ಚಿಕ್ಕಮಗಳೂರು: ಮಚ್ಚು ಹಿಡಿದ ಮಹಿಳೆಯೊಬ್ಬಳು ನಡುರಾತ್ರಿಯಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಿಮ್ಮನ್ನೆಲ್ಲಾ ಕೊಚ್ಚಿ ಹಾಕುತ್ತೇನೆ ಎಂದು ಓಡಾಡುತ್ತಾ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಈಕೆ ಮಾನಸಿಕ ಅಸ್ವಸ್ಥಳಾಗಿದ್ದು, ಈ ಕಾರಣಕ್ಕಾಗಿ ಆಕೆ ಈ ರೀತಿ ಮಾಡಿದ್ದಾಳೆ ಎಂದು ಹೇಳಲಾಗಿದೆ. ರಾತ್ರಿ 12.30 ಸುಮಾರಿಗೆ ಬಸ್ ನಿಲ್ದಾಣಕ್ಕೆ ಬಂದ ಮಹಿಳೆ ಮಚ್ಚು ಹಿಡಿದು ಜನರಲ್ಲಿ ಆತಂಕ ಸೃಷ್ಟಿಸಿದ್ದಾಳೆ. ಇನ್ನು ಇವಳ ಕೈಯಲ್ಲಿಂದ ಮಚ್ಚು ಪಡೆಯಲು ಸಾರ್ವಜನಿಕರು ಮುಂದಾದಾಗ ಯಾರಾದರೂ ಹತ್ತಿರ ಬಂದರೆ ತಲೆ ಕಡಿಯುತ್ತೇನೆ ಎಂದು ಮಚ್ಚು ಬೀಸಲು ಮುಂದಾಗಿದ್ದಾಳೆ.
ಮಹಿಳೆಯ ಆರ್ಭಟಕ್ಕೆ ಬಸ್ ನಿಲ್ದಾಣದಲ್ಲಿದ್ದ ಜನರು ಕಂಗಾಲಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಕಡೆಗೆ ಒಂದು ಗಂಟೆ ಕಾಲ ಆಕೆಯ ಮನವೊಲಿಸಿ ಆಕೆಯಿಂದ ಮಚ್ಚು ಪಡೆಯುವಷ್ಟರಲ್ಲಿ ಸುಸ್ತಾಗಿದ್ದಾರೆ. ಪೊಲೀಸರು ಸಾರ್ವಜನಿಕರ ಮನವಿ ಮೇರೆಗೆ ಮಚ್ಚು ನೀಡಿದ ಮಹಿಳೆ ಬಳಿಕ ಯಾರಿಗೂ ಸಿಗದಂತೆ ಬಸ್ ನಿಲ್ದಾಣದಿಂದ ಹೊರಹೋಗಿದ್ದಾರೆ.
ಈ ಹಿಂದೆಯೂ ಇದೆ ರೀತಿ ಮಾಡಿದ್ದ ಮಹಿಳೆ
ನಾಲ್ಕು ವರ್ಷದ ಮಗನೊಂದಿಗೆ ನಗರದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಮಹಿಳೆ ಈ ಹಿಂದೆಯೂ ಇದೇ ರೀತಿ ಅವಾಂತರ ಸೃಷ್ಟಿಸಿದ್ದಳು. ಮನಸ್ಸು ಸ್ಥಿಮಿತ ಕಳೆದುಕೊಂಡ ಮಹಿಳೆ ಜೊತೆ ಮಗು ಇದ್ದರೆ ಅಪಾಯ ಎಂದು ಅರಿತ ಪೊಲೀಸರು ಮಗುವನ್ನು ರಿಮೆಂಡ್ ಹೋಂಗೆ ಕಳುಹಿಸಿದ್ದಾರೆ.
ಕೌಟುಂಬಿಕ ಹಿನ್ನೆಲೆಯಲ್ಲಿ ನೊಂದಿರುವ ಮಹಿಳೆ ಪದೇ ಪದೇ ಈ ರೀತಿ ಆರ್ಭಟವನ್ನು ತೋರುತ್ತಾಳೆ. ಒಂದು ಗಳಿಕೆ ಸುಮ್ಮನಿದ್ದರೆ, ಮತ್ತೊಂದು ಗಳಿಕೆ ಆಕೆ ಈ ರೀತಿ ಮಾಡುತ್ತಾಳೆ ಎಂದು ನೋಡಿದವರು ತಿಳಿಸಿದ್ದಾರೆ. ಈ ಮಹಿಳೆಗೆ ಸೂಕ್ತ ಚಿಕಿತ್ಸೆ ಅವಶ್ಯವಿದೆ. ಆಕೆಯನ್ನು ಮಾನಸಿಕ ವೈದ್ಯರ ಬಳಿ ಕರೆದೊಯ್ಯುವುದು ಸೂಕ್ತ ಎನ್ನುತ್ತಾರೆ ಸ್ಥಳೀಯರು.
Comments are closed.