು, ಕೇತು, ಶನಿ ಇರಬೇಕು. ಚುನಾವಣೆ ವೇಳೆ ಹೀಗೆ ಹೇಳುತ್ತಾರೆಂದರೆ ಅವರ ಮನದ ಬೇಗುದಿ ಏನಿದೆ ಅಂತ ಗೊತ್ತಾಗುತ್ತದೆ. ಅಂದರೆ ಸರ್ಕಾರವನ್ನು ಯಾರು ಬೀಳಿಸುತ್ತಾರೆ ಎನ್ನುವುದು ಹೇಳಬೇಕಾಗಿಲ್ಲವಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಅವರಿಂದಲೇ ಪತನ ಎಂದು ತಿಳಿಸಿದರು.
ದಿನೇಶ್, ಖಂಡ್ರೆ ವಿರುದ್ಧ ಗರಂ
ನಿಮ್ಮನ್ನು ಸಿಎಂ ಮಾಡುತ್ತೇನೆಂದರೆ ಯಡಿಯೂರಪ್ಪ ಅವರು ದೇವೇಗೌಡರ ಮನೆಗೆ ಹೋಗಿ ತೊಡೆ ಮೇಲೆ ಕುಳಿತುಕೊಳ್ಳುತ್ತಾರೆ ಎಂದು ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಮಾಜಿ ಸಿಎಂ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ದಿನೇಶ್ ಇತ್ತೀಚೆಗೆ ಜವಾಬ್ದಾರಿಯಿಂದ ಮಾತನಾಡುವುದನ್ನು ಬಿಟ್ಟಿದ್ದು, ತಲೆತಿರುಕ ಮಾತುಗಳನ್ನು ಆಡುತ್ತಿದ್ದಾರೆ. ನಾನ್ಯಾಕೆ ದೇವೇಗೌಡರ ಮನೆಗೆ ಹೋಗಲಿ? ನನಗೇನು ಸಂಬಂಧ? ಟ್ವೆಂಟಿ-20 ಅಧಿಕಾರ ಮಾಡೋಣ ಅಂಥ ಹೇಳಿ ನನಗೆ ಟೋಪಿ ಹಾಕಿ ದ್ರೋಹ ಮಾಡಿದರು. ಆ ಅಪ್ಪ ಮಕ್ಕಳ ಜತೆಗೆ ಈ ಜನ್ಮದಲ್ಲಿ ಸಂಬಂಧ ಸಾಧ್ಯವಿಲ್ಲ ಎಂದರು. ‘ನಾವು ಮನಸ್ಸು ಮಾಡಿದರೆ ಬಿಜೆಪಿ ಶಾಸಕರ ಸಂಖ್ಯೆ 104ರಿಂದ 80ಕ್ಕೆ ಇಳಿಯುತ್ತದೆ’ ಎಂದಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೂ ಬಿಎಸ್ವೈ ತಿರುಗೇಟು ನೀಡಿದರು. ‘ಖಂಡಿತ ಮಾಡಲಿ, ಅದಕ್ಕೆ ಸ್ವಾಗತಿಸುತ್ತೇನೆ. ಇದು ಬೇಜವಾಬ್ದಾರಿ ಹೇಳಿಕೆಯ ಪರಮಾವಧಿ. ಖಂಡ್ರೆ ಅಂತಹವರನ್ನು ಕಟ್ಟಿಕೊಂಡಿರೋ ಕಾಂಗ್ರೆಸ್ ಕತೆ ಅಷ್ಟೇ’ ಎಂದು ಚುಚ್ಚಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿರುವ ಸಿದ್ದರಾಮಯ್ಯಗೆ ಪರಮೇಶ್ವರ್ ರಾಹು, ದೇವೇಗೌಡರು ಶನಿ ಹಾಗೂ ಕುಮಾರಸ್ವಾಮಿ ಕೇತು. ಅವರು ಜನತಾದಳ ಎನ್ನುವ ಶನಿ ಕಟ್ಟಿಕೊಂಡು ಹೊರಟಿದ್ದಾರೆ. ಅದು ಬಹಳ ದಿನ ಉಳಿಯಲ್ಲ. ಸಿದ್ದರಾಮಯ್ಯ ದನದ ಮಾಂಸವನ್ನಾದರೂ ತಿನ್ನಲಿ, ಎಮ್ಮೆ ಮಾಂಸವನ್ನಾದರೂ ತಿನ್ನಲಿ. ಆದರೆ, ಮನುಷ್ಯರು ತಿನ್ನೋದನ್ನು ತಿನ್ನಲಿ.
