ಬೆಂಗಳೂರು: ತಮ್ಮ ಸ್ವ ಕ್ಷೇತ್ರವಾದ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣನವರಿಗೆ ಬಿಟ್ಟುಕೊಟ್ಟು ತಾವು ಸ್ಪರ್ಧಿಸಲು ಸೂಕ್ತ ಕ್ಷೇತ್ರದ ಹುಡುಕಾಟದಲ್ಲಿದ್ದ ಮಾಜೀ ಪ್ರಧಾನಿ ಮತ್ತು ಜೆಡಿಎಸ್ ಪಕ್ಷದ ವರಿಷ್ಠ ಹೆಚ್.ಡಿ. ದೇವೇಗೌಡ ಅವರು ಇದೀಗ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಬಹುತೇಕ ಖಾತ್ರಿಯಾದಂತಿದೆ.
ತುಮಕೂರು ಲೋಕಸಭಾ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸುವುದು ಪಕ್ಕಾ ಇನ್ನು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಮೈತ್ರಿ ಪಕ್ಷಕ್ಕೆ ಸೂಕ್ತ ಅಭ್ಯರ್ಥಿಯ ಕೊರತೆ ಎದುರಾಗಿದ್ದು, ಈ ಕ್ಷೇತ್ರವನ್ನು ಸುಖಾಸುಮ್ಮನೆ ಎದುರಾಳಿಗೆ ಬಿಟ್ಟುಕೊಡಲು ಕಾಂಗ್ರಸ್‌ಗಾಗಲೀ ಜೆಡಿಎಸ್‌ಗಾಗಲೀ ಮನಸ್ಸಿಲ್ಲ. ಹಾಗಾಗಿ ಇಲ್ಲಿಂದಲೂ ಸ್ಪರ್ಧಿಸುವಂತೆ ಕೆಪಿಸಿಸಿ ಅಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಮತ್ತು ಜಮೀರ್ ಅಹಮ್ಮದ್ ಅವರು ದೇವೇಗೌಡರನ್ನು ಒತ್ತಾಯಿಸುತ್ತಿದ್ದಾರಂತೆ. ಹೀಗಾಗಿ ದೊಡ್ಡ ಗೌಡರು ತುಮಕೂರು ಸಹಿತ ಬೆಂಗಳೂರು ಉತ್ತರದಿಂದಲೂ ಸ್ಪರ್ಧಿಸಲು ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ.
ಇನ್ನು ತುಮಕೂರು ಕ್ಷೇತ್ರದ ಹಾಲಿ ಸಂಸದ ಕಾಂಗ್ರೆಸ್ ನ ಮುದ್ದಹನುಮೇಗೌಡರು ಈ ಬಾರಿ ಜನಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವುದು ಸ್ವತಃ ದೇವೇಗೌಡರಿಗೆ ಮತ್ತು ಜೆಡಿಎಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ, ಹಾಗಾಗಿ ಯಾವುದೇ ಕಾರಣಕ್ಕೂ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ದೇವೇಗೌಡರು ಕೊನೇ ಕ್ಷಣದಲ್ಲಿ ಬೆಂಗಳೂರು ಉತ್ತರದಿಂದಲೂ ಸ್ಪರ್ಧಿಸಲು ಮನಸ್ಸು ಮಾಡಬಹುದು ಎನ್ನಲಾಗುತ್ತಿದೆ.
Comments are closed.