ಕೊಡಗು: ಪ್ರವಾದಿ ಮೊಹಮ್ಮದ್ ಮತ್ತು ಟಿಪ್ಪು ಸುಲ್ತಾನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಬಂಧಿತರಾಗಿದ್ದ ಪತ್ರಕರ್ತ ಸಂತೋಷ್ ತಮ್ಮಯ್ಯ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಕೋರ್ಟ್ನ ನ್ಯಾಯಾಧೀಶ ಮೋಹನ್ ಗೌಡ ಅವರು ಅರ್ಧಗಂಟೆಗೂ ಹೆಚ್ಚು ಹೊತ್ತು ವಿಚಾರಣೆ ನಡೆಸಿದ ಬಳಿಕ ಸಂತೋಷ್ಗೆ ಷರತ್ತುಬದ್ಧ ಜಾಮೀನು ನೀಡಿದರು. 50 ಸಾವಿರ ರೂ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೌಲ್ಯದ ಇನ್ನಿಬ್ಬರ ಬಾಂಡ್ ಪಡೆದು ಸಂತೋಷ್ರನ್ನು ಬಿಡುಗಡೆಗೊಳಿಸಲು ಆದೇಶ ನೀಡಿದರು. ಸುಪ್ರೀಂ ಕೋರ್ಟ್ನಲ್ಲಿ ಇದೇ ರೀತಿಯ ಮೂರು ಪ್ರಕರಣಗಳಲ್ಲಿ ಜಾಮೀನು ಸಿಕ್ಕ ವಿಚಾರವನ್ನು ಉಲ್ಲೇಖಿಸಿ ಆರೋಪಿ ಪರ ವಕೀಲ ಕೃಷ್ಣಮೂರ್ತಿ ವಾದ ಮಂಡಿಸಿದ್ದರು.
ಏನು ಹೇಳಿದ್ದರು ಸಂತೋಷ್..?
ಪತ್ರಿಕೆಯೊಂದರಲ್ಲಿ ಅಂಕಣಕಾರರಾಗಿರುವ ಸಂತೋಷ್ ತಮ್ಮಯ್ಯ ಅವರು ನವೆಂಬರ್ 5ರಂದು ನಡೆದ “ಟಿಪ್ಪು ಕರಾಳ ಮುಖಗಳ ಅನಾವರಣ” ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಶತಮಾನದ ಹಿಂದೆ ಅರಬ್ ನಾಡಿನಲ್ಲಿ ಪ್ರವಾದಿಯೊಬ್ಬ ಹುಟ್ಟುಹಾಕಿದ್ದ ಅಸಹನೆಯ ಸಿದ್ದಾಂತದಿಂದ ಟಿಪ್ಪುವಿನಂಥ ಮತಾಂಧ ಕ್ರೂರಿ ಹುಟ್ಟಿದ್ದು ಎಂದು ಕಿಡಿಕಾರಿದ್ದರು. ಕೊಡಗು ಪ್ರಜ್ಞಾ ವೇದಿಕೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಆರೆಸ್ಸೆಸ್ನ ಸುಧಾಕರ್ ಹೊಸಳ್ಳಿ, ಮಂಗಳೂರಿನ ರಾಬರ್ಟ್ ರೊಜಾರಿಯೋ, ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಮತ್ತು ಬಾಚರಣಿಯಂಡ ಅಪ್ಪಣ್ಣ ಅವರೂ ಇಸ್ಲಾಮ್ ಧರ್ಮದ ಬಗ್ಗೆ ಅವಹೇಳನ ಮಾತುಗಳನ್ನಾಡಿದರೆನ್ನಲಾಗಿದೆ. ಪ್ರವಾದಿ ನಿಂದನೆ ಮಾಡಲಾಗಿದೆ ಎಂದು ಮುಸ್ಲಿಮ್ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು. ಸಿದ್ದಾಪುರದ ಅಸ್ಕರ್ ಎಂಬುವವರು ಸಂತೋಷ್ ಸೇರಿ ಐವರ ವಿರುದ್ಧ ಪ್ರವಾದಿ ನಿಂದನೆಯ ಆರೋಪ ಮಾಡಿ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮುಸ್ಲಿಮ್ ಸಂಘಟನೆಗಳು ವಿರಾಜಪೇಟೆಯ ಗಡಿಯಾರ ಕಂಬ ಬಳಿ ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದವು.
ನಿನ್ನೆ, ಸೋಮವಾರ ರಾತ್ರಿ 11ಗಂಟೆಗೆ ಪೊಲೀಸರು ತುಮಕೂರಿನಲ್ಲಿ ಸಂತೋಷ್ ತಮ್ಮಯ್ಯ ಅವರನ್ನು ಬಂಧಿಸಿ ಠಾಣೆಗೆ ಕರೆತಂದಿದ್ದರು. ಇದರಿಂದ ಕೆರಳಿದ ಕೆಲ ಹಿಂದೂಪರ ಸಂಘಟನೆಗಳು ಸಂತೋಷ್ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆಯನ್ನೂ ನಡೆಸಿದವು. ಸಂತೋಷ್ ಬಿಡುಗಡೆಯಾಗದಿದ್ದರೆ ಮಂಗಳವಾರ ಮಧ್ಯಾಹ್ನ 12ರಿಂದ 1ಗಂಟೆಯವರೆಗೆ ಸ್ವಯಂಪ್ರೇರಿತ ಕೊಡಗು ಬಂದ್ ಆಚರಿಸಲು ಹಿಂದೂ ಸುರಕ್ಷಾ ಸಮಿತಿ ಕರೆ ಕೊಟ್ಟಿತ್ತು. ಇದೀಗ, ನ್ಯಾಯಾಲಯದಿಂದಲೇ ಸಂತೋಷ್ ಬಂಧನಮುಕ್ತಗೊಂಡಿರುವ ಹಿನ್ನೆಲೆಯಲ್ಲಿ ಕೊಡಗು ಬಂದ್ ಇರುವುದಿಲ್ಲ ಎನ್ನಲಾಗಿದೆ.
Comments are closed.