ಕರ್ನಾಟಕ

ಕಡಿಮೆ ಬೆಲೆಗೆ ಸ್ಮಾರ್ಟ್​ಫೋನ್ ಉಡುಗೊರೆ: ಯುವತಿಗೆ ವಿಳಾಸ ಕೊಟ್ಟವನಿಗೆ ಬಂದ ಪಾರ್ಸಲ್ ಏನು ಗೊತ್ತಾ?

Pinterest LinkedIn Tumblr


ಚಿಕ್ಕಬಳ್ಳಾಪುರ: ಫೋನ್ ಮಾಡಿ ಆ ಸ್ಕೀಮ್ ಇದೆ, ಆ ಗಿಫ್ಟ್ ಬಂದಿದೆ ಎಂದೆಲ್ಲಾ ಗಿಮಿಕ್ ಮಾಡಿ ಜನರನ್ನು ಏಮಾರಿಸುವ ಘಟನೆಗಳು ಸಾಕಷ್ಟು ನಡೆಯುತ್ತಲೇ ಇವೆ. ಅಂಥದ್ದೇ ಘಟನೆ ಶಿಡ್ಲಘಟ್ಟ ತಾಲೂಕಿನ ನಡೆದಿದೆ. ಅನಿರೀಕ್ಷಿತ ಉಡುಗೊರೆ ನೆಪದಲ್ಲಿ ಯುವಕನೊಬ್ಬನ ಮೊಬೈಲ್‌ ಫೋನ್‌ಗೆ ಯುವತಿಯೊಬ್ಬಳು ಕರೆ ಮಾಡಿ, ನಿಮ್ಮ ನಂಬರ್​ಗೆ ಅತೀ ಕಡಿಮೆ ಬೆಲೆಗೆ ಒಳ್ಳೆಯ ಸ್ಮಾರ್ಟ್​ಫೋನ್​ನ ಆಫರ್ ಬಂದಿದೆ ಎಂದು ಹೇಳುತ್ತಾಳೆ. ಹುಡುಗಿಯ ಮಾತು ನಂಬಿ ಆತ 1,800 ಕೊಟ್ಟು ಆಕೆ ಕಳುಹಿಸಿದ ಗಿಫ್ಟ್ ಪಡೆಯುತ್ತಾನೆ. ಆದರೆ, ಪೋಸ್ಟ್ ಮೂಲಕ ಬಂದ ಪ್ಯಾಕೇಜ್​ನಲ್ಲಿ ಮೊಬೈಲ್ ಬದಲು ದೇವರ ಫೋಟೋ ಇರುತ್ತದೆ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಕೆ. ಮುತ್ತುಕದ ಹಳ್ಳಿ ಗ್ರಾಮದ ಅನಿಲ್ ಎಂಬ ಯುವಕ ಮೋಸಕ್ಕೆ ಒಳಗಾದವರು. ವಿ.ಎಚ್. ಮಾರ್ಕೆಟಿಂಗ್ ಕಡೆಯಿಂದ ಯುವತಿಯೊಬ್ಬಳು ಅನಿಲ್ ಗೆ ಕರೆ ಮಾಡಿರುತ್ತಾಳೆ. ನಿಮ್ಮ ನಂಬರ್​ಗೆ ಅತಿ ಕಡಿಮೆ ದರದಲ್ಲಿ ಸ್ಮಾರ್ಟ್ ಫೋನ್ ಬಂದಿದೆ. ನೀವು 1,800 ಕೊಟ್ಟರೆ ಸಾಕು ಪಡೆದುಕೊಳ್ಳಬಹುದು ಎಂದು ಹೇಳಿದ್ದಾಳೆ. ಯುವಕ ತನ್ನ ವಿಳಾಸ ನೀಡಿದ್ದಾನೆ. 15 ದಿನಗಳ ಬಳಿಕ, ಅಂದ್ರೆ ಇಂದು ಪೋಸ್ಟ್ ಮ್ಯಾನ್ ಪಾರ್ಸೆಲ್ ತೆಗೆದುಕೊಂಡು ಬಂದು ಅನಿಲ್ ಗೆ ನೀಡಿದ್ದಾನೆ. ಅನಿಲ್ ಹತ್ತಿರ ದುಡ್ಡು ಇಲ್ಲದಿದ್ದರೂ ಬೇರೆಯವರ ಹತ್ತಿರ ಸಾಲ ಮಾಡಿ ಪೋಸ್ಟ್ ಮ್ಯಾನ್ ಗೆ 1800 ಕೊಟ್ಟಿದ್ದಾನೆ. ನಂತರ, ಪಾರ್ಸೆಲ್ ತೆಗೆದು ನೋಡಿದರೆ ಮೊಬೈಲ್ ಬದಲಾಗಿ ದೇವರ ಬೊಂಬೆಗಳು ಇದ್ದದ್ದು ಕಂಡುಬಂದಿದೆ. ಆದರೆ, ಮೋಸಕ್ಕೊಳಗಾದ ಅನಿಲ್ ಅವರದ್ದು ಬಡಕುಟುಂಬವಾಗಿದ್ದು, ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಾರೆ.

ಉದ್ದೇಶಪೂರ್ವಕವಾಗಿ ಮಾಡಿದ ವಂಚನೆಯೋ ಅಥವಾ ಮಾರ್ಕೆಟಿಂಗ್ ಕಂಪನಿಯವರು ತಪ್ಪಿ ಮಾಡಿದ ಯಡವಟ್ಟೋ ಗೊತ್ತಿಲ್ಲ. ವಂಚನೆ ಮಾಡುವವರೇ ಆಗಿದ್ದರೆ ದೇವರ ಗೊಂಬೆಗಳ ಬದಲು ಪಾರ್ಸಲ್​ನಲ್ಲಿ ಬೇರೇನಾದರೂ ವಸ್ತುಗಳನ್ನಿಡುತ್ತಿದ್ದರೆಂಬ ವಾದವಿದೆ.

ಆದರೆ, ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ಅಮಾಯಕ ವ್ಯಕ್ತಿಗಳಿಗೆ ಆಸೆ ಹುಟ್ಟಿಸಿ ಇಂತಹ ವಂಚನೆ ಮಾಡುವ ಜಾಲವೇ ಇದೆ ಎಂಬುದು ವಿವಿಧ ಪ್ರಕರಣಗಳಿಂದ ದೃಢಪಟ್ಟಿದೆ. ಸಾರ್ವಜನಿಕರು ಎಚ್ಚೆತ್ತುಕೊಂಡು ಇಂಥ ಆಫರ್​ಗಳನ್ನು ನಂಬದೆ ಮೋಸ ಹೋಗದಂತೆ ಎಚ್ಚರ ವಹಿಸಬೇಕಿದೆ.

Comments are closed.