ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಖಾಸಗಿ ಡೈರಿಯ ಮತ್ತೊಂದು ಸ್ಫೋಟಕ ಸುದ್ದಿ ಬಹಿರಂಗವಾಗಿದ್ದು, ತಮ್ಮ ಪತ್ನಿ ಮೈತ್ರಾದೇವಿ ನಿಧನದ ನಂತರ ಶೋಭಾ ಕರಂದ್ಲಾಜೆಯನ್ನು ಮದುವೆಯಾಗಿರುವುದಾಗಿ ಬರೆದುಕೊಂಡಿದ್ದಾರೆ.
ಆದಾಯ ತೆರಿಗೆ ಇಲಾಖೆಯ ಬಳಿಯಲ್ಲಿ ಇದೆ ಎನ್ನಲಾಗುತ್ತಿರುವ ಯಡಿಯೂರಪ್ಪ ಅವರ ಖಾಸಗಿ ಡೈರಿಯ ಕೆಲವೊಂದು ಪುಟಗಳನ್ನು ಕಾರವಾನ್ ಮ್ಯಾಗಜಿನ್ ಪ್ರಕಟಿಸಿದ್ದು, ಅದರಲ್ಲಿ ನನ್ನ ಪತ್ನಿ ಮೈತ್ರಾದೇವಿ ಅವರು ನಿಧನರಾದ ಬಳಿಕಒಂಟಿತ ತೀವ್ರವಾಗಿ ಬಾಧಿಸುತ್ತಿತ್ತು. ಅದಕ್ಕಾಗಿಯೇ ಶೋಭಾ ಕರಂದ್ಲಾಜೆಯನ್ನು ಕೇರಳದಲ್ಲಿರುವ ಚೊಟ್ಟಾಣಿಕ್ಕರ ಭಗವತಿ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾದಂತೆ ಮದುವೆಯಾದೆ. ಯಡಿಯೂರು ಸಿದ್ಧಲಿಂಗನ ಹೆಸರಿನಲ್ಲಿ ಆಕೆಯನ್ನು ಕಾಯಾ, ವಾಚಾ, ಮನಸಾ ಪತ್ನಿ ಎಂದು ಒಪ್ಪಿಕೊಂಡೆ ಎಂದು ಬರೆಯಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಶೋಭಾ ಕರಂದ್ಲಾಜೆ ಅವರನ್ನು ಸಂಪರ್ಕಿಸಿದಾಗ, ಯಾರೋ ಹುಚ್ಚರು ಆ ಡೈರಿ ಬರೆದಿರಬೇಕು ಎಂದು ಹೇಳಿ ಫೋನ್ ಕಟ್ ಮಾಡಿದರು. ಮತ್ತೆ ಮತ್ತೆ ಫೋನ್ ಮಾಡಿದರೂ ಶೋಭಾ ನಮ್ಮ ಕರೆ ಸ್ವೀಕರಿಸಲಿಲ್ಲ ಎಂದು ಕಾರವಾನ್ ವರದಿ ಮಾಡಿದೆ.
2016ರಲ್ಲಿ ಯಡಿಯೂರಪ್ಪ ಮತ್ತು ಶೋಭಾ ಮದುವೆಯಾಗಿದ್ದಾರೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಯಡಿಯೂರಪ್ಪ ಮತ್ತು ಶೋಭಾ ಈ ವರದಿಗಳನ್ನು ನಿರಾಕರಿಸಿರಲಿಲ್ಲ. ಆದರೆ ಕರ್ನಾಟಕ ಜನತಾ ಪಕ್ಷದ ಸ್ಥಾಪಕ ಪದ್ಮನಾಭ್ ಪ್ರಸನ್ನ ಕುಮಾರ್ ಈ ವಿಷಯವನ್ನು ತಿಳಿಸಲು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ಅವರ ಮೇಲೆ ದಾಳಿ ನಡೆದಿತ್ತು ಎಂದು ಕಾರವಾನ್ ವರದಿ ತಿಳಿಸಿದೆ.
ಇದೇ ಡೈರಿಯಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಕೇಂದ್ರದ ಬಿಜೆಪಿ ಹಿರಿಯ ನಾಯಕರಿಗೆ ಸಾವಿರಾರು ಕೋಟಿ ರುಪಾಯಿಗಳ ಕಪ್ಪ ಸಂದಾಯ ಮಾಡಿದ ವಿವರ ಇದ್ದು, ರಾಷ್ಟ್ರ ರಾಜಕಾರಣದಲ್ಲಿ ತೀವ್ರ ತಲ್ಲಣ ಉಂಟು ಮಾಡಿದೆ.
ಕರ್ನಾಟಕ
Comments are closed.