ಬೆಂಗಳೂರು: ಅತ್ತ ಜೆಡಿಎಸ್-ಕಾಂಗ್ರೆಸ್ ನಾಯಕರ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿದರೇ, ಇತ್ತ ಐಟಿ ರೇಡ್ ಟೆನ್ಷನ್ ಇಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯನವರು ಐಪಿಎಲ್ ಮ್ಯಾಚ್ ವೀಕ್ಷಣೆಯಲ್ಲಿ ಮುಳುಗಿದ್ದಾರೆ. ಇಂದು ತೆರಿಗೆ ಇಲಾಖೆ ಅಧಿಕಾರಿಗಳು ದೋಸ್ತಿ ಸರ್ಕಾರದ ಸಚಿವರು, ಸಂಸದರ ಮೇಲೆ ದಾಳಿ ನಡೆಸಿ ತನಿಖೆ ನಡೆಸಿದ್ದಾರೆ. ಇದಕ್ಕೆ ಮೈತ್ರಿ ನಾಯಕರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಕೇಂದ್ರದ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯನವರು ಐಪಿಎಲ್ ಪಂದ್ಯ ವೀಕ್ಷಿಸುತ್ತಿರುವುದು ಗಮನಾರ್ಹವಾಗಿದೆ.
ಕಾಂಗ್ರೆಸ್-ಜೆಡಿಎಸ್ ಶಾಸಕರ ಮೇಲೆ ಗುರುವಾರ ಬೆಳಿಗ್ಗೆ ಐಟಿ ದಾಳಿ ಆಗುತ್ತದೆ ಎಂದು ಕುಮಾರಸ್ವಾಮಿ ಅವರು ನಿನ್ನೆಯೇ ಹೇಳಿದ್ದರು. ಸಿಎಂ ಹೇಳಿಕೆ ನೀಡಿದ್ದ ಕೆಲವೇ ಗಂಟೆಗಳಲ್ಲಿ ಐಟಿ ದಾಳಿ ಪ್ರಾರಂಭವಾಯಿತು. ಸುಮಾರು 15 -20 ಕಡೆಗಳಲ್ಲಿ ಐಟಿ ದಾಳಿ ನಡೆಯಿತು. ಇದೀಗ ಐಟಿ ದಾಳಿ ಭೀತಿಯಲ್ಲಿ ಇತ್ತ ದೋಸ್ತಿ ನಾಯಕರಿದ್ದರೇ, ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ಯಾವುದೇ ರಾಜಕೀಯ ಒತ್ತಡವಿಲ್ಲದೇ ಆರ್ಸಿಬಿ ಪಂದ್ಯ ವೀಕ್ಷಿಸುವ ಮೂಲಕ ಕೊಂಚ ನಿರಾಳರಾಗಿದ್ದಾರೆ.
ಈ ಹಿಂದೆಯೂ ಮಾಜಿ ಸಿಎಂ ಸಿದ್ದರಾಮಯ್ಯನವರು ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರವನ್ನು ವೀಕ್ಷಿಸಿದರು. ಇದಕ್ಕೂ ಮುನ್ನ ಪುನೀತ್ ರಾಜ್‍ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರವನ್ನು ಕೂಡ ನೋಡಿದ್ದರು. ರಾಜಕೀಯದಲ್ಲಿ ಸಖತ್ ಫುಲ್ ಆ್ಯಕ್ಟೀವ್ ಆಗಿರುವ ಮಾಜಿ ಸಿಎಂ ಸಿನಿಮಾ ನೋಡುವ ಅಭ್ಯಾಸವನ್ನು ಮಾಡಿಕೊಂಡಿದ್ದಾರೆ. ಈ ಹಿಂದೆ ತೆಲುಗು ಭಾಷೆಯ `ಬಾಹುಬಲಿ’ ಚಿತ್ರವನ್ನು ಮೊಮ್ಮಕ್ಕಳೊಂದಿಗೆ ವೀಕ್ಷಿಸಿದ್ದರು ಎನ್ನಲಾಗಿದೆ.
ಮೈದಾನಕ್ಕೆ ಸಿದ್ದರಾಮಯ್ಯನವರು ಆಗಮಿಸುತ್ತಿದ್ದಂತೆ ಜನರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಸಿದ್ದರಾಮಯ್ಯನವರು ಸಹ ನಗುತ್ತಲೇ ಎಲ್ಲರ ಸೆಲ್ಫಿಗೆ ಪೋಸ್ ನೀಡಿದರು.
ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಗುರುವಾರ ನಡೆಯುತ್ತಿರುವ ತನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡವು ಮುಂಬೈ ಇಂಡಿಯನ್ ತಂಡದ ಎದುರು ಸೆಣಸಾಟ ನಡೆಸುತ್ತಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲು ಕ್ಷೇತ್ರರಕ್ಷಣೆ ಆಯ್ದುಕೊಂಡಿದ್ದಾರೆ.
Comments are closed.