ಮೈಸೂರು: ಟಿಪ್ಪು ಜಯಂತಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಬ್ಬರೂ ಗೈರು ಹಾಜರಾಗುವ ಮೂಲಕ ಮುಸ್ಲಿಂ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಕಿಡಿಕಾರಿದ್ದಾರೆ.
ಮೈಸೂರಿನ ಹೆಚ್.ಡಿ. ಕೋಟೆಯಲ್ಲಿ ಮಾತನಾಡಿದ ತನ್ವೀರ್ ಸೇಠ್ ಮೈತ್ರಿ ಸರ್ಕಾರದ ವಿರುದ್ಧವೇ ಧ್ವನಿಯೆತ್ತಿದ್ದಾರೆ. ಬಿಗಿ ಭದ್ರತೆಯಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತಿದೆ. ಬೈಕ್ನಲ್ಲಿ ಇಬ್ಬರು ಹೋದರೆ ಪೊಲೀಸರು ಅಡ್ಡಗಟ್ಟಿ ಎಲ್ಲಿಗೆ ಹೋಗುತ್ತಿದ್ದೀರಿ? ಎಂದು ಕೇಳುತ್ತಿದ್ದಾರೆ. ಇಷ್ಟೊಂದು ನಿರ್ಬಂಧ ವಿಧಿಸುವ ಅಗತ್ಯವಾದರೂ ಏನಿತ್ತು? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಸರ್ಕಾರವೇ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಪಾಲ್ಗೊಂಡಿಲ್ಲ. ಇದು ಮುಸ್ಲಿಂ ಸಮುದಾಯಕ್ಕೆ ಮಾಡುತ್ತಿರುವ ಅವಮಾನ. ಸಿಎಂ ಕುಮಾರಸ್ವಾಮಿ ಹೆಚ್.ಡಿ. ಕೋಟೆಯಲ್ಲೇ ಇದ್ದಾರೆ ಎಂಬ ಮಾಹಿತಿಯಿದೆ. ಅವರು ಇರುವ ಜಾಗದಲ್ಲೇ ಟಿಪ್ಪು ಜಯಂತಿ ನಡೆಯುತ್ತಿದೆ. ಆದರೂ ಅವರು ಇಲ್ಲಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೈತ್ರಿ ಸರ್ಕಾರ ಬೇರೆ ಜಯಂತಿಗಳಿಗೆ ತೋರಿಸುವ ಉತ್ಸಾಹವನ್ನು ಟಿಪ್ಪು ಜಯಂತಿಗೂ ತೋರಿಸಬೇಕು. ಮುಖ್ಯಮಂತ್ರಿಗಳು ಅನಾರೋಗ್ಯದ ಕಾರಣ ನೀಡಿ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದಾರೆ. ಉಪಮುಖ್ಯಮಂತ್ರಿಗಳು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಇಬ್ಬರೂ ಇಲ್ಲದೆ ಟಿಪ್ಪು ಜಯಂತಿ ನಡೆಯುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಮ್ಮ ಸಮುದಾಯದ ಬಗ್ಗೆ ಗೌರವ ಇದ್ದರೆ ಟಿಪ್ಪು ಜಯಂತಿಯಲ್ಲಿ ಭಾಗವಹಿಸಲಿ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
Comments are closed.