ಚಾಮರಾಜನಗರ: ಶುಕ್ರವಾರ ಚಾಮರಾಜನಗರದ ಸುಳ್ವಾಡಿ ಗ್ರಾಮದಲ್ಲಿ ನಡೆದ ವಿಷ ಪ್ರಸಾದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಮಾರಮ್ಮ ದೇಗುಲದ ಆಡಳಿತ ಮಂಡಳಿಯಲ್ಲಿ 2 ಬಣಗಳಿದ್ದು, ಇಬ್ಬರ ನಡುವಿನ ಕಿತ್ತಾಟದಿಂದಲೇ ಉದ್ದೇಶಪೂರ್ವಕವಾಗಿ ವಿಷ ಬೆರೆಸಲಾಗಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾಗಿರುವ ಚೆನ್ನಪ್ಪಿ ಅವರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿದ ಚೆನ್ನಪ್ಪಿ ಅವರ ಮಗ ಲೊಕೇಶ್, ತಮಿಳುನಾಡಿನ ಜನರೇ ವಿಷ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
‘ನನ್ನ ತಂದೆಯವರು ಈ ದೇವಾಲಯದ ಟ್ರಸ್ಟಿ ಆಗಿದ್ದವರು. 10 ಜನರ ಸದಸ್ಯರೊಂದಿಗೆ ದೇವಾಲಯದ ಲೆಕ್ಕ ಪತ್ರಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು. ತಮಿಳುನಾಡು ಮೂಲದ ಭ್ರಹ್ಮೇಶ್ವರಿ ದೇವಾಲಯದ ಕಾಳಪ್ಪ ಎಂಬವರಿಗೂ ನನ್ನ ತಂದೆಗೂ ಆಗಿ ಬರುತ್ತಿರಲಿಲ್ಲ. ಅವರು ನಮ್ಮನ್ನೆಲ್ಲಾ ಕೊಲ್ಲಲು ವಿಷ ಹಾಕಿದ್ದಾರೆ’ ಎಂದು ಲೊಕೇಶ್ ಆರೋಪಿಸಿದ್ದಾರೆ.
ಓಂ ಶಕ್ತಿ ಪೂಜೆಗೆ ಬಂದಿದ್ದ 200 ಮಂದಿಗೆ ಬೆಳಗ್ಗೆ ಪ್ರಸಾದ ವಿತರಿಸಲಾಗಿತ್ತು. 8.30 ರ ವೇಳೆ ಪ್ರಸಾದ ತಿಂದ ಅವರೆಲ್ಲರು ಅಸ್ವಸ್ಥರಾದರು. ನಾವು ತಿನ್ನಬೇಕಿದ್ದ ಪ್ರಸಾದ ಅವರು ತಿಂದರು. ಇದರಲ್ಲಿ ಬೆಟ್ಟದ ಮೇಲಿರುವ ದೇವಾನ್ ಬುದ್ದಿ ( ಇಮ್ಮಡಿ ಮಹಾದೇವಸ್ವಾಮಿ) ಅವರ ಕೈವಾಡ ಕೂಡ ಇದೆ.
ದೇವಾನ್ ಬುದ್ದಿ ಅವರು ಸಹ ನನ್ನ ತಂದೆ ಮೇಲೆ ದ್ವೇಷ ಸಾಧಿಸುತ್ತಿದ್ದರು. ದೇವಾಲಯಕ್ಕೆ ಬರುವ ಎಲ್ಲ ಹಣವನ್ನು ಅವರು ಅಕೌಂಟ್‌ಗೆ ಹಾಕುತ್ತಿದ್ದರು. ಆದರೆ ಗೋಪುರ ಕಟ್ಟಲು ನನ್ನ ತಂದೆ ಮುಂದಾಳತ್ವ ವಹಿಸಿದ್ದರಿಂದ ದ್ವೇಷ ಬೆಳೆದಿತ್ತು.
ಹೀಗಾಗಿಯೇ ಅವರು ನನ್ನ ತಂದೆ ಹಾಗೂ ನಮ್ಮನ್ನೆಲ್ಲ ಕೊಲ್ಲಲು ವಿಷ ಹಾಕಿದ್ದಾರೆ.
ಈ ಬಗ್ಗೆ ಹೆಚ್ಚಿನ ತನಿಖೆ ನಡೆದರೆ ಸತ್ಯಾಂಶ ಹೊರ ಬರಲಿದೆ ಎಂದು ಚಿನ್ನಪ್ಪಿ ಅವರ ಮಗ ಲೋಕೇಶ್ ಆಗ್ರಹಿಸಿದ್ದಾರೆ.
ಮತ್ತೊಂದು ಮೂಲದ ಮಾಹಿತಿ ಪ್ರಕಾರ, ಮಾರಮ್ಮ ದೇಗುಲವಿರುವ ಜಮೀನಿನ ವಿಚಾರವಾಗಿ ಎರಡು ವರ್ಷಗಳಿಂದ ವಿವಾದವಿತ್ತು. ಎರಡು ಬಣಗಳ ನಡುವೆ ಆಗಾಗ ಜಗಳವಾಗುತ್ತಿತ್ತು. ಈಗ ಗೋಪುರ ನಿರ್ಮಾಣದ ಸಂದರ್ಭದಲ್ಲಿ ಒಂದು ಗುಂಪಿನವರು ತಮ್ಮ ಹಗೆಯನ್ನು ವಿಷಪ್ರಾಶನದ ಮೂಲಕ ತೀರಿಸಿಕೊಂಡಿರುವ ಶಂಕೆ ಇದೆ. ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮಾಜಿ ಸಿಎಂ ಭೇಟಿ
ಚಾಮರಾಜನಗರ ಸುಳ್ವಾಡಿ ಗ್ರಾಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರು ಭೇಟಿ ನೀಡಲಿದ್ದಾರೆ. ವಿಮಾನದ ಮೂಲಕ ಮೈಸೂರಿಗೆ ತೆರಳಿರುವ ಸಿದ್ದರಾಮಯ್ಯನವರು, ನಂತರ ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳಲಿದ್ದಾರೆ.
Comments are closed.