ಬೆಂಗಳೂರು: ಕಾಂಗ್ರೆಸ್ – ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡ ನಂತರ ಇತ್ತೀಚೆಗಷ್ಟೇ ಎರಡೂ ಪಕ್ಷಗಳು ಲೋಕಸಭೆ ಸೀಟುಗಳನ್ನು ಹಂಚಿಕೆ ಮಾಡಿಕೊಂಡವು. ಕಾಂಗ್ರೆಸ್ಗೆ 20 ಕ್ಷೇತ್ರ ಮತ್ತು ಜೆಡಿಎಸ್ಗೆ 8 ಕ್ಷೇತ್ರಗಳು ಎಂದು ಎರಡೂ ಪಕ್ಷಗಳ ಮುಖಂಡರು ನಿರ್ಣಯಿಸಿದರು. ಆದರೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಯ ಕೊರತೆಯಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಮತ್ತೊಂದು ಕ್ಷೇತ್ರವನ್ನು ಜೆಡಿಎಸ್ ಬಿಟ್ಟುಕೊಡುವಂತಾಯ್ತು.
ಒಂದು ಕ್ಷೇತ್ರ ಹೆಚ್ಚುವರಿಯಾಗಿ ಸಿಕ್ಕ ಬೆನ್ನಲ್ಲೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಾಂಗ್ರೆಸ್ ಶಾಸಕರು ಸಭೆ ನಡೆಸಿದರು. ಸೋಮವಾರ ನಡೆದ ಸಭೆಯಲ್ಲಿ ಸಚಿವ ಕೃಷ್ಣ ಭೈರೇಗೌಡ ಹೆಸರು ಅಂತಿಮವಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಕಾಂಗ್ರೆಸ್ನ ಎಲ್ಲಾ ಶಾಸಕರೂ ಕೃಷ್ಣ ಭೈರೇಗೌಡರ ಹೆಸರನ್ನೇ ಶಿಫಾರಸು ಮಾಡಿದ್ದು, ಚುನಾವಣೆಗೆ ನಿಲ್ಲುವಂತೆ ಮನವಿ ಮಾಡಲಾಗಿದೆ. ಆದರೆ ಕೃಷ್ಣ ಭೈರೇಗೌಡರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯಿಲ್ಲ, ಆ ಕಾರಣಕ್ಕಾಗಿಯೇ ಹಿಂದೇಟು ಹಾಕುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.
ಉತ್ತರ ಕ್ಷೇತ್ರದಿಂದ ಬಿ.ಎಲ್. ಶಂಕರ್ ಹೆಸರು ಕೇಳಿ ಬರುತ್ತಿತ್ತು. ಆದರೆ ಸೋಮವಾರ ಎಮ್.ಆರ್. ಸೀತಾರಾಮ್ ಅವರ ಮಗ ರಕ್ಷಾ ರಾಮಯ್ಯ ಅವರೂ ಟಿಕೆಟ್ಗಾಗಿ ಯತ್ನ ಆರಂಭಿಸಿದ್ದರು ಎಂಬ ಮಾತುಗಳು ಕೇಳಿ ಬಂದಿತ್ತು. ರಕ್ಷಾ ರಾಮಯ್ಯ ಅಖಿಲ ಭಾರತ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಇನ್ಚಾರ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ ಯೂತ್ ಕಾಂಗ್ರೆಸ್ನಲ್ಲಿ ಉತ್ತಮವಾದ ಹೆಸರು ಗಳಿಸಿದ್ದಾರೆ. ಇದನ್ನೇ ಮಾನದಂಡವಾಗಿಸಿಕೊಂಡು ರಕ್ಷಾ ರಾಮಯ್ಯ ಅವರನ್ನು ಚುನಾವಣೆ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಯುವ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದರು ಎನ್ನಲಾಗಿತ್ತು.
ಆದರೆ ಉತ್ತರ ಕ್ಷೇತ್ರದಲ್ಲಿರುವ ಎಲ್ಲಾ ಕಾಂಗ್ರೆಸ್ ಶಾಸಕರು ಕೃಷ್ಣ ಭೈರೇಗೌಡ ಅವರೇ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮತ್ತೆ ಕೃಷ್ಣ ಭೈರೇಗೌಡರು ಸ್ಪರ್ಧಿಸಿದರೆ ಗೆಲ್ಲುವ ಸಾಧ್ಯತೆಯೂ ಹೆಚ್ಚು ಎಂಬುದು ಕಾಂಗ್ರೆಸ್ ನಾಯಕರ ವಿಶ್ವಾಸವಾಗಿದೆ. ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು, ಪಕ್ಷ ಯಾರನ್ನು ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಿಸಲಿದೆ ಎಂಬುದನ್ನು ಕಾದು ನೋಡಬೇಕು.
Comments are closed.