ಗೋಣಿಕೊಪ್ಪಲು: ಹಿಂದುತ್ವ ಹಾಗೂ ಅಭಿವೃದ್ಧಿಯನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಉದ್ದೇಶದಿಂದ ಪ್ರಧಾನಿ ನರೇಂದ್ರಮೋದಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ತಮ್ಮ ಅಧಿಕಾರ ಅವಧಿಯಲ್ಲೇ ಮುಂದಾಗಬೇಕು. ತಪ್ಪಿದಲ್ಲಿ ಸೋಲನುಭವಿಸಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಸರ್ಕಾರ ಹಿಂದುತ್ವ ಹಾಗೂ ಅಭಿವೃದ್ಧಿಯೊಂದಿಗೆ ಹೆಜ್ಜೆ ಹಾಕುತ್ತಿದೆ. ಇದನ್ನು ಅರಿತು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜಯ ಗಳಿಸಬೇಕಾದರೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಆಗ್ರಹಿಸಿದರು.
ವಾಜಪೇಯಿ ಸರ್ಕಾರ ಉತ್ತಮ ಆಡಳಿತ ನಡೆಸಿದ್ದರೂ ರಾಮ ಮಂದಿರ ನಿರ್ಮಾಣಕ್ಕೆ ಮುಂದಾಗದ ಕಾರಣ ಅವರು ಸೋತರು. ಇದೇ ಇತಿಹಾಸ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಬೇಕಾದರೆ ರಾಮಮಂದಿರ ನಿರ್ಮಾಣಕ್ಕೆ ಮುಂದಾಗಬೇಕಿದೆ. ತಪ್ಪಿದಲ್ಲಿ ಮುಂದಿನ ಚುನಾವಣೆಯಲ್ಲಿ ಮೋದಿ ವಿರುದ್ಧವಾಗಿ ಶ್ರೀರಾಮ ಸೇನೆ ಕಾರ್ಯನಿರ್ವಹಿಸಲಿದೆ ಎಂದರು.
ಸಂತಾಪ: ಕೇಂದ್ರ ಸಚಿವ ಅನಂತಕುಮಾರ್ ನಿಧನದಿಂದ ಬಿಜೆಪಿ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಆಘಾತವಾಗುವ ಸಾಧ್ಯತೆ ಇದೆ. ಅವರು ಚಾಣಾಕ್ಷ ತಂತ್ರಗಾರಿಕೆಯ ವ್ಯಕ್ತಿಯಾಗಿದ್ದರು. ಬಿಜೆಪಿ ಮತ್ತು ಆರ್‌ಎಸ್‌ಎಸ್, ಹಿಂದು ಸಂಘಟನೆ ಮೂಲಕ ಒಂದು ಪರಿವಾರವಾಗಿ ದುಡಿದವರು. ಅವರ ನಿಧನದಿಂದ ಹೆಚ್ಚು ನಷ್ಟವಾಗಿದೆ ಎಂದು ಮುತಾಲಿಕ್ ತಿಳಿಸಿದರು.
ಗೋಷ್ಠಿಯಲ್ಲಿ ಹಿಂದು ಕಾರ್ಯಕರ್ತರಾದ ಗಣೇಶ್, ಅಶೋಕ್ ರೈ ಇದ್ದರು.
Comments are closed.