ಬೆಂಗಳೂರು: ಕಳೆದ ಬಾರಿ 2,18,488 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಲಾಗಿತ್ತು. ಈ ಬಾರಿ ಅದಕ್ಕೆ 15,650 ಕೋಟಿ ಹೆಚ್ಚಿಸಿ, 2,34,153 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮೈತ್ರಿ ಸರ್ಕಾರದಲ್ಲಿ ಎರಡನೇ ಬಜೆಟ್ ಮಂಡನೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಕಳೆದ ಬಾರಿ ರಾಜಸ್ವ ಲೆಕ್ಕ 106 ಕೋಟಿ ಕೊರತೆ ಇತ್ತು. ಈ ಬಾರಿ 258 ಕೋಟಿ ಕೊರತೆ ಇದೆ. ಕಳೆದ ಬಾರಿ ವೆಚ್ಚ 1,66,289 ಕೋಟಿ, ಈ ಬಾರಿ 1,81,605 ಕೋಟಿ. ಬಜೆಟ್ಗಾಗಿ ಈ ಬಾರಿ 48,601 ಕೋಟಿ ಸಾಲ ಆಗಿದೆ ಎಂದು ಮಾಹಿತಿ ನೀಡಿದರು.
ಕೃಷಿಯ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ಜಾರಿ ಮಾಡಿದ್ದೇವೆ. ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ನೀರಾವರಿ ಸೇರಿ ಕೃಷಿ ವಲಯಕ್ಕೆ 46,853 ಕೋಟಿ ಮೀಸಲಿಟ್ಟಿದ್ದೇವೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿದ್ದೇವೆ ಎಂದರು.
ಪ್ರಧಾನಿ ಮೋದಿ ರೈತರ ಸಾಲ ಮನ್ನಾ ವಿಚಾರವಾಗಿ ಸದನದಲ್ಲಿಯೇ ತಪ್ಪು ಮಾಹಿತಿ ನೀಡಿದ್ದಾರೆ. ಆದರೆ ನಮ್ಮ ಸಾಲ ಮನ್ನಾ ಯೋಜನೆ 4 ಲಕ್ಷ ರೈತ ಕುಟುಂಬಗಳಿಗೆ 1530 ಕೋಟಿ ತಲುಪಿದೆ. ಆದರೆ ಪ್ರಧಾನಿ 5 ಸಾವಿರ ಕುಟುಂಬಕ್ಕೆ ಮಾತ್ರ ಸಾಲ ಮನ್ನಾ ತಲುಪಿದೆ ಎಂದು ಸುಳ್ಳು ಹೇಳಿದ್ದಾರೆ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜೀವ್ ಗಾಂಧಿ ಆವಾಸ್ ಯೋಜನೆಯಡಿ ನಿರ್ಮಿಸುವ ಮನೆಗಳ ಉದ್ಘಾಟನೆಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಗೆ ಬರ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ನನಗೆ ಸೌಜನ್ಯಕ್ಕಾದರು ಆಹ್ವಾನ ನೀಡಿಲ್ಲ. ಯಾಕೆ ರಾಜ್ಯ ಸರ್ಕಾರ ಇದಕ್ಕೆ ಹಣ ನೀಡಿಲ್ವಾ. ಕಳೆದ ಬಾರಿಯ ಸಿದ್ದರಾಮಯ್ಯ ಸರ್ಕಾರ, ಹಾಗೂ ನಮ್ಮ ಸರ್ಕಾರದಿಂದ ಈ ಯೋಜನೆಗೆ ಹಣ ನೀಡಿದ್ದೇವೆ. ಅಲ್ಲಿ ಮನೆಗಳ ನಿರ್ಮಾಣಕ್ಕೆ ನಮ್ಮ ಸಹಾಯ ಕೂಡ ಇದೆ. ಆದರೆ ಪ್ರಧಾನಿಯವರು ಆ ಉದ್ಘಾಟನೆ ಕಾರ್ಯಕ್ರಮಕ್ಕೆ ನನ್ನನ್ನೆ ಕರೆದಿಲ್ಲ ಎಂದು ಪ್ರಧಾನಿ ವಿರುದ್ಧ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಗೃಹ ಲಕ್ಷ್ಮಿ ಬೆಳೆ ಸಾಲ ಶೇಕಡ 3ರ ಬಡ್ಡಿ ದರದಲ್ಲಿ ಸಾಲ ನೀಡಲು ಹೊಸ ಯೋಜನೆ. ಮಹಿಳೆಯರ ರಕ್ಷಣೆಗೆ ಈ ಯೋಜನೆ ಜಾರಿಗೆ ತರಲಾಗಿದೆ. ಬೆಲೆ ಕಡಿಮೆ ಇದ್ದಾಗ ರೈತರು ಉಗ್ರಾಣಗಳಲ್ಲಿ ಉತ್ಪನ್ನ ಸಂಗ್ರಹಿಸಿಟ್ಟು ಸಾಲ ಪಡೆದಿದ್ದರೆ ಬಡ್ಡಿರಹಿತ ಸಾಲ, ಹಾಗೂ ಸಾಗಾಣಿಕೆ ವೆಚ್ಚ ನೀಡಲಾಗುವುದು. 8 ತಿಂಗಳು ಬಡ್ಡಿ ರಹಿತ ಸಾಲ ಪಡೆಯಬಹುದು. ರೈತರ ಹಾಲಿಗೆ ಪ್ರೋತ್ಸಾಹಧನ 6 ರೂ. ಗೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.
