ಬೆಂಗಳೂರು: ನೈಸ್ ರಸ್ತೆಯಲ್ಲಿ ಮಂಗಳವಾರ ಸಂಭವಿಸಿದ್ದ ಟೆಸ್ಟ್ ಡ್ರೈವ್ ಮಾಡುವಾಗ ಕಾರು ಅಪಘಾತ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಘಟನೆ ವೇಳೆ ಕಾರು ಚಾಲನೆ ಮಾಡಿದ್ದು ಮೃತ ಸಾಗರ್ ಸ್ನೇಹಿತ ಗೌತಮ್ ಎಂಬ ಸಂಗತಿ ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಅಪಘಾತ ಸಂಭವಿಸಿದ ಬಳಿಕ ಪೊಲೀಸರಿಗೆ ಗೌತಮ್ ಸುಳ್ಳು ಹೇಳಿದ್ದ. ಆದರೆ ಘಟನೆ ವೇಳೆ ಕಾರಿನಲ್ಲಿದ್ದ ರೇಂಜ್ ರೋವ್ ಶೋರೂಂನ ಚಾಲಕ ಶಿವಕುಮಾರ್ ಸೋನಿ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ. ಹೀಗಾಗಿ ಅತಿ ವೇಗ ಮತ್ತು ಅಜಾಗರೂಕ ಚಾಲನೆಯಿಂದಲೇ ಈ ದುರಂತ ಸಂಭವಿಸಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಗೌತಮ್ ಅವರನ್ನೇ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗುತ್ತದೆ. ಅಪಘಾತದಲ್ಲಿ ಅವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಚೇತರಿಸಿಕೊಂಡ ಬಳಿಕ ವಶಕ್ಕೆ ಪಡೆಯಲಾಗುತ್ತದೆ ಎಂದು ಪಶ್ಚಿಮ ವಿಭಾಗದ (ಡಿಸಿಪಿ) ಎಸ್.ಕೆ.ಸೌಮ್ಯಲತಾ ತಿಳಿಸಿದ್ದಾರೆ. ರೂಪೇನಾ ಅಗ್ರಹಾರದಲ್ಲಿರುವ ನಮ್ಮ ಶೋರೂಂನಲ್ಲಿ ಟೆಸ್ಟ್ ಡ್ರೈವ್ ಗೆ ಸಾಗರ್ ಬುಕ್ ಮಾಡಿದ್ದರು.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಪತ್ನಿ ಸಂಧ್ಯಾ, ಪುತ್ರ ಸಮರ್ಥ್ ಜತೆ ಸಮೇತ ಟೆಸ್ಟ್ ಡ್ರೈವ್ ಹೊರಟ್ಟಿದ್ದ ಅವರು, ನನ್ನನ್ನು ಸಹ ಜೊತೆಯಲ್ಲಿ ಕರೆದುಕೊಂಡರು. ಆಗ ಸಾಗರ್ ಜತೆ ಬಂದಿದ್ದ ಗೌತಮ್ ಅವರು, ನೈಸ್ ರಸ್ತೆಯಲ್ಲಿ 120 ಕಿ. ಮೀ ವೇಗದಲ್ಲಿ ಚಾಲನೆ ಮಾಡಿದರು. ಟೋಲ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಅಡ್ಡಾದಿಡ್ಡಿಯಾಗಿ ಸಾಗಿ ಕಂದಕ್ಕೆ ಬಿದ್ದಿತು ಎಂದು ಶಿವಕುಮಾರ್ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
Comments are closed.