ಬೆಂಗಳೂರು: ಸರ್ಕಾರ ರೈತರ ಬಗ್ಗೆ ಎಷ್ಟೇ ಕಾಳಜಿ ವಹಿಸುತ್ತಿದ್ದರೂ ಸರ್ಕಾರದ ಮೇಲೆ ಒಂದಿಲ್ಲೊಂದು ಆರೋಪಗಳು ಬರುತ್ತಲೇ ಇವೆ. ರೈತರ ಸಾಲಮನ್ನಾ ವಿಷಯದಲ್ಲಿ ಸಿಎಂ ಕುಮಾರಸ್ವಾಮಿ ನಮಗೆ 38 ಸ್ಥಾನ ಕೊಟ್ಟವರ ಎದುರು ಮಗನ ಮೇಲೆ ಆಣೆ ಮಾಡುವ ಸ್ಥಿತಿ ಬಂದುಬಿಟ್ಟಿತು ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಕಣ್ಣೀರು ಹಾಕಿದ್ದಾರೆ.
ಇಂದು ಜೆಡಿಎಸ್ ಸಭೆಯಲ್ಲಿ ಮಾತನಾಡಿರುವ ಮಾಜಿ ಪ್ರಧಾನಿ ದೇವೇಗೌಡರು, ಯಾರದೋ ಆರೋಪದಿಂದ ನೊಂದು ಕುಮಾರಸ್ವಾಮಿ ತನ್ನ ಒಬ್ಬನೇ ಒಬ್ಬ ಮಗನ ಮೇಲೆ ಆಣೆ ಮಾಡಿ ರೈತರ ಸಾಲಮನ್ನಾ ಬಗ್ಗೆ ಹೇಳುವ ಪರಿಸ್ಥಿತಿ ಬಂದಿದೆ. ಯಡಿಯೂರಪ್ಪ ಮಾತೆತ್ತಿದರೆ ಅಪ್ಪ-ಮಕ್ಕಳನ್ನು ತೆಗೆಯುತ್ತೇನೆ ಅಂತ ಹೇಳುತ್ತಾರೆ. ನಾವು ಅಂತಹ ಪಾಪ ಏನು ಮಾಡಿದ್ದೇವೆ? ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಡ್ಡಿಯಾಗಬಾರದೆಂದು ಬಡ್ಡಿಗೆ 650 ಕೋಟಿ ರೂ. ಸಾಲ ತಂದಿದ್ದೆ. ಸಿದ್ದರಾಮಯ್ಯ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ಮುಂದುವರಿಸಬೇಕೆಂದು ಷರತ್ತು ಹಾಕಿದ್ದರು. ಸಾಲಮನ್ನಾ ಮಾಡೋಕೆ ಹಣ ಹೊಂದಿಸಬೇಕಲ್ಲ ಎಂದು ಕಣ್ಣೀರಿಡುತ್ತಲೇ ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು ದೇವೇಗೌಡರು.
ಈ ಪಕ್ಷವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಮಂತ್ರಿಗಳು ಮತ್ತು ಶಾಸಕರ ಮೇಲಿದೆ. ಎಲ್ಲರೂ ಮಂತ್ರಿಗಳಾಗಲು ಸಾಧ್ಯವಿಲ್ಲ. ನಮಗೆ ಹತ್ತು ನಿಗಮ ಮಂಡಳಿಗಳನ್ನು ಕೊಟ್ಟಿದ್ದಾರೆ. ಕಾಂಗ್ರೆಸ್ನವರಿಗೆ 20 ನಿಗಮ ಮಂಡಳಿಗಳಿವೆ. 30 ಶಾಸಕರಿಗೆ ಮೂರೋ ನಾಲ್ಕೋ ಪ್ರಭಾವಿ ಬೋರ್ಡ್ ಗಳು ಬರಬಹುದು. ಒಂದು ಆಫೀಸ್, ಅಧಿಕಾರಿಗಳು ಗೂಟದ ಕಾರು ಕೊಡುತ್ತಾರೆ. ಅದನ್ನು ತೆಗೆದುಕೊಂಡು ನೀವು ಮಾಡುವುದಾದರೂ ಏನು? ಎಂದು ದೇವೇಗೌಡರು ಮಾರ್ಮಿಕವಾಗಿ ನುಡಿದಿದ್ದಾರೆ.
ಇನ್ನು, ದೇವೇಗೌಡರ ಕಣ್ಣೀರನ್ನು ನೋಡಿ ಬೇಸರಗೊಂಡ ಸಿಎಂ ಕುಮಾರಸ್ವಾಮಿ, ಹಿಂದೆ ನಾನು ಇದೇ ವೇದಿಕೆಯಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡಿದ್ದೆ. ಅದೇ ಸಂದರ್ಭದಲ್ಲಿ ನಾನು ವಿಷಕಂಠನಾಗಿದ್ದೇನೆ ಎಂದು ಹೇಳಿದ್ದು ನಿಜ. ಆಗ ಅದಕ್ಕೆ ಸಾಕಷ್ಟು ಅರ್ಥ ಕಲ್ಪಿಸಿದ್ದರು. ಈಗ ನನ್ನ ಹತಾಶೆ, ಭಾವೋದ್ವೇಗವನ್ನು ನಿಯಂತ್ರಿಸಲು ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಇಂದು ನನ್ನ ತಂದೆಯವರೇ ಮಾತನಾಡುವಾಗ ಭಾವೋದ್ವೇಗಕ್ಕೆ ಒಳಗಾದರು ಎಂದು ಬೇಸರಿಸಿಕೊಂಡರು.
Comments are closed.