| ಕೆ.ಎಸ್.ಈಶ್ವರಪ್ಪ, ಶಾಸಕ
ಬಿಜೆಪಿಯವರು 113 ಸ್ಥಾನಕ್ಕೇರುತ್ತೇವೆ ಎಂದು ಏನೇನೋ ಹೇಳಿಕೊಂಡು ಹಗಲು ಕನಸು ಕಾಣುತ್ತಿದ್ದಾರೆ. ಅವರು ಎಷ್ಟೇ ಪ್ರಯತ್ನಪಟ್ಟರೂ ಸಫಲವಾಗಲ್ಲ. ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರವಾಗಿರಲಿದೆ. ನ.6ಕ್ಕೆ ಸರ್ಕಾರ ಪತನ, ಯಡಿಯೂರಪ್ಪ ಸಿಎಂ ಆಗುತ್ತಾರೆಂಬ ಜಗದೀಶ್ ಶೆಟ್ಟರ್ ಹೇಳಿಕೆ ಸುಳ್ಳು.
| ಡಾ.ಜಿ.ಪರಮೇಶ್ವರ್, ಡಿಸಿಎಂ
ವರ್ಗಾವಣೆ ದಂಧೆ ಚರ್ಚೆಗೆ ಸಿಎಂ ಆಹ್ವಾನ
ಸೊರಬ: ವರ್ಗಾವಣೆ ದಂಧೆಯಲ್ಲಿ ಹಣ ಮಾಡಿಕೊಂಡಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾಡುತ್ತಿರುವ ಆರೋಪ ಸಾಬೀತಾದರೆ, ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯಲ್ಲ. ಈ ಬಗ್ಗೆ ಒಂದೇ ವೇದಿಕೆಗೆ ಬಂದು ರ್ಚಚಿಸಲಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹಿರಂಗ ಸವಾಲು ಹಾಕಿದ್ದಾರೆ.
ಪಟ್ಟಣದಲ್ಲಿ ಚುನಾವಣಾ ಪ್ರಚಾರ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಯಡಿಯೂರಪ್ಪ ಸೇರಿ ಬಿಜೆಪಿಯ ಯಾವ ನಾಯಕರಿಂದಲೂ ನನ್ನನ್ನು ಮನೆಗೆ ಕಳಿಸುವ ಶಕ್ತಿ ಇಲ್ಲ. ಅದೇನಿದ್ದರೂ ನಾಡಿನ ಜನತೆ ಹಾಗೂ ಕಾಂಗ್ರೆಸ್ ಶಾಸಕರಿಂದ ಮಾತ್ರ ಸಾಧ್ಯ ಎಂದರು. ಧರ್ಮ ಒಡೆದು ಆಳಲು ಬಿಜೆಪಿ ನಿರ್ಧರಿಸಿದೆ. ಕೇಂದ್ರದಲ್ಲಿ ಸರ್ಕಾರ ಇದೆ ಎಂದು ಇಲ್ಲಿ ಕಡ್ಡಿಯಾಡಿಸಬೇಡಿ ಎಂದು ಬಿಎಸ್ವೈಗೆ ಟಾಂಗ್ ಕೊಟ್ಟರು.
ಮೈತ್ರಿ ಒಡಂಬಡಿಕೆ ಕಾರಣ ಬಹಿರಂಗ ಇಂದು: ಮೈತ್ರಿ ಸರ್ಕಾರದ ಉದ್ದೇಶ, ಚುನಾವಣೆ ಒಡಂಬಡಿಕೆ ಕುರಿತು ಶಿವಮೊಗ್ಗದಲ್ಲಿ ಮಂಗಳವಾರ ಆಯೋಜಿಸಿರುವ ಸಮಾವೇಶದಲ್ಲಿ ಸ್ಪಷ್ಟಪಡಿಸಲಿದ್ದೇವೆ ಎಂದು ಸಿಎಂ ಹೇಳಿದರು. ಬಿಜೆಪಿ ಚುನಾವಣಾ ತಂತ್ರಗಾರಿಕೆಯೇ ಬೇರೆ. ಕಾಂಗ್ರೆಸ್-ಜೆಡಿಎಸ್ ತಂತ್ರಗಾರಿಕೆಯೇ ಬೇರೆ. ನಮ್ಮದೇ ಅದ ರೀತಿಯಲ್ಲಿ ಜನರನ್ನು ತಲುಪುತ್ತೇವೆ. ಶಿವಮೊಗ್ಗ ಸಮಾವೇಶದಲ್ಲಿ ಎಚ್.ಡಿ.ದೇವೆಗೌಡ, ಡಿ.ಕೆ.ಶಿವಕುಮಾರ್ ಸೇರಿ ಹಿರಿಯ ಮುಖಂಡರು ಒಂದೇ ವೇದಿಕೆ ಹಂಚಿಕೊಳ್ಳಲಿದ್ದೇವೆ. ಜನರಿಗೆ ಮೈತ್ರಿ ಸರ್ಕಾರದ ಕೆಲಸಗಳ ಬಗ್ಗೆ ಜಾಗೃತಿ ಮೂಡಿಸಲಿದ್ದೇವೆ ಎಂದರು.
