ಕರ್ನಾಟಕ

ಬಿಜೆಪಿ ಸೇರಲು 100 ಕೋಟಿ ಆಮಿಷ; ಯಡ್ಡಿ ವಿರುದ್ಧ ಶಾಸಕ ರಾಜೇಗೌಡ ಆರೋಪ

Pinterest LinkedIn Tumblr


ಹಾಸನ: ಸಮ್ಮಿಶ್ರ ಸರ್ಕಾರವನ್ನು ಕೆಡವಲು ಸತತ ಪ್ರಯತ್ನ ಮಾಡುತ್ತಿರುವ ಬಿಜೆಪಿ ಆಪರೇಷನ್​ ಮೂಲಕ ಮೈತ್ರಿ ಪಕ್ಷಗಳ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದೆ ಎಂಬ ಪ್ರಬಲ ಆರೋಪದ ಬೆನ್ನಲ್ಲೇ ಇದೀಗ ಕಾಂಗ್ರೆಸ್​ ಶಾಸಕರೊಬ್ಬರು ಆಪರೇಷನ್ ಕಮಲ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಬುಧವಾರ ಹಾಸನಾಂಬೆ ದೇವಿ ದರ್ಶನ ಪಡೆದ ಶೃಂಗೇರಿ ಕಾಂಗ್ರೆಸ್ ಶಾಸಕ ರಾಜೇಗೌಡ ಅವರು ಸಂಬಂಧಿಕರ ಮೂಲಕ ತಮ್ಮನ್ನು ಬಿಜೆಪಿಗೆ ಸೆಳೆಯಲು ಯತ್ನ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಂಬಂಧಿಕರು ಮತ್ತು ನಾರ್ವೆ ಸೋಮಶೇಖರ ಮೂಲಕ ಪಕ್ಷಕ್ಕೆ ಸೆಳೆಯುವ ಯತ್ನ ಮಾಡಲಾಗಿತ್ತು. 50 ಕೋಟಿ ರೂ. ಜೊತೆಗೆ ಮಂತ್ರಿ ಸ್ಥಾನ ಅಥವಾ ನೂರು ಕೋಟಿ ರೂ. ನೀಡುವುದಾಗಿ ಆಫರ್ ನೀಡಿದ್ದರು. ಆದರೆ, ನಾನು ಪಕ್ಷ ನಿಷ್ಠ. ಹಾಗಾಗಿ ಅವರ ಯಾವುದೆ ಆಮಿಷಕ್ಕೆ ಬಲಿಯಾಗಿಲ್ಲ ಎಂದು ರಾಜೇಗೌಡ ಅವರು ಹೇಳಿದ್ದಾರೆ.

ರಾಜ್ಯ ಸಮ್ಮಿಶ್ರ ಸರ್ಕಾರ ಉರುಳಿಸಲು ಕಾಂಗ್ರೆಸ್​ನ ಹಲವು ಶಾಸಕರಿಗೆ ಬಿಜೆಪಿ ಗಾಳ ಹಾಕುತ್ತಿದೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಶಾಸಕರೊಬ್ಬರು ಈ ಹೊಸ ಬಾಂಬ್​ ಸಿಡಿಸಿದ್ದಾರೆ.

ಸರ್ಕಾರ ಇನ್ನೂ ಸಾಕಷ್ಟು ಅಭಿವೃದ್ಧಿ ಮಾಡಲು ಕನಿಷ್ಠ ಒಂದು ವರ್ಷ ಕಾಲಾವಕಾಶ ಬೇಕು. ಐದು ವರ್ಷ ಅವಕಾಶ ಸಿಕ್ಕರೆ ರಾಜ್ಯದಲ್ಲಿ ಉತ್ತಮ‌ ಪ್ರಗತಿಯಾಗಲಿದೆ ಎಂದ ರಾಜೇಗೌಡ, ಬಿಜೆಪಿ ಆಪರೇಷನ್ ಕಮಲದ ಬಗ್ಗೆ ಕಿಡಿಕಾರಿದರು.

ನೆನ್ನೆಯಷ್ಟೇ ಪಿರಿಯಾಪಟ್ಟಣ ಹಾಗೂ ಶಿರಾ ಶಾಸಕರಿಗೆ ಬಿಜೆಪಿ ಗಾಳ ಹಾಕಿದ್ದ ಬಗ್ಗೆ ಸಿಎಂ ಮಾಹಿತಿ ನೀಡಿದ್ದ ಬೆನ್ನಲ್ಲೇ ಇದೀಗ ಮತ್ತೋರ್ವ ಕಾಂಗ್ರೆಸ್ ಶಾಸಕರಿಗೂ ಬಿಜೆಪಿಗೆ ಸೆಳೆಯಲು ಆಮಿಷವೊಡ್ಡಿರುವುದು ಬಯಲಾಗಿದೆ.

Comments are closed.