ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡುವ ಮೂಲಕ ಅವರ ರಾಜಕೀಯ ಪ್ರವೇಶಕ್ಕೆ ಸಿಎಂ ಕುಮಾರಸ್ವಾಮಿ ವೇದಿಕೆ ಸಜ್ಜುಗೊಳಿಸಿದ್ದಾರೆ. ಆದರೆ, ಇದೇ ಕ್ಷೇತ್ರದಿಂದ ಸುಮಲತಾ ಅಂಬರೀಷ್ ಸ್ಪರ್ಧೆ ಮಾಡುತ್ತಿರುವುದರಿಂದ ಮಗನ ರಾಜಕೀಯ ಭವಿಷ್ಯದ ಬಗ್ಗೆ ಕುಮಾರಸ್ವಾಮಿ ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನೆನ್ನೆ ಕುಮಾರಸ್ವಾಮಿ ಅವರು ಮಗನೊಂದಿಗೆ ದ್ವಾರಕಾನಾಥ್ ಗುರೂಜಿ ಅವರನ್ನು ಭೇಟಿಯಾಗಿ, ಮಗನ ರಾಜಕೀಯ ಭವಿಷ್ಯ ಕೇಳಿದ್ದಾರೆ.
ಭೇಟಿ ವೇಳೆ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯ ಕಷ್ಟ ಎಂದು ದ್ವಾರಕಾನಾಥ್ ಗುರೂಜಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ. “ನಿಖಿಲ್ ಚುನಾವಣೆಗೆ ಸ್ಪರ್ಧೆ ಮಾಡಿಬಿಟ್ಟಿದ್ದಾರೆ. ಈಗ ನಾನು ನಿಖಿಲ್ಗೆ ಆಶೀರ್ವಾದ ಮಾಡಲೇಬೇಕು. ಅಂತೆಯೇ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ,” ಎಂದು ದ್ವಾರಕಾನಾಥ್ ಹೇಳಿದ್ದಾರೆ. ಗುರೂಜಿಯವರ ಈ ಮಾತಿನಿಂದ ಸಿಎಂ ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾರಂತೆ.
ನಿಖಿಲ್ ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಬಗ್ಗೆ ಕುಮಾರಸ್ವಾಮಿ ತುಂಬಾನೇ ತಲೆಕೆಡಿಸಿಕೊಂಡಿದ್ದರು. ಮೊದಲ ಚಿತ್ರ ‘ಜಾಗ್ವಾರ್’ಗೋಸ್ಕರ ಸಾಕಷ್ಟು ಹಣವನ್ನು ವೆಚ್ಚ ಮಾಡಿದ್ದರು. ಇದೀಗ ರಾಜಕೀಯದಲ್ಲಿ ನಿಖಿಲ್ ಭವಿಷ್ಯ ಏನಾಗಲಿದೆ ಎನ್ನುವ ಬಗ್ಗೆ ಕುಮಾರಸ್ವಾಮಿಗೆ ಚಿಂತೆ ನಡೆಸಿದ್ದಾರೆ ಎನ್ನಲಾಗಿದೆ.
ಆದರೆ, ನಿಖಿಲ್ ವಿರುದ್ಧ ಸುಮಲತಾ ಸ್ಪರ್ಧಿಸಲಿದ್ದಾರೆ ಎಂದಾಗಲೇ ಅವರ ಮನಸ್ಸಲ್ಲಿ ಆತಂಕ ಮನೆ ಮಾಡಿತ್ತು. ಈಗ ದ್ವಾರಕನಾಥ್ ಅವರ ಹೇಳಿಕೆಯಿಂದ ಕುಮಾರಸ್ವಾಮಿ ಮತ್ತಷ್ಟು ಚಿಂತೆಗೆ ಒಳಗಾಗಿದ್ದಾರೆ.
ಸಿಎಂ ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ ಅವರು ಜ್ಯೋತಿಷ್ಯವನ್ನು ಬಹಳ ನಂಬುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೇ ಕಾರಣಕ್ಕೆ ಡಿಕೆ ಶಿವಕುಮಾರ್ ಅವರ ಆಪ್ತರಾಗಿರುವ ರಾಜಗುರು ದ್ವಾರಕಾನಾಥ್ ಅವರ ಮನೆಗೆ ನಿನ್ನೆ ರಾತ್ರಿ ತಮ್ಮೊಂದಿಗೆ ಮಗ ನಿಖಿಲ್ ಅವರನ್ನೂ ಕರೆದುಕೊಂಡು ಹೋಗಿರುವ ಸಿಎಂ ಕುಮಾರಸ್ವಾಮಿ, ದ್ವಾರಕನಾಥ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಆಶೀರ್ವಾದ ಪಡೆದಿದ್ದರು.
Comments are closed.