ಔರಾದ್ಕರ್ ವರದಿಯಲ್ಲಿನ ಯಾವ ಅಂಶಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಅಧಿಕಾರಿಗಳ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಅದನ್ನು ಬಜೆಟ್ನಲ್ಲೇ ಮಾಡಬೇಕು ಎಂದೆನ್ನಿಲ್ಲ. ಅಧಿಕಾರಿಗಳು ಆ ವರದಿ ಕೊಟ್ಟ ತಕ್ಷಣ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಸಿಎಂ ಆಶ್ವಾಸನೆ ನೀಡಿದರು.
ಸಿದ್ದಗಂಗಾ ಶ್ರೀಗಳ ಹುಟ್ಟೂರು ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಅವರು ಸಮಾಜಕ್ಕೆ ಕೊಟ್ಟ ಕೊಡುಗೆಗೆ ಇದು ನಮ್ಮ ಚಿಕ್ಕ ಕಾಣಿಕೆ. ಹಾಗೆಯೇ ಬಾಲಗಂಗಾಧರ ಶ್ರೀಗಳ ಹುಟ್ಟೂರಿಗೂ ಕೊಟ್ಟಿದ್ದೇವೆ. ಗುರುತಿಸಲಾಗದ ತಳಸಮುದಾಯಗಳನ್ನೂ ಗುರುತಿಸಿದ್ದೇವೆ. ನಮ್ಮದು ಚುನಾವಣಾ ಬಜೆಟ್ ಅಲ್ಲ, ಅಭಿವೃದ್ಧಿ ದೃಷ್ಟಿಕೋನದ ಬಜೆಟ್ ಎಂದು ಬಣ್ಣಿಸಿದರು.
ಈ ವರ್ಷದ ಅಂತ್ಯದಲ್ಲಿ ಸಂಪೂರ್ಣವಾಗಿ ರೈತರ ಸಾಲಮನ್ನಾ ಮಾಡುತ್ತೇವೆ ಅನ್ನೋ ನಂಬಿಕೆ ಇದೆ. ಸಿದ್ದರಾಮಯ್ಯ ಅವರ ಕಾಲದಲ್ಲಿ 2200 ಕೋಟಿ ಸಾಲ ಇತ್ತು. ಅದನ್ನು ಈಗಾಗಲೇ ನೀಡಿದ್ದೇವೆ. ಈ ವರ್ಷ ಸಾಲಮನ್ನಾ ಮಾಡುತ್ತೇವೆ. 3 ಹಂತದವರೆಗೆ ಕಾಯೋ ಅವಶ್ಯಕತೆ ಇಲ್ಲ ಅನಿಸುತ್ತೆ. ಸಾಲ ಮನ್ನಾ ಯೋಜನೆಗೆ ನಮಗೆ ಯಾವುದೇ ಹಣದ ಕೊರತೆಯಿಲ್ಲ. ಈ ವರ್ಷ 46 ಸಾವಿರ ಕೋಟಿ ಸಾಲ ಪಡೆದಿದ್ದೇವೆ. ಈ ವರ್ಷವೇ ಸಾಲಮನ್ನಾ ಪೂರ್ಣವಾಗಲಿದೆ ಎಂದು ಎಚ್ಡಿಕೆ ಸಾಲ ಮನ್ನಾ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
Comments are closed.