ಬೆಂಗಳೂರು: ಭಾರೀ ಕುತೂಹಲ ಮೂಡಿಸಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಬಿಜೆಪಿ ಅಭ್ಯರ್ಥಿ ಆಯ್ಕೆ ಈಗ ಎಲ್ಲರ ಹುಬ್ಬೇರುವಂತೆ ಮಾಡಿದೆ. ಅನಂತ್ಕುಮಾರ್ ಅವರ ಹೆಂಡತಿ ತೇಜಸ್ವಿನಿ ಅವರೇ ಅಭ್ಯರ್ಥಿ ಎಂಬ ಬಲವಾದ ಮಾತು ಈ ಹಿಂದಿನಿಂದಲೂ ಕೇಳಿಬರುತ್ತಿತ್ತು. ಆದರೆ, ಹೈಕಮಾಂಡ್ ನೆನ್ನೆ ಬಿಡುಗಡೆ ಮಾಡಿದ ಅಭ್ಯರ್ಥಿ ಆಯ್ಕೆ ಪಟ್ಟಿಯಲ್ಲಿ ತೇಜಸ್ವಿನಿ ಬದಲಿಗೆ ತೇಜಸ್ವಿ ಸೂರ್ಯನಿಗೆ ಟಿಕೆಟ್ ನೀಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ತೇಜಸ್ವಿನಿ ಅವರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಇಂದು ಬೆಳಗ್ಗೆಯಿಂದ ತೇಜಸ್ವಿನಿ ಅನಂತ್ಕುಮಾರ್ ನಿವಾಸದ ಮುಂದೆ ಭಾರೀ ಸಂಖ್ಯೆಯಲ್ಲಿ ನೆರೆದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವಂತೆ ಘೋಷಣೆ ಕೂಗುತ್ತಿದ್ದಾರೆ. ಅಲ್ಲದೇ, ಪಕ್ಷದ ವರಿಷ್ಠರ ನಿರ್ಧಾರಕ್ಕೆ ದಿಕ್ಕಾರ ಹಾಕುತ್ತಿದ್ದಾರೆ.
ಭಾರೀ ನಿರೀಕ್ಷೆ ಇಟ್ಟುಕೊಂಡು ಕ್ಷೇತ್ರದಲ್ಲಿ ಸುತ್ತಾಡಿದ್ದ ತೇಜಸ್ವಿನಿ ಅವರಿಗೆ ಕೊನೆ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿದೆ. ಹೀಗಾಗಿ ಅವರ ಮುಂದಿನ ನಡೆ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಪಕ್ಷದ ನಿರ್ಧಾರಕ್ಕೆ ಬೆಲೆ ಕೊಟ್ಟು ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರಾ ಅಥವಾ ಕಾರ್ಯಕರ್ತರು, ಬೆಂಬಲಿಗರ ಒತ್ತಡಕ್ಕೆ ಮಣಿದು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಘೋಷಣೆ ಕೂಗುವ ಕಾರ್ಯಕರ್ತರನ್ನು ಸಮಾಧಾನಪಡಿಸುತ್ತ ಮಾತನಾಡಿದ ತೇಜಸ್ವಿನಿ, ಇದು ನಮ್ಮ ಪ್ರಬುದ್ಧತೆ ತೋರಿಸುವ ಸಮಯ. ದೇಶ ಮೊದಲು, ನರೇಂದ್ರ ಮೋದಿಯವರನ್ನು ಗೆಲ್ಲಿಸೋದು ನಮ್ಮ ಗುರಿಯಾಗಬೇಕು. ಮನೆ ಮುಂದೆ ಪ್ರತಿಭಟನೆ ಮಾಡೋದು ಬೇಡ, ಗಲಾಟೆ ಬೇಡ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ನಾನು ನಿನ್ನೆಯಿಂದ ಎಲ್ಲಾ ಕರ್ಯಾರ್ತರಿಗೆ ಹೇಳಿದೀನಿ. ನಿರ್ಣಯ ಏನೇ ಇದ್ರೂ ದೇಶ ಮೊದಲು, ಪಕ್ಷ ಮುಂದೆ. ಕಳೆದ 22 ವರ್ಷಗಳಿಂದ ಅದಮ್ಯ ಚೇತನ, 30 ವರ್ಷದಿಂದ ಬಿಜೆಪಿ ಪಕ್ಷದಲ್ಲಿದ್ದೀನಿ. ನಮಗೆ ಒಂದೊದ್ಸಲ ಅಸಮಾಧಾನ ಆಗಿರೋದು ಸಹಜ. ಎಲ್ಲಕ್ಕಿಂತ ಪಕ್ಷದ ಮುಖಂಡರ ತೀರ್ಮಾನ ಅಂತಿಮ. ಬೇರೆ ಯೋಜನೆ ಬೇಡ. ಅಳೋದು, ಬೇಸರ ಇವೆಲ್ಲಾ ಸಾರ್ವಜನಿಕವಾಗಿ ತೋರಿಸೋದು ನಮ್ಮ ಪಕ್ಷದ ನಡತೆಯಿಲ್ಲ. ಎಲ್ಲಾ ನಾಯಕರೂ ಇದೇ ಸಿದ್ಧಾಂತದಲ್ಲೇ ಇದ್ದೀವಿ. ನಾನು ಊಹಾಪೋಹ, ಹೆಸರುಗಳಿಗೆ ಗಮನ ಕೊಡೋದಿಲ್ಲ. ನರೇಂದ್ರ ಮೋದಿಯನ್ನು ಪ್ರಧಾನಿ ಮಾಡೋದು ನಮ್ಮ ಆದ್ಯತೆಯಾಗಲಿ. ದೇಶವನ್ನು ಪರಮ ವೈಭವದತ್ತ ಒಯ್ಯಲು ಕೆಲಸ ಮಾಡ್ಬೇಕು ಎಂದು ಹೇಳಿದರು.
ಆದರೆ, ತಮಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರ ಆಗಿದ್ಯಾ ಇಲ್ವಾ ಎನ್ನುವುದರ ಬಗ್ಗೆ ತೇಜಸ್ವಿನಿ ಸ್ಪಷ್ಟ ಉತ್ತರ ನೀಡದೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದರು. ಅಲ್ಲದೆ ಅನೇಕ ಪ್ರಶ್ನೆಗಳಿಗೆ ಪಕ್ಷದ ಚೌಕಟ್ಟಿನಲ್ಲಿ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.
Comments are closed.