ಬೆಂಗಳೂರು: ರೈತರ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಮೊದಲು ಬಿಡಿ. ಬಾಯಿ ಮಾತಿನಲ್ಲಿ ರೈತರ ಬಗ್ಗೆ ಮಾತನಾಡುತ್ತಾ ಹೋಗುವುದು ಅನ್ನದಾತನಿಗೆ ಮಾಡಿದ ಅನ್ಯಾಯ. ಭರವಸೆಯ ಮಾತುಗಳನ್ನು ಬಿಟ್ಟು ಪ್ರಾಮಾಣಿಕವಾಗಿ ರೈತರ ಕಷ್ಟಗಳಿಗೆ ಸ್ಪಂದಿಸಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವರಿಗೆ ಸುಮಲತಾ ತಿರುಗೇಟು ನೀಡಿದ್ದಾರೆ.
ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿರುವ ಅವರು, ರೈತರು ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನಕ್ಕಿಂತ ಬರೀ ಮಾತನಾಡುವುದು ಅನ್ಯಾಯ. ಅದು ರೈತಾಪಿ ವರ್ಗಕ್ಕೆ ಮಾಡಿದ ಮೋಸ ಎಂದು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ನಿನ್ನೆಯಷ್ಟೆ ಮಂಡ್ಯದಲ್ಲಿ ನಿಖಿಲ್ ಅಭ್ಯರ್ಥಿ ಎಂದು ಘೋಷಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ದೇವೇಗೌಡರು ಭಾಷಣದಲ್ಲಿ ಮಂಡ್ಯ ಜಿಲ್ಲೆ ಹಾಗೂ ಇಲ್ಲಿನ ರೈತರ ಬಗ್ಗೆ ಸುಧೀರ್ಘ ಭಾಷಣ ಮಾಡಿದ್ದರು.
ಜೆಡಿಎಸ್ ವರಿಷ್ಠ, ಮುಖ್ಯಮಂತ್ರಿ ಹಾಗು ಸಚಿವರ ಭಾಷಣಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ಸಂದೇಶ ರವಾನಿಸುವ ಮೂಲಕ ಎಲ್ಲರ ಭಾಷಣಕ್ಕೂ ಸುಮಲತಾ ಪ್ರತ್ಯುತ್ತರ ನೀಡಿದ್ದಾರೆ. ಇಂದು ಮೂರು ಸಂದೇಶಗಳನ್ನು ಫೇಸ್ ಬುಕ್ ಪೇಜ್ ನಲ್ಲಿ ಹಾಕಿರುವ ಸುಮಲತಾ ಜನರ ಮುಗ್ದತೆಯನ್ನು ದುರುಪಯೋಗ ಮಾಡಿಕೊಳ್ಳಬೇಡಿ ಎಂಬ ಎಚ್ಚರಿಕೆ ರವಾನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್ ನಲ್ಲಿ ‘ಅಂಬರೀಶ್‍ರನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಮಂಡ್ಯದ ಪ್ರತಿಯೊಬ್ಬರು ಅಂಬರೀಶ್ ಬಂಧುಗಳು. ಏಕೆಂದರೆ ಅಂಬರೀಶ್ ಅವರಲ್ಲಿ ಇರುವ ಗುಣವೇ ಮಂಡ್ಯದ ಜನರಲ್ಲಿ ಇದೆ. ಮಂಡ್ಯದ ಮಣ್ಣಿನ ಗುಣದಲ್ಲಿ ಕಪಟವೇ ಇಲ್ಲ, ಸುಳ್ಳುಗಳಿಲ್ಲ, ಸಮಯಕ್ಕೆ ತಕ್ಕ ಹಾಗೆ ಮಾತನಾಡುವ ಜಾಯಮಾನ ಮಂಡ್ಯದ ಮಣ್ಣಿನಲ್ಲಿ ಇಲ್ಲ’.
‘ಮಂಡ್ಯದ ಮಣ್ಣು ಬರಿ ಮುಗ್ಧತೆಯಿಂದ ಕೂಡಿಲ್ಲ. ಅದು ಪ್ರಾಮಾಣಿಕತೆಯಿಂದಲೂ ಕೂಡಿದೆ. ಪ್ರಾಮಾಣಿಕತೆಗೆ ಮೋಸ ಎಸಗುವ ರಾಜಕೀಯ ತಮಗೆ ಬೇಕಾಗಿಲ್ಲ. ತಮ್ಮದು ಪ್ರಾಮಾಣಿಕವಾದ, ಅಂಬರೀಶ್ ಪಾಲಿಸುತ್ತಿದ್ದ ರಾಜಕೀಯ ಮಂಡ್ಯದ ಜನರ ರಾಜಕೀಯ’ ಎಂದು ಜೆಡಿಎಸ್ ನಾಯಕರಿಗೆ ಸೂಕ್ಷ್ಮ ಮತ್ತು ಭಾವನಾತ್ಮಕವಾಗಿ ಟೀಕಿಸಿದ್ದಾರೆ.
ಮತ್ತೊಂದು ಪೋಸ್ಟ್ ನಲ್ಲಿ ‘ ಅಂಬರೀಶ್ ರಾಜಕೀಯ ನಾಟಕವಿಲ್ಲದ, ಸುಳ್ಳು ಭರವಸೆಗಳಿಲ್ಲದ, ಒಳಗೊಂದು ಹೊರಗೊಂದು ಮಾತುಗಳಿಲ್ಲದ, ಜನರಿಂದ ಕೆಲಸವಾಗಬೇಕು ಎಂದಾಗ ಜನರೆದುರು ಕಪಟ ನಾಟಕವಾಡಿ ಮೋಸಗೊಳಿಸದ, ನೇರಾನೇರ ಇದ್ದದ್ದು ಇದ್ದ ಹಾಗೆ ಹೇಳುವ ದಿಟ್ಟ ನಡೆಯ ರಾಜಕೀಯ ಅಂಬರೀಶ್ ರಾಜಕೀಯ. ಆ ರಾಜಕೀಯವೇ ಅತ್ಯುತ್ತಮ. ಅಂಬರೀಶ್ ರಾಜಕೀಯವೇ ನಮ್ಮದಾಗಲಿ ಎಂದು ತಮ್ಮ ಪೋಸ್ಟ್ ಮೂಲಕ ಜೆಡಿಎಸ್ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ.
ಕರ್ನಾಟಕ
Comments are closed.