ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಗ್ಗಜಗ್ಗಾಟ ಆರಂಭವಾಗಿದೆ. ಜೆಡಿಎಸ್ 10 ಸೀಟನ್ನಾದರೂ ಕೊಡಿ ಎಂದು ಕೇಳುತ್ತಿದ್ದರೆ ರಾಜ್ಯ ಕಾಂಗ್ರೆಸ್ ನಾಯಕರು 6 ಸೀಟುಗಳನ್ನು ಬಿಟ್ಟುಕೊಡಲು ಒಪ್ಪಿಕೊಂಡಿದ್ದಾರೆ. ಈ ಎಲ್ಲದರ ನಡುವೆ ಜೆಡಿಎಸ್ ಅಧಿಕಾರದಲ್ಲಿರುವ ಮಂಡ್ಯ ಕ್ಷೇತ್ರವೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಹಿರಿಯ ನಟ ಅಂಬರೀಶ್ ನಿಧನದ ನಂತರ ಸಕ್ರಿಯ ರಾಜಕೀಯಕ್ಕೆ ಕಾಲಿಟ್ಟಿರುವ ಸುಮಲತಾ ಮಂಡ್ಯ ಲೋಕಸಭೆಗೆ ಸ್ಪರ್ಧಿಸಲು ಕಾಂಗ್ರೆಸ್ನಿಂದ ಟಿಕೆಟ್ ಕೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಮೈತ್ರಿಯ ನೆಪವೊಡ್ಡಿ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದಿದೆ. ಟಿಕೆಟ್ ನೀಡದಿದ್ದರೂ ತಾವು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸುಮಲತಾ ಗಟ್ಟಿ ನಿರ್ಧಾರವನ್ನು ಈಗಾಗಲೇ ಪ್ರಕಟಿಸಿದ್ದಾರೆ. ಒಂದೆಡೆ ದೇವೇಗೌಡರ ಕುಟುಂಬದ ಕುಡಿ ನಿಖಿಲ್ ಕುಮಾರಸ್ವಾಮಿಯವರನ್ನು ಮಂಡ್ಯದಿಂದ ಸಕ್ರಿಯ ರಾಜಕಾರಣಕ್ಕೆ ತರಲು ಜೆಡಿಎಸ್ ಚಿಂತಿಸಿದೆ. ಇನ್ನೊಂದೆಡೆ ಸುಮಲತಾ ಅಡ್ಡಗಾಲಾಗಿ ನಿಂತಿದ್ದಾರೆ. ಅಂಬರೀಶ್ ಅಗಲಿಕೆಯಿಂದ ಮಂಡ್ಯದ ಜನತೆ ಸುಮಲತಾ ಅವರನ್ನು ಗೆಲ್ಲಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಈ ಎಲ್ಲ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಂಡುಕೊಳ್ಳುವ ಸಲುವಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಮತ್ತು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸಭೆ ಸೇರಿದ್ದರು. ಸಭೆಯಲ್ಲಿ ಎರಡೂ ಪಕ್ಷಗಳ ನಾಯಕರು ಸಮಸ್ಯೆಗೆ ಉತ್ತರ ಕಂಡುಕೊಂಡಿದ್ದು ಸುಮಲತಾ ಒಪ್ಪಿದರೆ ಮೈಸೂರಿನಿಂದ ಟಿಕೆಟ್ ಕೊಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಸುಮಲತಾರಿಗೆ ಕಾಂಗ್ರೆಸ್ನಿಂದಲೇ ಟಿಕೆಟ್ ನೀಡುವ ಮೂಲಕ ಮನವೊಲಿಸುವ ತಂತ್ರಕ್ಕೆ ಕಾಂಗ್ರೆಸ್ ಮುಖಂಡರು ಮುಂದಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಈ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಸೂಚನೆಯನ್ನೂ ನೀಡಿದೆ ಎನ್ನಲಾಗಿದೆ. ಕಾಂಗ್ರೆಸ್ ಬೇಡದಿದ್ದರೆ ಜೆಡಿಎಸ್ನಿಂದಲೂ ಮೈಸೂರಿನಿಂದ ಸ್ಪರ್ಧಿಸಲು ಟಿಕೆಟ್ ನೀಡಲು ದೇವೇಗೌಡರು ಒಪ್ಪಿದ್ದಾರೆ ಎನ್ನಲಾಗಿದೆ. ಈ ಮೂಲಕ ಕೊಡಗು – ಮೈಸೂರು ಕ್ಷೇತ್ರದಲ್ಲಿನ ಒಕ್ಕಲಿಗ ಮತಗಳ ಕ್ರೋಢೀಕರಣಕ್ಕೆ ಮೈತ್ರಿ ಪಕ್ಷಗಳು ಮುಂದಾಗಲಿವೆ ಎನ್ನಲಾಗುತ್ತಿದೆ.
ಆದರೆ ಮೈಸೂರಿನಿಂದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಎಂದೇ ಕರೆಸಿಕೊಳ್ಳುತ್ತಿರುವ ಸಿ.ಎಚ್. ವಿಜಯ್ ಶಂಕರ್ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕು. ವಿಜಯ್ ಶಂಕರ್ ಎರಡು ಬಾರಿ ಸಂಸದರಾಗಿದ್ದವರು. ಈ ಬಾರಿ ಮೈಸೂರಿನಿಂದ ಸ್ಪರ್ಧಿಸಿದರೆ ಗೆಲುವು ನಿಶ್ಚಿತ ಎಂಬ ಮಾತುಗಳೂ ಕೇಳಿ ಬರುತ್ತಿದೆ. ಆದರೆ ಈ ಹೊತ್ತಿನಲ್ಲಿ ಸುಮಲತಾರನ್ನು ಮೈಸೂರಿನಿಂದ ಕಣಕ್ಕಿಳಿಸುವ ಮಾತುಗಳು ಮೈತ್ರಿ ಪಕ್ಷಗಳ ಮುಖಂಡರಿಂದ ಕೇಳಿ ಬರುತ್ತಿದೆ. ಮೈತ್ರಿ ಪಕ್ಷಗಳ ಈ ನಿರ್ಧಾರದಿಂದ ಮಂಡ್ಯಕ್ಕಷ್ಟೇ ಸೀಮಿತವಾಗಿರುವ ಸಮಸ್ಯೆ ಪಕ್ಕದ ಜಿಲ್ಲೆ ಮೈಸೂರಿಗೂ ಹರಡುವ ಸಾಧ್ಯತೆಯಿದೆ ಎನ್ನುತ್ತಾರೆ ರಾಜಕೀಯ ಪಂಡಿತರು.
Comments are closed.