ಕರ್ನಾಟಕ

ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಕೊಂದು ಸಿಕ್ಕಿಬಿದ್ದ ಪತಿ!

Pinterest LinkedIn Tumblr


ಬೆಂಗಳೂರು: ಒಪ್ಪಿತ ಅಕ್ರಮ ಸಂಬಂಧ ಅಪರಾಧವಲ್ಲ ಅಂತ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೆ ಪತಿಯೊಬ್ಬ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡು ಸಿನಿಮಿ ರೀತಿಯಲ್ಲಿ ಕೊಲೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಆರೋಪಿ ಪತಿ ಹಾಗೂ ಕೃತ್ಯಕ್ಕೆ ಸಹಾಯ ಮಾಡಿದ್ದ ಆತನ ಸ್ನೇಹಿತನ್ನು ಪೊಲೀಸರು ಬಂಧಿಸಿದ್ದಾರೆ.

ಪತಿ ಗಂಗರಾಜ್ (28) ಹಾಗೂ ಆತನ ಸ್ನೇಹಿತ ಕೃಷ್ಣ ಬಂಧಿತ ಆರೋಪಿಗಳು. ಆಂಧ್ರಪ್ರದೇಶ ಮೂಲದ ಚಕ್ರಾಧರ (28) ಕೊಲೆಯಾದ ದುರ್ದೈವಿ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಠಾಣೆ ವ್ಯಾಪ್ತಿಯ ಚಿಕ್ಕ ತೋಗೂರಿನಲ್ಲಿ ಇದೇ ತಿಂಗಳ 25ರಂದು ಅರೆನಗ್ನ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ತನಿಖೆ ಆರಂಭಿಸಿದ್ದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬುಧವಾರ ಆರೋಪಿಗಳನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?:
ಕೊಲೆಯಾದ ಚಕ್ರಾಧರ ಖಾಸಗಿ ಕಂಪನಿಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದು, ದೊಡ್ಡ ತೋಗೂರಿನಲ್ಲಿ ವಾಸವಾಗಿದ್ದ. ತಾನು ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಹೀಗೆ ಸುಮಾರು ದಿನಗಳಿಂದ ಇಬ್ಬರ ಮಧ್ಯ ಸಂಬಂಧ ನಡೆದಿತ್ತು. ಒಂದು ದಿನ ಚಕ್ರಾಧರ ಆಕೆಯ ಮೊಬೈಲ್‍ಗೆ ಐ ಲವ್ ಯೂ ಎಂದು ಮೆಸೇಜ್ ಮಾಡಿದ್ದ. ಇದನ್ನು ನೋಡಿದ್ದ ಮಹಿಳೆಯ ಪತಿ ಗಂಗರಾಜ್ ಕೆಂಡಾಮಂಡಲನಾಗಿ, ಪ್ರತೀಕಾರ ತೀರಿಸಿಕೊಳ್ಳಲು ನಿರ್ಧರಿಸಿದ್ದ.

ಗಂಗರಾಜ್ ತನ್ನ ಪತ್ನಿಯ ಮೊಬೈಲ್‍ನಿಂದ ಚಕ್ರಾಧರನಿಗೆ ರಿಪ್ಲೈ ಮಾಡಿ ಮನೆಗೆ ಕರೆಸಿಕೊಂಡಿದ್ದ. ಕೊಲೆಗೆ ಸಂಚು ರೂಪಿಸಿದ್ದ ಗಂಗರಾಜ್ ತನ್ನ ಸ್ನೇಹಿತ ಕೃಷ್ಣ ಎಂಬವನನ್ನು ಮನೆಗೆ ಕರೆಸಿಕೊಂಡಿದ್ದ. ಇತ್ತ ಚಕ್ರಾಧರ ಪ್ರಿಯತಮೆಯ ಮೆಸೇಜ್ ನೋಡಿ ಖುಷಿಯಿಂದ ಮನೆಯತ್ತ ಓಡೋಡಿ ಬಂದಿದ್ದ. ಆದರೆ ಚಕ್ರಧರ ಮನೆ ಒಳಗೆ ಬರುತ್ತಿದ್ದಂತೆ ಆತನಿಗೆ ಆಘಾತವೇ ಕಾದಿತ್ತು.

ಪ್ರಿಯತಮೆ ಬದಲಾಗಿ ಆಕೆಯ ಪತಿಯನ್ನು ಕಂಡ ಚಕ್ರಾಧರ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದ. ತಕ್ಷಣವೇ ಆತನನ್ನು ಮನೆಯ ಒಳಗಡೆ ಎಳೆದುಕೊಂಡ ಗಂಗರಾಜ್ ಹಾಗೂ ಕೃಷ್ಣಾ ಹಿಗ್ಗಾಮುಗ್ಗಾ ಥಳಿಸಿ, ಗುಪ್ತಾಂಗಕ್ಕೆ ಹೊಡೆದು ಕೊಲೆಗೈದಿದ್ದರು. ಬಳಿಕ ಮೃತ ಚಕ್ರಾಧರ ದೇಹವನ್ನು ಚಿಕ್ಕತೋಗೂರಿನ ರಸ್ತೆಯಲ್ಲಿ ಬಿಸಾಡಿ ಹೋಗಿದ್ದರು. ಅರೆನಗ್ನ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಕುರಿತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಿಕ್ಕಿಬಿದ್ದಿದ್ದು ಹೇಗೆ?:
ಅರೆನಗ್ನ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಚಕ್ರಾಧರನನ್ನು ಪರಿಶೀಲನೆ ನಡೆಸಿದಾಗ, ಆತನ ಬಳಿ ಇದ್ದ ವಸ್ತುಗಳನ್ನು ಹಾಗೂ ಮೊಬೈಲ್ ವಶಕ್ಕೆ ಪಡೆದಿದ್ದರು. ಚಕ್ರಾಧರ ಬಳಿ ಸಿಕ್ಕ ದಾಖಲೆಗಳ ಪ್ರಕಾರ ಆತ, ಆಂಧ್ರಪ್ರದೇಶ ಯುವಕ ಹಾಗೂ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಬಳಿಕ ಆತನ ಮೊಬೈಲ್ ನಲ್ಲಿ ಕಾಲ್ ಹಾಗೂ ಮೆಸೇಜ್ ಮಾಹಿತಿ ಪಡೆದ ಪೊಲೀಸರು, ಗಂಗರಾಜ್ ಪತ್ನಿಯನ್ನು ವಿಚಾರಣೆ ಮಾಡಿದ್ದಾರೆ. ಆಕೆಯ ಪತಿಯೇ ಈ ಕೃತ್ಯ ಎಸಗಿದ್ದಾನೆ ಅಂತ ಪೊಲೀಸರಿಗೆ ಶಂಕೆ ವ್ಯಕ್ತವಾಗಿದ್ದು, ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆರೋಪಿ ನಡೆದ ಘಟನೆ ಹೇಳಿಕೊಂಡಿದ್ದಾನೆ. ಕೃತ್ಯಕ್ಕೆ ಸಹಾಯ ಮಾಡಿದ್ದ ಗಂಗರಾಜ್ ಸ್ನೇಹಿತ ಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ.

Comments are closed.