ಬದಾಮಿ: ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿಯೇ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಎಂದು ಈಗಾಗಲೇ ನಿರ್ಧಾರ ಮಾಡಲಾಗಿದೆ. ಆದರೆ, ಇದಕ್ಕೆ ಕಾಂಗ್ರೆಸ್ನ ಸಾಕಷ್ಟು ನಾಯಕರ ಸಹಮತವಿಲ್ಲ ಎಂಬುದು ಆಗಾಗ ಬಹಿರಂಗವಾಗುತ್ತಲೇ ಇರುತ್ತದೆ. ಇಂದು ಬದಾಮಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆ ಕೂಡ ಅದನ್ನೇ ಪ್ರತಿಬಿಂಬಿಸಿದ್ದಂತೆ ಇತ್ತು.
“ಯಾರೋಬ್ಬರು ಒಂದೇ ಸ್ಥಾನದಲ್ಲಿ ಗೂಟಾ ಹೊಡ್ಕೊಂಡು ಕೂರುವುದಿಲ್ಲ,” ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇವರ ಹೇಳಿಕೆಯ ಒಳಾರ್ಥ, ಈ ಮೈತ್ರಿ ಸರ್ಕಾರದಲ್ಲಿ ಒಬ್ಬರೇ ಸಿಎಂ ಇರುವುದಿಲ್ಲ ಎಂಬುದೋ ಅಥವಾ ಮುಂದಿನ ಸರ್ಕಾರ ನಮ್ಮದೇ ಬಂದು, ಆಗ ತಮ್ಮ ಪಕ್ಷದವರು ಮುಖ್ಯಮಂತ್ರಿ ಆಗುತ್ತಾರೋ ಎಂಬುದನ್ನು ಅವರೇ ತಿಳಿಸಬೇಕು.
ಈ ಹಿಂದೆ ತಾವೇ ಮುಖ್ಯಮಂತ್ರಿಯಾಗಬೇಕು ಎಂಬ ಇಚ್ಛೆಯನ್ನು ಹೊಂದಿದ್ದ ಸಿದ್ದರಾಮಯ್ಯ ಈಗ ತಮ್ಮ ಬೆಂಬಲಿಗ ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ್ದಾರೆ.
ಬದಾಮಿಯಲ್ಲಿ ವಾಲ್ಮೀಕಿ ಸಮುದಾಯದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಟ್ಟವನು ನಾನು. ಸತೀಶ್ ಜಾರಕಿಹೊಳಿ ಕೂಡ ಇದೇ ನ್ಯಾಯದ ಮೇಲೆ ನಂಬಿಕೆ ಇರುವವರು. ಅವರು ಯಾಕೆ ಸಿಎಂ ಆಗಬಾರದು ಎಂದು ಪ್ರಶ್ನಿಸುವ ಮೂಲಕ ತಮ್ಮ ಸಮಕಾಲೀನ ರಾಜಕೀಯ ಆಪ್ತರ ಪರ ಬ್ಯಾಟಿಂಗ್ ಮಾಡಿದ್ದಾರೆ.
ಸಿದ್ದರಾಮಯ್ಯ ಅವರು ಭಾಷಣ ಮಾಡುವಾಗ ಸಭಿಕರು ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಎಂದು ಕೂಗಿ ಹೇಳಿದರು. ಆಗ ಸಭಿಕರ ಮಾತಿಗೆ ಸಹಮತ ಸೂಚಿಸಿದ ಸಿದ್ದರಾಮಯ್ಯ, ಹೌದು ಸತೀಶ್ ಜಾರಕಿಹೊಳಿ ಒಮ್ಮೆಯಾದರೂ ಸಿಎಂ ಆಗಬೇಕು ಎಂದರು.
ಅಲ್ಲದೇ ಸಾಮಾಜಿಕ ನ್ಯಾಯದ ನೊಗವನ್ನು ನಾನು ಕಷ್ಟಪಟ್ಟು ಇಲ್ಲಿಯವರೆಗೂ ಎಳೆದುಕೊಂಡು ಬಂದಿದ್ದೇನೆ. ಈಗ ಅದು ನಿಮ್ಮ ಕೈಯಲ್ಲಿದೆ. ಅದನ್ನು ನೀವು ಮುಂದಕ್ಕೆ ಎಳೆದುಕೊಂಡು ಹೋಗಿ, ಇಲ್ಲವಾದಲ್ಲಿ ಅಲ್ಲಿಯೇ ಬಿಡಿ. ಯಾರದೋ ಮಾತು ಕೇಳಿ ಹಿಂದಕ್ಕೆ ಮಾತ್ರ ತೆಗೆದುಕೊಂಡು ಹೋಗಬೇಡಿ ಎಂದು ಮನವಿ ಮಾಡಿದರು. ಈ ಮೂಲಕ ಸಾಮಾಜಿಕ ನ್ಯಾಯದ ಬಗ್ಗೆ ಅಧಿಕಾರ ಚುಕ್ಕಾಣಿ ಹಿಡಿದವರು ಸರಿಯಾಗಿ ಕೆಲಸ ತೋರುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ನಾನು ಸಿಎಂ ಆಗಿದ್ದಾಗ ನನ್ನನ್ನು ಅಹಿಂದ ಮುಖ್ಯಮಂತ್ರಿ ಎಂದು ಟೀಕಿಸಿದರು. ಆದರೆ ನಾನು ಕ್ಷೀರ ಭಾಗ್ಯ, ಶೂ ಭಾಗ್ಯ ಒಂದೇ ಜಾತಿಯ ಮಕ್ಕಳಿಗೆ ಕೊಟ್ಟಿರಲಿಲ್ಲವೇ. ರಾಜ್ಯದ ಅಭಿವೃದ್ಧಿ ಮಾಡಲಿಲ್ಲವೇ ಎಂದು ಪ್ರಶ್ನಿಸಿದರು.
Comments are closed.