ಬೆಂಗಳೂರು: ನಿನಗೆ ಕೊಡಬೇಕಿರುವ ಸಂಬಳ ನನ್ನ ಪ್ಯಾಂಟ್ ಜೇಬಿನಲ್ಲಿದೆ. ಬೇಕಾದರೆ ನೀನೇ ಕೈ ಹಾಕಿ ತೆಗೆದುಕೊಂಡು ಹೋಗು. ಅನುಮಾನವಿದ್ದರೆ ಪ್ಯಾಂಟ್ ಬಿಚ್ಚಿ ತೋರಿಸಬೇಕಾ? ನೀವೆಲ್ಲಾ ನನ್ನ ಕೈಯಲ್ಲಿ ಸಾಲಾಗಿ ನಿಂತು ತಾಳಿ ಕಟ್ಟಿಸಿಕೊಂಡರಷ್ಟೇ ಸಂಬಳ ಎಂಬಿತ್ಯಾದಿ ಮಾತುಗಳನ್ನು ಗುತ್ತಿಗೆದಾರರಿಂದ ಕೇಳಿಸಿಕೊಳ್ಳುವ ದುರ್ದೈವ ತಮ್ಮದಾಗಿದೆ ಎಂದು ಬಿಬಿಎಂಪಿ ಗುತ್ತಿಗೆ ಪೌರಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ನಗರದಲ್ಲಿ ಶನಿವಾರ ನಡೆದ ‘ಮೀಟೂ’ ಚರ್ಚಾಗೋಷ್ಠಿಯಲ್ಲಿ ಮನೆಕೆಲಸದವರು, ಗಾರ್ಮೆಂಟ್ಸ್ , ಪೌರ ಕಾರ್ಮಿಕರು ಒಳಗೊಂಡಂತೆ ಎಲ್ಲ ವಲಯಗಳಲ್ಲೂ ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ಬಗ್ಗೆ, ತಾವು ಅನುಭವಿಸಿದ ಸಂಕಟಗಳ ಬಗ್ಗೆ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಗಾರ್ಮೆಂಟ್ ಮತ್ತು ಟೆಕ್ಸ್‌ಟೈಲ್ ವರ್ಕರ್ ಯೂನಿಯನ್, ಸ್ತ್ರೀ ಜಾಗೃತಿ ಸಮಿತಿ ಸೇರಿದಂತೆ ನಾನಾ ಮಹಿಳಾ ಕಾರ್ಮಿಕ ಸಂಘಟನೆಗಳು ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಗೃಹದಲ್ಲಿ ಆಯೋಜಿಸಿದ್ದ ಚರ್ಚೆಯಲ್ಲಿ ಪಾಲ್ಗೊಂಡ ಕಾರ್ಮಿಕರು ತಾವು ಕೆಲಸ ಮಾಡುವ ಸ್ಥಳಗಳಲ್ಲಿನ ಮೇಲಧಿಕಾರಿಗಳು, ಮಾಲೀಕರು, ಸಹೋದ್ಯೋಗಿಗಳಿಂದ ಆಗುವ ನಾನಾ ರೀತಿಯ ದೈಹಿಕ ಹಾಗೂ ಮಾನಸಿಕ ನೋವುಗಳನ್ನು ತೋಡಿಕೊಂಡರು.
ಮಂಗಳಮುಖಿಯರೂ ಹೊರತಲ್ಲ
ಲೈಂಗಿಕ ದೌರ್ಜನ್ಯಕ್ಕೆ ಈಡಾಗುವವರಲ್ಲಿ ಮಂಗಳಮುಖಿಯೂ ಹೊರತಾಗಿಲ್ಲ. ಈ ಕುರಿತು ಮಂಗಳಮುಖಿ ಸನಾ ಮಾತನಾಡಿ, ‘‘ಮಹಿಳೆಯರಿಗಷ್ಠೇ ಅಲ್ಲ, ನಮಗೂ ಸಾಕಷ್ಟು ತೊಂದರೆಗಳನ್ನು ಕೊಡುತ್ತಾರೆ. ಈ ಮೊದಲು ನಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ನಿರ್ದೇಶಕ ನನ್ನೊಂದಿಗೆ ತಪ್ಪಾಗಿ ವರ್ತಿಸಿದ್ದ. ಇದನ್ನು ಪ್ರಶ್ನಿಸಿದ ನನಗೆ ನ್ಯಾಯ ಸಿಗಲಿಲ್ಲ. ನಮ್ಮಂತಹವರ ಧ್ವನಿಗೆ ಸ್ಪಂದನೆ ಸಿಗುತ್ತಿಲ್ಲ. ನ್ಯಾಯ ಕೊಡಿಸಬೇಕಾದ ಪೊಲೀಸ್ ಠಾಣೆಗಳಲ್ಲಿಯೂ ನಮ್ಮನ್ನು ಅತ್ಯಂತ ಹೀನವಾಗಿ ಕಾಣುತ್ತಾರೆ,’’ಎಂದು ಅಳಲು ತೋಡಿಕೊಂಡರು.
ಸಾಮಾಜಿಕ ಕಾರ್ಯಕರ್ತೆ ಗೀತಾ ಮೆನನ್ ಮಾತನಾಡಿ, ‘‘ಅಸಂಘಟಿತ ಕಾರ್ಮಿಕರಿಗೆ ಸ್ಪಷ್ಟ ಕಾನೂನು ಇಲ್ಲ. ಮಹಿಳೆಯರ ರಕ್ಷಣೆಗಾಗಿ ಸೂಕ್ತ ಕಾನೂನಿನ ಅವಶ್ಯಕತೆಯಿದೆ. ಯೂನಿಯನ್‌ಗಳಲ್ಲಿಯೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತದೆ. ಆದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ. ಮಹಿಳೆಯರ ಮೇಲೆ ದೌರ್ಜನ್ಯವಾಗದಂತೆ ಕ್ರಮವಹಿಸುವುದು ಪ್ರತಿಯೊಬ್ಬರ ಕರ್ತವ್ಯ,’’ ಎಂದರು.
Comments are closed.