ಕರ್ನಾಟಕ

ರೈತರ ಸಾಲ ವಸೂಲಿಗೆ ಅರೆಸ್ಟ್ ವಾರಂಟ್; Axis ಬ್ಯಾಂಕ್ ವಿರುದ್ಧ ಆಕ್ರೋಶ

Pinterest LinkedIn Tumblr


ಬೈಲಹೊಂಗಲ\ಬೆಳಗಾವಿ: ಸಾಲ ಮರು ಪಾವತಿಸುವಂತೆ ರೈತರಿಗೆ ಆ್ಯಕ್ಸಿಸ್ ಬ್ಯಾಂಕ್ ಕೋರ್ಟ್ ಮುಖಾಂತರ ಅರೆಸ್ಟ್ ವಾರಂಟ್ ಜಾರಿಗೊಳಿಸಿದ್ದನ್ನು ವಿರೋಧಿಸಿ ನೂರಾರು ರೈತರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಬೈಲಹೊಂಗಲದಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ ಗಳಿಗೆ ಬೀಗ ಹಾಕಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.

ರೈತರ ಪ್ರತಿಭಟನೆ, ಆಕ್ರೋಶದ ನಡುವೆಯೇ ಸಾಲ ವಸೂಲಿಗಾಗಿ ರೈತರ ಮೇಲೆ ಒತ್ತಡ ಹೇರಬಾರದು ಎಂದು ರಾಜ್ಯ ಸರ್ಕಾರ ಆ್ಯಕ್ಸಿಸ್ ಬ್ಯಾಂಕ್ ಗೆ ಮೌಖಿಕ ಆದೇಶ ನೀಡಿದೆ ಎಂದು ವರದಿ ತಿಳಿಸಿದೆ. ಈ ನಿಟ್ಟಿನಲ್ಲಿ ರೈತರ ಮೇಲಿನ ಎಲ್ಲಾ ಕೇಸ್ ವಾಪಸ್ ಪಡೆಯಲು ನಿರ್ಧರಿಸಿರುವುದಾಗಿ ಬೈಲಹೊಂಗಲ ಆ್ಯಕ್ಸಿಸ್ ಬ್ಯಾಂಕ್ ಮ್ಯಾನೇಜರ್ ರಾಜಕುಮಾರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸಾಲ ವಸೂಲಾತಿಗಾಗಿ ರೈತರಿಗೆ ಅರೆಸ್ಟ್ ವಾರಂಟ್ ಅನ್ನು ಕಳುಹಿಸಿದ್ದರಿಂದ ಬೈಲಹೊಂಗಲ, ಚಾಮರಾಜನಗರ,ಮಂಡ್ಯ ದಾವಣಗೆರೆಯಲ್ಲಿ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಮಣಿದ ಆ್ಯಕ್ಸಿಸ್ ಬ್ಯಾಂಕ್ ಇದೀಗ ರೈತರ ಮೇಲಿನ ಎಲ್ಲಾ ಕೇಸ್ ವಾಪಸ್ ಪಡೆಯುವ ತೀರ್ಮಾನಕ್ಕೆ ಬಂದಿದೆ.

ಪಶ್ಚಿಮ ಬಂಗಾಳ ಕೋರ್ಟ್ ನ ರಜೆ ಮುಗಿದ ಬಳಿಕ 140 ರೈತರ ಮೇಲಿನ ಕೇಸ್ ವಾಪಸ್ ಪಡೆಯುವುದಾಗಿ ಮ್ಯಾನೇಜರ್ ರಾಜಕುಮಾರ್ ತಿಳಿಸಿದ್ದಾರೆ. ಜೋನಲ್ ಕಚೇರಿ ಕೋಲ್ಕತಾದಲ್ಲಿ ಇರುವುದರಿಂದ ಪಶ್ಚಿಮ ಬಂಗಾಳ ಕೋರ್ಟ್ ನಲ್ಲಿ ಎರಡು ವರ್ಷಗಳ ಹಿಂದೆ ಕೇಸ್ ದಾಖಲಿಸಲಾಗಿತ್ತು ಎಂದರು.

Comments are closed.