ಬೆಂಗಳೂರು: ದೆಹಲಿಯಲ್ಲಿ ವಿಪರೀತ ವಾಯುಮಾಲಿನ್ಯ ಇರುವ ಹಿನ್ನೆಲೆಯಲ್ಲಿ ಡೀಸೆಲ್ ಕಾರುಗಳನ್ನ ನಿಷೇಧಿಸುವ ಕುರಿತು ಚರ್ಚೆಗಳಾಗುತ್ತಿವೆ. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಂದ ದೊಡ್ಡ ಹೊಗೆ ಮೂಲಕ ಮಾಲಿನ್ಯ ಸೃಷ್ಟಿಯಾಗುತ್ತದೆಂಬುದು ಎಲ್ಲರಿಗೂ ಗೊತ್ತಿರುವಂಥದ್ದೇ. ಮೋದಿ ಸರಕಾರವು 2030ರಷ್ಟರಲ್ಲಿ ದೇಶಾದ್ಯಂತ ಎಲೆಕ್ಟ್ರಿಕ್ ಕಾರುಗಳು ಮಾತ್ರ ಚಾಲನೆಯಲ್ಲಿರಬೇಕೆಂಬ ಮಹತ್ವಾಕಾಂಕ್ಷಿ ಗುರಿ ಇಟ್ಟುಕೊಂಡಿದೆ. ಈಗಾಗಲೇ ಕೆಲ ಪ್ರಮುಖ ವಾಹನ ತಯಾರಿಕಾ ಕಂಪನಿಗಳು ಎಲೆಕ್ಟ್ರಿಕ್ ಕಾರು ಉತ್ಪಾದನೆಗೆ ಅಸ್ಥೆ ವಹಿಸುತ್ತಿವೆ. ಇಂಥ ಹೊತ್ತಿನಲ್ಲಿ ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿಯ ವರದಿಯೊಂದು ಬೆಚ್ಚಿಬೀಳಿಸುವ ಸತ್ಯಾಂಶವೊಂದನ್ನು ಹೊರಚೆಲ್ಲಿದೆ. ಆ ವರದಿ ಪ್ರಕಾರ ಪೆಟ್ರೋಲ್ ವಾಹನ ಬಿಟ್ಟು ಎಲೆಕ್ಟ್ರಿಕ್ ಕಾರುಗಳನ್ನ ಚಲಾಯಿಸುವುದರಿಂದ ಮಾಲಿನ್ಯ ಕಡಿಮೆ ಆಗುವುದಿಲ್ಲ. ಅಷ್ಟೇ ಅಲ್ಲ, ಎಲೆಕ್ಟ್ರಿಕ್ ಕಾರುಗಳಿಂದ ಈಗಿರುವ ಮಾಲಿನ್ಯ ಇನ್ನಷ್ಟು ತೀವ್ರಗೊಳ್ಳಲೂಬಹುದಂತೆ.
ಎಲೆಕ್ಟ್ರಿಕ್ ಕಾರುಗಳಿಂದ ಮಾಲಿನ್ಯ ಹೇಗಾಗುತ್ತೆ?
ಪೆಟ್ರೋಲ್, ಡೀಸೆಲ್ ವಾಹನಗಳು ಹೊರಸೂಸುವ ಹೊಗೆಯಲ್ಲಿ ಕಾರ್ಬನ್ ಅಂಶ ಇರುತ್ತದೆ. ಇದರಿಂದ ವಾಯು ಮಾಲಿನ್ಯ ಆಗುತ್ತದೆ. ಎಲೆಕ್ಟ್ರಿಕ್ ವಾಹನಗಳಿಂದ ಯಾವುದೇ ಕಾರ್ಬನ್ ಹೊಗೆ ಹೊರಸೂಸುವುದಿಲ್ಲ. ಇದು ನಿಜವೇ. ಆದರೆ, ವಾಹನಗಳಿಗೆ ವಿದ್ಯುತ್ ಚಾರ್ಜ್ ಮಾಡಲು ವಿದ್ಯುತ್ ಘಟಕಗಳ ಅಗತ್ಯವಿರುತ್ತದೆ. ಕಲ್ಲಿದ್ದಲುಗಳ ಶಕ್ತಿಯಿಂದ ನಡೆಯುವ ಈ ವಿದ್ಯುತ್ ಘಟಕಗಳಿಂದ ತೀವ್ರ ಮಟ್ಟದಲ್ಲಿ ಮಾಲಿನ್ಯ ಆಗುವುದೇ ಈಗಿರುವ ದೊಡ್ಡ ಪ್ರಶ್ನೆಯಾಗಿದೆ. ಎಲೆಕ್ಟ್ರಿಕ್ ವಾಹನಗಳಿಂದ ಕಡಿಮೆಯಾಗುವ ಮಾಲಿನ್ಯವು, ಅದೇ ಎಲೆಕ್ಟ್ರಿಕ್ ವಾಹನಗಳಿಂದ ವಿದ್ಯುತ್ ಘಟಕಗಳ ಮೂಲಕ ಪರೋಕ್ಷವಾಗಿ ಮಾಲಿನ್ಯ ಹೆಚ್ಚಳವಾಗುವುದು ವಿಪರ್ಯಾಸವೇ ಸರಿ.
ಪರಿಹಾರ ಇಲ್ಲವೇ?
ಸ್ವಲ್ಪ ಗಟ್ಟಿ ಮನಸ್ಸು ಮಾಡಿದರೆ ಈ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು ಎನ್ನುತ್ತಾರೆ ತಜ್ಞರು. ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಹಾಗೆ ಮಾಡಿದರೆ ಕಾರ್ಬನ್ ಹೊರಸೂಸುವಿಕೆಯನ್ನು ನಿಗ್ರಹಿಸಬಹುದು. ಈಗಾಗಲೇ ಅನೇಕ ರಾಷ್ಟ್ರಗಳಲ್ಲಿ ಪರ್ಯಾಯ ಇಂಧನದ ಉತ್ಪಾದನೆಗೆ ಪ್ರಯೋಗಗಳಾಗುತ್ತಿವೆ. ಸೌರಶಕ್ತಿ, ವಾಯುಶಕ್ತಿ, ಅನಿಲಶಕ್ತಿಯ ಮೂಲಕ ವಿದ್ಯುತ್ ಉತ್ಪಾದನೆಯಾಗುತ್ತಿರುವ ಪ್ರಮಾಣ ವರ್ಷ ವರ್ಷ ಏರಿಕೆಯಾಗುತ್ತಿದೆ. ಒಂದು ಅಂದಾಜಿನ ಪ್ರಕಾರ, 2040ರಷ್ಟರಲ್ಲಿ ವಿಶ್ವವು ವಿದ್ಯುತ್ ಉತ್ಪಾದನೆಯಲ್ಲಿ ಸಂಪೂರ್ಣವಾಗಿ ಕಲ್ಲಿದ್ದಲು ಮುಕ್ತಗೊಂಡು ಶುದ್ಧ ಇಂಧನದ ಸೌಭಾಗ್ಯ ಹೊಂದುವ ಕಾಲ ಬರಲಿದೆಯಂತೆ.
(ಆಧಾರ: ಬ್ಲೂಮ್ಬರ್ಗ್ ವೆಬ್ನಲ್ಲಿ ಬಂದ ಮಾಹಿತಿ)
Comments are closed.