ಕರ್ನಾಟಕ

ತಾಯಿ ಮಾಡಿದ ಸಾಲಕ್ಕೆ 13 ವರ್ಷದ ಮಗಳ ವಿವಾಹವಾದ 53 ವರ್ಷದ ವ್ಯಕ್ತಿ  

Pinterest LinkedIn Tumblr


ಬೆಂಗಳೂರು: ವಿಧವೆ ಮಹಿಳೆ ಜೀವನ ನಿರ್ವಹಣೆಗೆ ಮಾಡಿದ್ದ ಒಂದೂವರೆ ಲಕ್ಷ ರೂ. ಸಾಲದ ಹಣ ವಾಪಸ್‌ ಕೊಡದ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಂಡ 53 ವರ್ಷದ ವ್ಯಕ್ತಿ ಆಕೆಯ 13 ವರ್ಷದ ಮಗಳನ್ನೇ ವಿವಾಹವಾದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ತಾಯಿಯ ಸಾಲದ ಕೂಪಕ್ಕೆ 53 ವರ್ಷದ ವ್ಯಕ್ತಿಗೆ ಕೊರಳೊಡ್ಡಿ ಅರಿಶಿನ ದಾರ ಕಟ್ಟಿಸಿಕೊಂಡಿದ್ದ ಅಪ್ರಾಪ್ತೆಗೆ, ನೆರೆಮನೆಯ ಮಹಿಳೆ “ಅರಿಶಿನ ಕೊಂಬು’ ಕಟ್ಟಿಸಿಕೊಳ್ಳುವುದರ ಬಗ್ಗೆ ವಿವರಿಸಿದಾಗಲೇ ತನಗೆ ವಿವಾಹವಾಗಿದೆ ಎಂಬ ಸತ್ಯ ಅರಿವಿಗೆ ಬಂದಿದೆ.

ಮನೆಗೆ ಬರುತ್ತಿದ್ದ ಹಿರಿಯ ವ್ಯಕ್ತಿ ಹಾಗೂ ತಾಯಿಗೆ ಜ್ವರ ಬಂದಿದ್ದಕ್ಕೆ ಮಂತ್ರ ಎಂದು ನಂಬಿಸಿ ಅರಿಶಿನಕೊಂಬು ಕಟ್ಟಿಸಿದ್ದರು ಎಂಬ ವಿಚಾರವನ್ನು ಮಹಿಳೆಯ ಹತ್ತಿರ ಬಾಲಕಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾಳೆ. ಕೂಡಲೇ, ಆಕೆ ಚೈಲ್ಡ್‌ ಲೈನ್‌ ಇಂಡಿಯಾ ಫೌಂಡೇಶನ್‌ನ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೇ ಆಗಮಿಸಿದ ಚೈಲ್ಡ್‌ ಫೌಂಡೇಶನ್‌ ಕೇಂದ್ರದ ಸಿಬ್ಬಂದಿ, ಬಾಲ್ಯ ವಿವಾಹಕ್ಕೆ ಒಳಗಾಗಿದ್ದ ಬಾಲಕಿಯನ್ನು ರಕ್ಷಿಸಿದ್ದು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಾಲಕಿಯನ್ನು ಎನ್‌ಜಿಓ ನಡೆಸುತ್ತಿರುವ ಆಶ್ರಯ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಮತ್ತೂಂದೆಡೆ 13 ವರ್ಷದ ಬಾಲಕಿಯನ್ನು ವಂಚನೆಯ ಮೂಲಕ ವಿವಾಹ ಮಾಡಿಕೊಂಡ ವ್ಯಕ್ತಿಯ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ಫೌಂಡೇಷನ್‌ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸಾಲದ ಬದಲಿಗೆ ಮಗಳನ್ನೇ ಕೇಳಿದ ಕೀಚಕ!: ರಮಾ (ಬದಲಾಯಿಸಲಾಗಿದೆ) ಅವರ ಪತಿ ಅನಾರೋಗ್ಯದಿಂದ ಹಲವು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಹೀಗಾಗಿ 13 ವರ್ಷದ ಬಾಲಕಿ ಹಾಗೂ 4 ವರ್ಷದ ಇಬ್ಬರು ಹೆಣ್ಣುಮಕ್ಕಳ ಪೋಷಣೆ ರಮಾ ಅವರ ಹೆಗಲೇರಿತ್ತು. ಗಂಡ ತೀರಿಹೋದ ಬಳಿಕ ಬದುಕಿನ ಬಂಡಿ ದೂಡಲು, ಅವರಿವರ ಮನೆಕೆಲಸ ಮಾಡಿ ರಮಾ ಮನೆ ಬಾಡಿಗೆ, ಮಕ್ಕಳ ಶಿಕ್ಷಣ ಸೇರಿ ಜೀವನ ಸಾಗಿಸುತ್ತಿದ್ದಳು. ಮಕ್ಕಳ ಅನಾರೋಗ್ಯ ಕಾರಣದಿಂದ 53 ವರ್ಷದ ವ್ಯಕ್ತಿ ಸೇರಿ ಪರಿಚಯಸ್ಥರ ಬಳಿ ಒಂದೂವರೆ ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಒಂದು ಲಕ್ಷ ರೂ.ನಷ್ಟು ಸಾಲ ನೀಡಿದ್ದ ಆ ವ್ಯಕ್ತಿ ಪದೇ ಪದೆ ಹಣ ಹಿಂದಿರುಗಿಸಲು ಕಿರುಕುಳ ನೀಡತೊಡಗಿದ್ದ. ಕೊಡದಿದ್ದರೆ ಮಗಳನ್ನೇ ಮದುವೆ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದ. ಆತನ ಕಿರುಕುಳಕ್ಕೆ ಬೇಸತ್ತು ಮಹಿಳೆಯೂ ಒಪ್ಪಿದ್ದರಿಂದ, 9ನೇ ತರಗತಿ ಓದುತ್ತಿರುವ ಬಾಲಕಿಗೆ ಆಕೆಯ ಅರಿವಿಗೆ ಬರದಂತೆ ಕೆಲ ತಿಂಗಳ ಹಿಂದೆ ಅರಿಶಿಣ ಕೊಂಬು ಕಟ್ಟಿ ಮದುವೆಯಾಗಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದ್ದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಘಟನೆಯಿಂದ ಆಘಾತಗೊಂಡಿದ್ದ ಸಂತ್ರಸ್ತ ಬಾಲಕಿ ಕೌನ್ಸೆಲಿಂಗ್‌ ಬಳಿಕ ಮೊದಲಿನಂತೆ ಲವಲವಿಕೆಯಿಂದ ಇದ್ದಾಳೆ. ಉನ್ನತ ವಿದ್ಯಾಭ್ಯಾಸ ಮಾಡುವ ಗುರಿ ಹೊಂದಿರುವ ಆಕೆ, ವೈದ್ಯೆ ಅಥವಾ ಇಂಜಿನಿಯರ್‌ ಆಗುವ ಕನಸು ಹೊಂದಿದ್ದಾಳೆ ಎನ್ನುತ್ತಾರೆ ಅಧಿಕಾರಿ.

