ಬೆಳಗಾವಿ: ರಾಜ್ಯ ಸರ್ಕಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ನೆಪ ಮಾತ್ರಕ್ಕೆ ಅಧಿವೇಶನ ನಡೆಸಿದ್ದು, ಉತ್ತರ ಕರ್ನಾಟಕ ಅಭಿವೃದ್ಧಿಗೆ ಯಾವುದೇ ಚರ್ಚೆ ನಡೆಸದೆ ಅನಗತ್ಯವಾಗಿ ಅಧಿವೇಶನ ನಡೆಸಿದ್ದಾರೆ. ಸಿಎಂ ಅವರಿಗೆ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ, ಆದ್ದರಿಂದ ನಾನು ಈಗಾಗಲು ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಅಚಲನಾಗಿದ್ದೇನೆ ಎಂದು ಬಿಜೆಪಿ ಮುಖಂಡ ಉಮೇಶ್ ಕತ್ತಿ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಉಮೇಶ್ ಕತ್ತಿ ಅವರು, ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಕಳೆದ 10 ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಅಭಿವೃದ್ಧಿ ಮಾಡದಿದ್ದರೆ ಪ್ರತ್ಯೇಕ ರಾಜ್ಯ ಮಾಡಿ ಎಂದು ಹೇಳಿದ್ದೆ. ಈ ನಿರ್ಧಾರದಿಂದ ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಅಭಿವೃದ್ಧಿ ಮಾಡಿಲ್ಲ, ಉತ್ತರ ಕರ್ನಾಟಕ ಪ್ರತ್ಯೇಕ ಮಾಡಿ ಎಂದು ಒತ್ತಾಯ ಮಾಡುತ್ತೇವೆ ಎಂದರು.
ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಿರಿ: ರಾಜ್ಯದ ಉಸ್ತುವಾರಿ ವಹಿಸಿರುವ ಸಿಎಂ ಅವರಿಗೆ ಉತ್ತರ ಕರ್ನಾಟಕ ಅಗತ್ಯವಿಲ್ಲದಿದ್ದರೆ ದಯಾ ಮಾಡಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಿರಿ. ಆ ಮೂಲಕ ರಾಜ್ಯ ಇಬ್ಭಾಗ ಮಾಡುವ ಬಗ್ಗೆ ಸ್ಪಷ್ಟಪಡಿಸಿ. ಕಳೆದ ಐದು ವರ್ಷ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರ ಸರ್ಕಾರ ಹಾಗೂ ಹೊಸ ಸರ್ಕಾರವೂ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿಲ್ಲ. ಮಠಾಧೀಶರು ಕೂಡ ಅಭಿವೃದ್ಧಿ ಕುರಿತು ಒಳ್ಳೆ ಸಲಹೆ ಕೊಟ್ಟಿದ್ದರು ಅದರ ಬಗ್ಗೆ ಕೂಡ ಸಿಎಂ ಮಾತನಾಡಿಲ್ಲ. ರಾಜ್ಯ ರೈತರ ಸಾಲಮನ್ನಾ ಬಗ್ಗೆಯೂ ಸ್ಪಷ್ಟನೆ ಇಲ್ಲ ಆರೋಪಿಸಿದರು.
ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಕ್ಕರೆ ಕಾರ್ಖಾನೆಗಳು ಇದ್ದು, ಅಭಿವೃದ್ಧಿಯ ವಿಚಾರವಾಗಿ ಕೆಲ ಸರ್ಕಾರ ಇಲಾಖೆಯನ್ನು ಸುವರ್ಣ ಸೌಧಕ್ಕೆ ವರ್ಗಾವಣೆ ಮಾಡಲು ಮನವಿ ಮಾಡಲಾಗಿತ್ತು. ಆದರೆ ಇದು ಯಾವುದು ಆಗಿಲ್ಲ. ರಾಜ್ಯದಲ್ಲಿ ಸರ್ಕಾರವಿದ್ದರು ಸರಿಯಾದ ಅಭಿವೃದ್ಧಿ ಯೋಜನೆಗಳು ಜಾರಿ ಆಗುತ್ತಿಲ್ಲ. ಆದ್ದರಿಂದ ಮತ್ತೆ ಪ್ರತ್ಯೇಕ ಉತ್ತರ ಕರ್ನಾಟಕ ಬಗ್ಗೆ ಒತ್ತಾಯ ಮಾಡುತ್ತಿರುವುದಾಗಿ ತಿಳಿಸಿದರು.
Comments are closed.