ಬೆಂಗಳೂರು: ಮೀಟರ್ ಬಡ್ಡಿ ದಂಧೆಗೆ ಶಾಶ್ವತ ಪರಿಹಾರ ನೀಡುವ ಕ್ರಮಕ್ಕೆ ಮುಂದಾಗಿರುವ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರ, ಬಡ್ಡಿ, ಸಾಲದ ಶೂಲಕ್ಕೆ ಸಿಲುಕಿರುವ ಜನರ ನೆರವಿಗೆ ಬರಲು `ಬಡವರ ಬಂಧು’ ಯೋಜನೆ ಶೀಘ್ರವೇ ಜಾರಿ ಮಾಡಲು ಸಿದ್ಧತೆ ನಡೆಸಿದೆ.
ಸರ್ಕಾರದ ಈ ಯೋಜನೆ ಇಂದ ಬೀದಿ ಬದಿ ವ್ಯಾಪಾರಿಗಳಿಗೆ ಇನ್ನು ಮುಂದೆ ಬಡ್ಡಿಯೇ ಇಲ್ಲದ ದಿನದ ಸಾಲ ಲಭ್ಯವಾಗಲಿದೆ. ಬಡವರ ಬಂಧು ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 53 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಕಿರುಸಾಲ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಎಲ್ಲಿ, ಎಷ್ಟು ಮಂದಿಗೆ ಸಾಲ?
ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯ 10 ಮಹಾನಗರ ಪಾಲಿಕೆಗಳು ಹಾಗೂ ಜಿಲ್ಲಾ ಕೇಂದ್ರದ ಪ್ರಮುಖ ನಗರಗಳಲ್ಲಿ ಸಾಲ ಸೌಲಭ್ಯ ಸಿಗಲಿದೆ. ಪ್ರಮುಖವಾಗಿ ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ 5 ಸಾವಿರ ರೂ., 10 ಮಹಾನಗರ ಪಾಲಿಕೆಗಳಲ್ಲಿ 3 ಸಾವಿರ ರೂ., ಜಿಲ್ಲಾ ನಗರ ಪ್ರದೇಶ 1 ಸಾವಿರ ರೂ. ಸಾಲ ಸೌಲಭ್ಯ ಲಭ್ಯವಾಗಲಿದೆ.
ರಾಜ್ಯ ಪ್ರಮುಖ ಮಹಾನಗರ ಪಾಲಿಕೆಗಳಾದ ಬಳ್ಳಾರಿ, ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ ನಗರಗಳಲ್ಲಿ 3 ಸಾವಿರ ರೂ. ಸಾಲ ಸೌಲಭ್ಯವಾಗಲಿದೆ. ಬಾಗಲಕೋಟೆ, ಬೀದರ್, ಚಾಮರಾಜನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದೊಡ್ಡಬಳ್ಳಾಪುರ, ಹಾಸನ, ಹಾವೇರಿ, ಕಾರವಾರ, ಕೋಲಾರ, ಕೊಪ್ಪಳ, ಮಡಿಕೇರಿ, ಮಂಡ್ಯ, ರಾಯಚೂರು, ರಾಮನಗರ, ಉಡುಪಿ, ಯಾದಗಿರಿ ಜಿಲ್ಲಾ ಕೇಂದ್ರಗಳ ನಗರಗಳಲ್ಲಿ 1 ಸಾವಿರ ರೂ. ಸಾಲ ಸೌಲಭ್ಯ ಪಡೆಯಬಹುದಾಗಿದೆ.
ಯಾರಿಗೆ ಅನ್ವಯ.?
ತಳ್ಳುಬಂಡಿ ಹಾಗೂ ಮೋಟಾರು ವಾಹನಗಳಲ್ಲಿ ಪಾನೀಯ, ತಿಂಡಿ, ಊಟ ಮಾರಾಟ ಮಾಡುವವರು, ಮನೆ ಮನೆಗೆ ತೆರಳಿ ಹೂವು, ಹಣ್ಣ, ತರಕಾರಿ ವಿತರಿಸುವವರು ಹಾಗೂ ಬುಟ್ಟಿಯಲ್ಲಿ ವಸ್ತುಗಳನ್ನು ಮಾರಾಟ ಮಾಡುವವರು, ಪಾದರಕ್ಷೆ, ಚರ್ಮ ಉತ್ಪನ್ನ ರಿಪೇರಿ ಮತ್ತು ಮಾರಾಟ ಮಾಡುವವರು, ಆಟದ ಸಾಮಾನು, ಗೃಹೋಪಯೋಗಿ ವಸ್ತು ಮಾರಾಟ ಮಾಡುವವರು ಈ ಯೋಜನೆ ವ್ಯಾಪ್ತಿಯಲ್ಲಿ ಬರುತ್ತಾರೆ.
ಯಾರಿಗೆ ಅನ್ವಯಿಸಲ್ಲ?