ಅಧಿಕಾರದ ಅಹಂ ನನಗಿಲ್ಲ. ಸಿಎಂ ಸ್ಥಾನ ಇವತ್ತು ಇರುತ್ತೆ ನಾಳೆ ಹೋಗುತ್ತೆ. ಜನರ ಮನಸ್ಸಿನಲ್ಲಿ ಸ್ಥಾನ ಬೇಕು. ಸಮಸ್ಯೆಗಳಿದ್ದರೆ ನೇರವಾಗಿ ಬಂದು ಭೇಟಿಯಾಗಬಹುದು.
| ಎಚ್.ಡಿ.ಕುಮಾರಸ್ವಾಮಿ, ಸಿಎಂ
ಮೋದಿ ಡೋಂಗಿ ಯೋಜನೆ
ಕೇಂದ್ರ ಸರ್ಕಾರ ಜಾರಿಗೆ ತಂದ ‘ಆಯುಷ್ಮಾನ್ ಭಾರತ್’ ಪ್ರಧಾನಿ ನರೇಂದ್ರ ಮೋದಿ ಅವರ ಡೋಂಗಿ ಕಾರ್ಯಕ್ರಮ. ಈ ಯೋಜನೆಯಿಂದ ಯಾರಿಗೂ ಉಪಯೋಗವಿಲ್ಲ. ಯೋಜನೆ ವ್ಯಾಪ್ತಿಯೊಳಗೆ ಬರಲು ಬೈಕ್, ಟಿವಿ, ರೆಫ್ರಿಜರೇಟರ್ ಇಟ್ಟುಕೊಳ್ಳುವಂತಿಲ್ಲ ಎಂಬ ನಿರ್ಬಂಧ ವಿಧಿಸಲಾಗಿದೆ. ಒಬ್ಬ ಸಣ್ಣ ಕೂಲಿ ಕಾರ್ವಿುಕ ಕೂಡ ಬೈಕ್ ಇಟ್ಟುಕೊಂಡಿರುತ್ತಾನೆ. ಹಾಗಾಗಿ ಜನರನ್ನು ದಾರಿ ತಪ್ಪಿಸಲು ಮೋದಿ ಇಂತಹ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಮಂಡ್ಯದಲ್ಲಿ ‘ಕೈ’ ನಾಯಕರ ಬೆವರಿಳಿಸಿದ ಕಾರ್ಯಕರ್ತರು
ಪಾಂಡವಪುರ: ದೇವೇಗೌಡ-ಸಿದ್ದರಾಮಯ್ಯ ಒಂದಾದರೆ ನಮ್ಮ ಪಾಡೇನು? ಹಿಂದೆ ರೈತಸಂಘಕ್ಕೆ ಮತ ಹಾಕಲು ಹೇಳಿದ್ರಿ, ಈಗ ಜೆಡಿಎಸ್ ಅಂತೀರಿ, ಮುಂದೆ ಬಿಜೆಪಿಗೆ ಕೇಳ್ತೀರಾ? ಯಾರನ್ನು ಕೇಳಿ ಮೈತ್ರಿ ಮಾಡಿಕೊಂಡಿರಿ? ವೋಟ್ ಪಾರ್ ಬಿಜೆಪಿ, ಸಚಿವರಿಂದ ಕಿರುಕುಳ ತಪ್ಪಿಸಿ.. -ಪಟ್ಟಣದಲ್ಲಿ ಸೋಮವಾರ ನಡೆದ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ನಾಯಕರ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಪರಿ ಇದು. ಎಚ್.ಸಿ.ಮಹದೇವಪ್ಪ, ಟಿ.ಬಿ.ಜಯಚಂದ್ರ, ಸಂಪಂಗಿ ಸಮ್ಮುಖದಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಸ್ಥಳೀಯ ಮುಖಂಡರೊಬ್ಬರು ನಾಯಕರ ನಿಲುವು ಸಮರ್ಥಿಸಿಕೊಳ್ಳಲು ಮುಂದಾದಾಗ ಕೂಗಾಟ, ಗದ್ದಲ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಮೂಕ ಪ್ರೇಕ್ಷಕರಂತೆ ಕುಳಿತಿದ್ದರು.
Comments are closed.