ಕರ್ನಾಟಕ

ತುಮಕೂರು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟ ರಹಸ್ಯ ಬಯಲು ಮಾಡಿದ ಸಿದ್ದರಾಮಯ್ಯ!

Pinterest LinkedIn Tumblr


ಬೆಂಗಳೂರು: ‘ಜೆಡಿಎಸ್‌ ನಾಯಕರು ಮಂಡ್ಯ ಹಾಗೂ ಮೈಸೂರು ಲೋಕಸಭಾ ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡಬೇಕು ಎಂದು ಕೇಳಿದ್ದರು. ಅನಂತರ ಮೈಸೂರು ಅಥವಾ ತುಮಕೂರು ಪೈಕಿ ಒಂದನ್ನು ಬಿಟ್ಟುಕೊಡಬೇಕು ಎಂದರು. ಹೀಗಾಗಿ, ಮೈಸೂರಿನಲ್ಲಿ ಕಾಂಗ್ರೆಸ್‌ ಪ್ರಭಾವ ಶಾಲಿಯಾಗಿರುವುದರಿಂದ, ತುಮಕೂರು ಬಿಟ್ಟುಕೊಡಬೇಕಾಯಿತು.

ಹೀಗಂತ ಹೇಳುವ ಮೂಲಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದರ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟರು.

‘ನಾವು ತುಮಕೂರು ಕ್ಷೇತ್ರವನ್ನು ಕೇಳಿರಲಿಲ್ಲ. ಮೈಸೂರು ಕೇಳಿದ್ದೆವು. ಮೈಸೂರು ಉಳಿಸಿಕೊಳ್ಳಲು ಕಾಂಗ್ರೆಸ್‌ನವರು ತಾವಾಗೇ ನಮಗೆ ತುಮಕೂರು ಬಿಟ್ಟುಕೊಟ್ಟರು’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಸೇರಿದಂತೆ ಆ ಪಕ್ಷದ ನಾಯಕರು ನೀಡಿದ್ದ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆಯನ್ನು ಸಿದ್ದರಾಮಯ್ಯ ನೀಡಿದರು. ಅಷ್ಟೇ ಅಲ್ಲ, ‘ಮೈಸೂರಿನಲ್ಲಿ ಕಾಂಗ್ರೆಸ್‌ ಪ್ರಭಾವಶಾಲಿಯಾಗಿದೆ’ ಎನ್ನುವ ಮೂಲಕ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಅವರ ಉಸ್ತುವಾರಿಯಲ್ಲಿರುವ ತುಮಕೂರಿನಲ್ಲಿ ಹಾಲಿ ಸಂಸದರಿದ್ದರೂ ಕಾಂಗ್ರೆಸ್‌ ದುರ್ಬಲವೇ ಎಂಬ ಪ್ರಶ್ನೆಗಳು ಹುಟ್ಟಲು ಅವಕಾಶ ಮಾಡಿಕೊಟ್ಟರು.

ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಸಾರ್ವಜನಿಕರೊಂದಿಗೆ ಲೈವ್‌ ಸಂವಾದದಲ್ಲಿ ಮಂಗಳವಾರ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಈ ರಹಸ್ಯ ಬಿಟ್ಟುಕೊಟ್ಟರು.

ಮೈತ್ರಿ ಟಿಕೆಟು ಹಂಚಿಕೆ ವಿಚಾರದಲ್ಲಿ ಎರಡ್ಮೂರು ಕಡೆ ಅಸಮಾಧಾನ ಇರುವುದು ನಿಜ. ಎರಡು ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಿದೆ. ತುಮಕೂರಿನಲ್ಲಿ ಹಾಲಿ ಸಂಸದರಿಗೆ ಟಿಕೆಟ್‌ ಕೊಡಬೇಕಿತು. ಆದರೆ, ಜೆಡಿಎಸ್‌ ಬೇಡಿಕೆಯಿಂದಾಗಿ ಹಾಲಿ ಸಂಸದರಿದ್ದರೂ ಆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟೆವು. ಸಮ್ಮಿಶ್ರ ಸರ್ಕಾರದಲ್ಲಿ ಮೈತ್ರಿ ಅನಿವಾರ್ಯ. ಯಾರಿಗೆ ಅಸಮಾಧಾನವಾಗಿದ್ದರೂ ಅದನ್ನು ಬಗೆಹರಿಸುತ್ತೇವೆ ಎಂದರು.

Comments are closed.