ದುಡಿಯುವ ಕೈಗಳಿಗೆ ಹಣ ನೀಡುವುದು ಮಾತ್ರವಲ್ಲದೇ ಯೋಜನೆಯಲ್ಲಿ ಕೆಲ ನಿಯಮಗಳನ್ನ ಅಳವಡಿಸಿದ್ದು, ರಸ್ತೆ ಬದಿ ಸ್ವಚ್ಛತೆ ಹಾಳು ಮಾಡುವವರಿಗೆ ಹಾಗೂ ಪರಿಸರಕ್ಕೆ ಹಾನಿಯುಂಟು ಮಾಡುವ ವಸ್ತುಗಳನ್ನು ಮಾರಾಟ ಮಾಡುವವರಿಗೆ ಯೋಜನೆ ಅನ್ವಯಿಸುವುದಿಲ್ಲ ಎಂಬ ನಿಯಮ ರೂಪಿಸಲಾಗಿದೆ.
ಸಾಲ ವಿತರಣೆ ಹೇಗೆ?
ಮಹತ್ವದ ಯೋಜನೆಯನ್ನು ಜಾರಿ ಮಾಡಲು ಈಗಾಗಲೇ ಸಿದ್ಧತೆಯನ್ನು ನಡೆಸಿರುವ ಸರ್ಕಾರ ಸಾಲ ವಿತರಣೆಯನ್ನು ಸಹಕಾರಿ ಬ್ಯಾಂಕ್ ಗಳ ಮೂಲಕ ಮಾಡಲು ನಿರ್ಧರಿಸಿದೆ. ಪ್ರಮುಖವಾಗಿ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕುಗಳು, ಮಹಿಳಾ ಸಹಕಾರಿ ಬ್ಯಾಂಕುಗಳು, ಪಟ್ಟಣ ಸಹಕಾರ ಬ್ಯಾಂಕು ಇದರಲ್ಲಿ ಸೇರಿದೆ.
ಸರ್ಕಾರದ ನೀಡುವ ಹಣಕ್ಕೆ ಸಮಯ ಮೀತಿಯಲ್ಲಿ ಬಡ್ಡಿಯನ್ನು ವಿಧಿಸಲು ತೀರ್ಮಾನ ಮಾಡಲಾಗಿದ್ದು, 2 ಸಾವಿರದಿಂದ 10 ಸಾವಿರ ಸಾಲ ಪಡೆದರೆ 3 ತಿಂಗಳ ಅವಧಿಗೆ ಶೇ.4ರಷ್ಟು ಬಡ್ಡಿ ವಿಧಿಸಲಿದೆ. ಸಾಲ ವಿತರಣೆ ಪ್ರತ್ಯೇಕ 8 ರೂಪೇ ಕಾರ್ಡ್ ನೀಡಲಿದೆ. ಯೋಜನೆ ಲಾಭ ಪಡೆಯಲು ಬಿಪಿಎಲ್ ಕಾರ್ಡ್ ಕಡ್ಡಾಯ ಮಾಡಿದ್ದು, ಗುರುತಿನಚೀಟಿ ಇಲ್ಲದವರಿಗೆ ಸಾಲ ವಿತರಿಸಲು ಅವಕಾಶ ನೀಡಿಲ್ಲ.
ಫಲಾನುಭವಿಗಳ ಶೂನ್ಯ ಬಾಲೆನ್ಸ್ ಉಳಿತಾಯ ಖಾತೆ ತೆರೆದು, ಸಾಲ ಅರ್ಜಿಗಳನ್ನು ಸ್ವೀಕಾರ ಮಾಡಲಿದೆ. ಯೋಜನೆ ಅಡಿ ಸಾಲ ಪಡೆದು ಸಮರ್ಪಕವಾಗಿ ಮರುಪಾವತಿಸಿದರೆ, ಸಾಲ ನವೀಕರಿಸಲು ಮತ್ತು ಶೇ.10ರಷ್ಟು ಮಿತಿ ಅಂದರೆ 15 ಸಾವಿರ ರೂ.ಗೆ ಹೆಚ್ಚಿಸಲು ಅವಕಾಶ ನೀಡಲಾಗಿದೆ. ಅಲ್ಲದೇ ಸಾಲ ಸೌಲಭ್ಯ ಹೆಚ್ಚು ಮಂದಿಗೆ ಲಭ್ಯವಾಗುವಂತೆ ಮಾಡಲು ಬೀದಿಬದಿ ವ್ಯಾಪಾರಿಗಳು ಹೆಚ್ಚು ಇರುವ ಮಾರುಕಟ್ಟೆ ಪ್ರದೇಶದಲ್ಲಿ ಮೊಬೈಲ್ ಘಟಕ ಸ್ಥಾಪನೆ ಮಾಡಲು ನಿರ್ಧಾರಿಸಿದೆ. ಉಳಿದಂತೆ ಜಿಲ್ಲಾಮಟ್ಟದ ಸಮಿತಿ ಸಭೆ ಸೇರಿ ನಗರ ಪ್ರದೇಶಕ್ಕೆ ಒಂದು ಬ್ಯಾಂಕ್ ರಚನೆ ಹಾಗೂ ಈ ಬ್ಯಾಂಕ್ನವರಿಗೆ ಬೀದಿಬದಿ ವ್ಯಾಪಾರಿಗಳ ಪಟ್ಟಿ ಸಿದ್ಧಪಡಿಸುವ ಹೊಣೆ ನೀಡಲಾಗುತ್ತದೆ. ಸಾಲ ವಾಪಸ್ ಸಂಗ್ರಹಿಸಲು ಪಿಗ್ಮಿ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಮಾಡಲಿದೆ.
Comments are closed.