ಕರ್ನಾಟಕ

ಕರ್ನಾಟಕದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಮುಂದಾಗಿರುವ ಮಾಯಾವತಿ ನೇತೃತ್ವದ ಬಿಎಸ್ಪಿ

Pinterest LinkedIn Tumblr

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಮಾಯಾವತಿ ನೇತೃತ್ವದ ಬಿ ಎಸ್ ಪಿ ತೀರ್ಮಾನ ಮಾಡಿದೆ.

ಏಪ್ರಿಲ್ 18 ಮತ್ತು 23 ರಂದು ಎರಡು ಹಂತಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಾಗಿ ಪಕ್ಷದ ರಾಜ್ಯ ನಾಯಕ ಮಾಜಿ ಸಚಿವ ಎನ್. ಮಹೇಶ್ ಹೇಳಿದ್ದಾರೆ.

ಮೈಸೂರಿನಲ್ಲಿಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಬಾರಿ ಜೆಡಿಎಸ್ (ಎಸ್)ಜೊತೆ ಸೇರಿ ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ. ಈ ಬಾರಿ ಪಕ್ಷವು ಯಾರ ಹಂಗೂ ಇಲ್ಲದೇ ಏಕಾಂಗಿಯೇ ಚುನಾವಣೆ ಎದುರಿಸಲಿದೆ ಎಂದರು.

ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಬೀದರ್, ಕಲಬುರಗಿ, ಚಿಕ್ಕೋಡಿ ಮತ್ತು ಬಾಗಲಕೋಟೆ ಯಂತಹ ಸ್ಥಳಗಳಲ್ಲಿ ಸುಮಾರು 8 ರಿಂದ 10 ಲಕ್ಷ ಬೆಂಬಲಿಗರಿದ್ದಾರೆ. ಇವರ ಸಹಕಾರದಿಂದ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಸೆಣಸಬೇಕಿದೆ. ಪಕ್ಷದ ಕಾರ್ಯಕರ್ತರು ಕಷ್ಟಪಟ್ಟು ಕೆಲಸ ಮಾಡಬೇಕು ಎಂದರು.

ಕಾಂಗ್ರೆಸ್ ಪಕ್ಷ ಮತ್ತು ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳೊಂದಿಗೆ ಹೋರಾಡಿದ ಪಕ್ಷದಲ್ಲಿ ಕನಿಷ್ಠ ಎರಡು ಸೀಟುಗಳನ್ನಾದರು ಗೆಲ್ಲಬೇಕಿದೆ. ಪಕ್ಷದ ಮುಖ್ಯಸ್ಥೆ ಮಾಯಾವತಿ ಮೈಸೂರು ಸೇರಿದಂತೆ ರಾಜ್ಯದಲ್ಲಿ ಅನೇಕ ಕಡೆ ಪಕ್ಷದ ಚುನಾವಣಾ ಸಭೆ ನಡೆಸಲಿದ್ದಾರೆ.

ಎಸ್ ಪಿ (ಸಮಾಜವಾದಿ ಪಕ್ಷ) ಮತ್ತು ಬಿಎಸ್‌ಪಿ ಒಕ್ಕೂಟ ಉತ್ತರಪ್ರದೇಶದಲ್ಲಿ ಒಂದಾಗಿ ಚುನಾವಣೆ ಎದುರಿಸುತ್ತಿವೆ. ಮುಂದಿನ ಕೇಂದ್ರ ಸರ್ಕಾರ ರಚನೆಯಲ್ಲಿ ಬಎಸ್‌ಪಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಮಹೇಶ್ ಭವಿಷ್ಯ ನುಡಿದರು.

ಮಾಜಿ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಬಾ ಅವರು ಸಹ ಚಾಮರಾಜನಗರ ಕ್ಷೇತ್ರದಿಂದ ಬಿಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.

Comments are closed.