ಕರ್ನಾಟಕ

ಎಲಿವೇಟೆಡ್ ಕಾರಿಡಾರ್ ವಿರೋಧಿಸಿ ಪ್ರತಿಭಟಿಸಿದ ಬೆಂಗಳೂರಿಗರು

Pinterest LinkedIn Tumblr


ಬೆಂಗಳೂರು: ರಾಜ್ಯ ಸರ್ಕಾರ ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಜಾರಿ ಮಾಡಲು ಮುಂದಾಗಿದ್ದ ಎಲಿವೇಟೆಡ್ ಕಾರಿಡರ್ ಯೋಜನೆಗೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿದ್ದು, ಇಂತಹ ಯೋಜನೆ ಬೇಡವೇ ಬೇಡ ಎಂಬ ಕೂಗು ಜೋರಾಗುತ್ತಿದೆ.

ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿ ಮಾಡಲು ಉದ್ದೇಶಿಸಿದ್ದ ಸ್ಟೀಲ್ ಬ್ರಿಡ್ಜ್ ಬೇಡವೇ ಬೇಡಾ ಎಂದಿದ್ದ ಸಿಲಿಕಾನ್ ಸಿಟಿ ಮಂದಿ ಈಗ ಎಲಿವೇಟೆಡ್ ಕಾರಿಡಾರ್ ಯೋಜನೆ ಬೇಡ ಎಂದು ಮತ್ತೆ ಸಮ್ಮಿಶ್ರ ಸರ್ಕಾರದ ಯೋಜನೆ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಕೈಯಲ್ಲಿ ಬ್ಯಾನರ್ ಹಿಡಿದು ಧಿಕ್ಕಾರ, ಬೇಡವೇ ಬೇಡ ಈ ಯೋಜನೆ ಬೇಡ. ಪರಿಸರ ಉಳಿಸಿ ಬೆಂಗಳೂರು ಬೆಳಸಿ ಎಂದು ಘೋಷಣೆ ಕೂಗಿ ನಗರದ ಮೌರ್ಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.

ಸುಮಾರು 50ಕ್ಕೂ ಹೆಚ್ಚು ನಾಗರಿಕ ಸಂಘಟನೆಯವರು ನಗರದ ಮೌರ್ಯ ಸರ್ಕಲ್‍ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಸರ್ಕಾರ ತನ್ನ ಲಾಭಕ್ಕಾಗಿ ಟ್ರಾಫಿಕ್ ಕಾರಣವನ್ನೇ ಮುಂದಿಟ್ಟುಕೊಂಡು ಬೇಡದಂತಹ ಯೋಜನೆಗಳನ್ನ ತಂದು ಬೆಂಗಳೂರನ್ನ ಹಾಳು ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಅಲ್ಲದೇ ಈ ಯೋಜನೆಯನ್ನ ಕೈಬಿಡಬೇಕು ಎಂದು ನಟಿ, ಪರಿಸರ ಪ್ರೇಮಿ ಅರುಂಧತಿ ನಾಗ್ ಆಗ್ರಹಿಸಿದರು.

ಈಗಾಗಲೇ ಕೆಆರ್ ಪುರಂನಿಂದ ಯಶವಂತಪುರ, ಹೆಬ್ಬಾಳದಿಂದ ಗುಟ್ಟಹಳ್ಳಿ ಮುಖಾಂತರ ಸರ್ಜಾಪುರ ರಸ್ತೆ, ಕೋರಮಂಗಲದಿಂದ ಮೈಸೂರು ರಸ್ತೆ, ಬೆಳ್ಳಂದೂರು ಟು ಎಲೆಕ್ಟ್ರಾನಿಕ್ ಸಿಟಿಗೆ ಕನೆಕ್ಟ್ ಆಗುವ ಹಾಗೇ ಎಲಿವೇಟೆಡ್ ರಸ್ತೆಯನ್ನ ಮಾಡಲು ಸರ್ಕಾರ ಮುಂದಾಗಿದೆ. ಅದರ ಬದಲು ಬೈಸಿಕಲ್ ಕಾರಿಡಾರ್ ಗಳನ್ನ ಮಾಡಬೇಕು. ಇಂಟರ್ ಟ್ರೈನ್‍ಗಳನ್ನ ಹಾಕಬೇಕು ಎಂದು ಪರಿಸರ ಹೋರಾಟಗಾರ ಪ್ರಕಾಶ್ ಬೆಳವಾಡಿ ಮನವಿ ಮಾಡಿದರು.

ಸರ್ಕಾರ ಎಲಿವೇಟೆಡ್ ಕಾರಿಡರ್ ಮಾಡಲು ಈಗಾಗಲೇ ಟೆಂಡರ್ ಕೂಡ ಮಾಡಿದ್ದು, ಪರಿಸರ ಪ್ರೇಮಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸ್ತಿದ್ದಾರೆ. ಇದರ ನಡುವೆಯೇ ಹೋರಾಟಗಾರರೊಂದಿಗೆ ಮಾತುಕತೆ ನಡೆಸಲು ಸಿದ್ಧ, ಈ ಬಗ್ಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವ ಕುರಿತು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

Comments are closed.