ಕಳೆದ 6 ತಿಂಗಳಲ್ಲಿ ನಗರದಲ್ಲಿ 31 ಬಾಲ್ಯ ವಿವಾಹ
ಚೈಲ್ಡ್‌ಲೈನ್‌ ಇಂಡಿಯಾ ಫೌಂಡೇಷನ್‌ನ ಬೆಂಗಳೂರು ನೋಡೆಲ್‌ ಕೇಂದ್ರ ಸಹಾಯವಾಣಿಗೆ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಿದ್ದು, ಇದೇ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ ಅಂತ್ಯದವರೆಗೆ ಮೂವತ್ತೂಂದು ಬಾಲ್ಯ ವಿವಾಹಗಳು ಪ್ರಕರಣಗಳು ಬೆಳಕಿಗೆ ಬಂದಿವೆ.ಕೆ.ಆರ್‌.ಪುರ, ಮಾರತಹಳ್ಳಿ, ಚನ್ನಸಂದ್ರ, ಬಾಗಲೂರು ವ್ಯಾಪ್ತಿಯಲ್ಲಿ ಹೆಚ್ಚು ಬಾಲ್ಯ ವಿವಾಹಗಳು ನಡೆದಿವೆ ಎಂದು ಸಂಸ್ಥೆಯ ನಿರ್ದೇಶಕ ಡಾ.ವಾಸುದೇವ ಶರ್ಮ ಹೇಳುತ್ತಾರೆ.

ಬಾಲ್ಯವಿವಾಹ ಶಿಕ್ಷಾರ್ಹ ಅಪರಾಧ. ಬಾಲ್ಯ ವಿವಾಹ ಕಾಯಿದೆ ಸಮರ್ಪಕ ಅನುಷ್ಠಾನಗೊಳಿಸುವುದು, ಪೋಷಕರು ಮಕ್ಕಳಿಗೂ ಹೆಚ್ಚು ಅರಿವು ಮೂಡಿಸುವ ಸಲುವಾಗಿ ಪೊಲೀಸ್‌ ಇಲಾಖೆ ಹಾಗೂ ಸಕ್ಷಮ ಪ್ರಾಧಿಕಾರಗಳು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ
ಮಾಡಬೇಕು.
● ಸಿ.ಎನ್‌ ನಾಗಮಣಿ, ಸಂಯೋಜಕಿ, ಚೈಲ್ಡ್‌ ಲೈನ್‌ ಇಂಡಿಯಾ ಫೌಂಡೇಶನ್‌ ಬೆಂಗಳೂರು ನೋಡಲ್‌ ಕೇಂದ್ರ

Comments are closed.