ಕರ್ನಾಟಕ

ದೇವೇಗೌಡ ಕುಟುಂಬ ಒಂದು ನಾಟಕ ಮಂಡಳಿ, ಇವರದು ಕಣ್ಣೀರು ಬ್ರ್ಯಾಂಡ್: ಬಿಜೆಪಿ ವ್ಯಂಗ್ಯ

Pinterest LinkedIn Tumblr

ಹಾಸನ ಕ್ಷೇತ್ರದ ಲೋಕಸಭಾ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅವರ ಹೆಸರು ಅಧಿಕೃತವಾಗಿ ಘೋಷಣೆಯಾಗಿದೆ. ಇಂದು ನಡೆದ ಜೆಡಿಎಸ್​ ಪ್ರಚಾರ ರ್ಯಾಲಿಯಲ್ಲಿ ತಮ್ಮ ಮೊಮ್ಮಗನ ಹೆಸರನ್ನು ಸೂಚಿಸುವ ವೇಳೆ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ಭಾವುಕರಾಗಿ ಕಣ್ಣೀರು ಹಾಕಿದರು. ನಿಮ್ಮೆಲ್ಲರ ಆಶಿರ್ವಾದ ಹಾಗೂ ಚನ್ನಕೇಶವ ದೇವರ ಆಶೀರ್ವಾದದಿಂದ ಹಾಸನ ಲೋಕಸಭೆ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸಿದ್ದೇನೆ. ಆದರೆ ಈ ಬಾರಿ ನಾನು ಸ್ಪರ್ಧಿಸುತ್ತಿಲ್ಲ. ಬದಲಾಗಿ ನನ್ನ ಮೊಮ್ಮಗ ಪ್ರಜ್ವಲ್ ರೇವಣ್ಣ ನಿಂತಿದ್ದಾರೆ. ನೀವೆಲ್ಲರೂ ಆತನಿಗೆ ಮತ ನೀಡಿ ಗೆಲ್ಲಿಸಬೇಕೆಂದು ಮಾಜಿ ಪ್ರಧಾನಿ ತಿಳಿಸಿದ್ದರು. ಕಣ್ಣೀರಿನೊಂದಿಗೆ ಭಾಷಣ ಮಾಡುತ್ತಿದ್ದ ತಂದೆಯನ್ನು ನೋಡಿ, ಮಕ್ಕಳಾದ ಸಚಿವ ರೇವಣ್ಣ ಹಾಗೂ ಮೊಮ್ಮಗ ಪ್ರಜ್ವಲ್ ರೇವಣ್ಣ ಕೂಡ ಅತ್ತಿದ್ದರು.

ಈ ಕಣ್ಣೀರಿನ ಪ್ರಸಂಗವನ್ನು ಪ್ರಸ್ತಾಪಿಸಿ ಇದೀಗ ಬಿಜೆಪಿ ಪಕ್ಷ ಅಖಾಡಕ್ಕಿಳಿದಿದೆ. ರೈತರು ಆತ್ಮಹತ್ಯೆ ಮಾಡಿದಾಗ ಅಳಲಿಲ್ಲ. ಪುಲ್ವಾಮಾ ದಾಳಿಯಾಗಿ ಯೋಧರು ಮಡಿದಾಗ ಕಣ್ಣೀರು ಬರಲಿಲ್ಲ. ಚುನಾವಣೆ ಬಂದಾಗ ಮಾತ್ರ ಮನೆ ಮಂದಿಗೆಲ್ಲ ವೇದಿಕೆಯಲ್ಲಿ ಕಣ್ಣೀರು! ರಾಜ್ಯದ ಜನರು ಈಗಲೂ ಮರುಳಾಗುವರೇ? ಎಂದು ಬಿಜೆಪಿ ಟ್ವೀಟ್​ ಮಾಡಿ ವ್ಯಂಗ್ಯವಾಡಿದೆ.

ಇನ್ನು ಶಾಸಕ ಸಿ.ಟಿ ರವಿಯವರು, ಚುನಾವಣೆ ಹತ್ತಿರ ಬರುವುದಕ್ಕೂ ದೇವೇಗೌಡರ ಕುಟುಂಬದ ಸದಸ್ಯರು ಕಣ್ಣೀರು ಸುರಿಸುವುದಕ್ಕೂ ಎತ್ತಣ ಸಂಬಂಧ ಸರ್ವಜ್ಞ ? ? ? ದೇವೇಗೌಡ ನಾಟಕ ಮಂಡಳಿ ಅಧಿಕೃತವಾಗಿ ರಂಗಪ್ರವೇಶ ಮಾಡಿದಂತಾಯಿತು ! ! ! ಎಂದು ಟ್ವೀಟ್ ಮಾಡಿದ್ದಾರೆ.

ಕಣ್ಣೀರು ದೇವೇಗೌಡರ ಕುಟುಂಬದ ಬ್ರ್ಯಾಂಡ್ ಎಂದು ತಿಳಿಸಿದ ಮಾಜಿ ಸಿಎಂ ಆರ್ ಅಶೋಕ್, ಸೋಪು ಟೀ ಪುಡಿಗೆ ಬ್ರ್ಯಾಂಡ್ ಇರುವಂತೆ, ದೇವೇಗೌಡರ ಕುಟುಂಬಕ್ಕೆ ಕಣ್ಣೀರೆ ಬ್ರ್ಯಾಂಡ್. ಚುನಾವಣೆ ಸಮಯದಲ್ಲಿ ಕಣ್ಣೀರು ಹಾಕುವುದು ಅವರ ಕುಟುಂಬದಿಂದ ನಡೆದುಕೊಂಡು ಬಂದಿದೆ. ಇದು ಜನರ ಮನಸ್ಸನ್ನು ದುರ್ಬಳಕೆ ಮಾಡಿಕೊಳ್ಳುವು ತಂತ್ರ. ಜನರು ಇಂತಹ ಕಣ್ಣೀರಿಗೆ ಮರುಳಾಗಬಾರದು.

Comments are closed.