ಕರ್ನಾಟಕ

ವಿರೋಧಿ ಬಣದ ನಾಯಕನ ಮಗನ ಸಾವು ಕೂಡ ಪ್ರಚಾರದ ಸರಕಾಗಿದೆ: ರೆಡ್ಡಿ ವಿರುದ್ಧವೇ ಸುರೇಶ್ ಕುಮಾರ್ ಅಸಮಾಧಾನ

Pinterest LinkedIn Tumblr

ಬೆಂಗಳೂರು: ‘ವಿರೋಧಿ ಬಣದ ನಾಯಕನ ಮಗನ ಸಾವು ಕೂಡ ಪ್ರಚಾರದ ಸರಕಾಗಿದೆ’ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ತಮ್ಮದೇ ಪಕ್ಷದ ನಾಯಕ ಗಾಲಿ ಜನಾರ್ಧನ ರೆಡ್ಡಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಉಪಚುನಾವಣೆ ಕಣ ರಂಗೇರುವಂತೆಯೇ ರಾಜಕೀಯ ಕೆಸರೆರಚಾಟ ಕೂಡ ಜೋರಾಗಿ ಸಾಗಿದ್ದು, ಏತನ್ಮಧ್ಯೆ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದ ಗಾಲಿ ಜನಾರ್ಧನ ರೆಡ್ಡಿ ನಾವು ಮಾಡಿದ ಪಾಪ ನಮ್ಮ ಮಕ್ಕಳಿಗೆ ತಟ್ಟುತ್ತದೆ ಎಂಬ ಮಾತಿನಂತೆ ಸಿದ್ದರಾಮಯ್ಯ ಅವರ ಮಗನಿಗೆ ಶಿಕ್ಷೆಯಾಯಿತು. ಇನ್ನಾದರೂ ಸಿದ್ದರಾಮಯ್ಯ ಬುದ್ದಿ ಕಲಿಯಲಿ ಎಂಬ ದಾಟಿಯಲ್ಲಿ ಮಾತನಾಡಿದ್ದರು.

ಜನಾರ್ಧನ ರೆಡ್ಡಿ ಅವರ ಈ ಮಾತಿಗೆ ಅವರದೇ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ರೆಡ್ಡಿ ಮಾತಿಗೆ ಶಾಸಕ ಸುರೇಶ್ ಕುಮಾರ್ ತೀವ್ರ ಕಿಡಿಕಾರಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸುರೇಶ್ ಕುಮಾರ್, ‘ವಿರೋಧಿ ಬಣದ ನಾಯಕನ ಮಗನ ಸಾವು ಸರಕಾಗಿದೆ. ಚುನಾವಣೆ ವೇಳೆ ಪ್ರಚಾರದ ಸರಕಾಗಿರುವುದು ಅಮಾನವೀಯ. ಮಗನನ್ನು ಕಳೆದುಕೊಂಡ ಸಂಕಟ ಯಾರಿಗೂ ಬರದಿರಲಿ. ಮನುಷ್ಯತ್ವ ಕಳೆದುಕೊಳ್ಳದಿರೋಣ ಎಂಬ ಕಿವಿ ಮಾತು ಹೇಳಿದ್ದಾರೆ.

ಅಂತೆಯೇ ‘ಕರ್ನಾಟಕದ (ಚುನಾವಣಾ) ರಾಜಕೀಯದ ಸಂವಾದ ಇನ್ನಷ್ಟು ಕೆಳಮಟ್ಟಕ್ಕೆ ಇಳಿಯುವ ಮೊದಲು ಸಂಬಂಧಪಟ್ಟವರೆಲ್ಲರೂ ಎಚ್ಚರಗೊಳ್ಳುವುದು ಈ ಕ್ಷಣದ ಅಗತ್ಯ.‌ ಇಲ್ಲದಿದ್ದರೆ ಇನ್ನಷ್ಟು ಅಪಾಯಕರ ಪದಗಳ ವಿಜೃಂಭಣೆಯ ಕಾಣಲಿದ್ದೇವೆ!.. ಎಷ್ಟೇ ತೀಕ್ಷ್ಣವಾಗಿದ್ದರೂ ಅಸಹ್ಯವಾಗಿರದ ರಾಜಕೀಯ ಭಾಷೆಯನ್ನು ಬಳಸುವ ಮೇಲ್ಪಂಕ್ತಿ ಇಂದಿನ ಅಗತ್ಯ.‌ ಮಾತುಗಳು ಕೆಳಮಟ್ಟಕ್ಕಿಳಿಯುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಕೀಳು ಮಟ್ಟದ ಶಬ್ದಪ್ರಯೋಗಗಳ ಬಗ್ಗೆ ಆತಂಕ ವ್ಯಕ್ತಡಿಸಿ, ಜನಾರ್ಧನ ರೆಡ್ಡಿ ಹೇಳಿಕೆಯನ್ನು ಸುರೇಶ್ ಕುಮಾರ್ ಖಂಡಿಸಿದ್ದಾರೆ.

Comments are closed.