ಹಾಸನ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಜೊತೆಗೆ ಕೈಜೋಡಿಸಿರುವ ಜೆಡಿಎಸ್ 7 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಅದರಲ್ಲೂ ಹಾಸನ ಮತ್ತು ಮಂಡ್ಯದಲ್ಲಿ ದೇವೇಗೌಡರ ಕುಟುಂಬದ ಇಬ್ಬರು ಮೊಮ್ಮಕ್ಕಳು ಸ್ಪರ್ಧಿಸಲಿರುವುದರಿಂದ ಅವರಿಬ್ಬರ ರಾಜಕೀಯ ಭವಿಷ್ಯಕ್ಕೂ ಈ ಚುನಾವಣೆ ನಿರ್ಣಾಯಕವೆನಿಸಿದೆ.
ಈ ಹಿನ್ನೆಲೆಯಲ್ಲಿ ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಬಗ್ಗೆ ಜೆಡಿಎಸ್ ಹೆಚ್ಚಿನ ನಿಗಾ ಇಟ್ಟಿದೆ. ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಎ. ಮಂಜು ಎದುರಾಳಿಯಾಗಿ ಕಣಕ್ಕೆ ಇಳಿಯಲಿರುವ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣನವರ ಗೆಲುವಿನ ಸಾಧ್ಯತೆ ಬಗ್ಗೆ ಗುಪ್ತಚರ ಇಲಾಖೆ ನೀಡಿರುವ ವರದಿ ಕೇಳಿದ ನಂತರ ಜೆಡಿಎಸ್ ನಾಯಕರು ಎಚ್ಚೆತ್ತುಕೊಂಡಿದ್ದು, ಬಿರುಸಿನ ಪ್ರಚಾರ ಮಾಡುವ ಮೂಲಕ ಪ್ರಜ್ವಲ್ನನ್ನು ಗೆಲ್ಲಿಸಲೇಬೇಕೆಂದು ಪಣತೊಟ್ಟಿದ್ದಾರೆ.
ಗುಪ್ತಚರ ಇಲಾಖೆ ವರದಿ ಪ್ರಕಾರ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಅತ್ಯಂತ ಕಠಿಣವಾದ ಸ್ಪರ್ಧೆ ಏರ್ಪಡಲಿದೆ. ಎ. ಮಂಜು ಕೂಡ ಹಾಸನದಲ್ಲಿ ಉತ್ತಮ ವರ್ಚಸ್ಸು ಹೊಂದಿದ್ದಾರೆ. ಕಳೆದ ಚುನಾವಣೆಯಲ್ಲೂ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಅವರು ದೇವೇಗೌಡರಿಗೆ ಪ್ರಬಲ ಸ್ಪರ್ಧೆ ನೀಡಿದವರು. ಈ ಬಾರಿ ಹಾಸನ ಟಿಕೆಟ್ ಜೆಡಿಎಸ್ ಪಾಲಾದ ಕಾರಣ ಬಿಜೆಪಿ ಸೇರಿ ಸ್ಪರ್ಧೆಗಿಳಿದಿದ್ದಾರೆ. ಈ ಚುನಾವಣೆಯಲ್ಲೂ ಜೆಡಿಎಸ್ ಮತ್ತು ಬಿಜೆಪಿ ನಡುವೆ ಭಾರೀ ಪೈಪೋಟಿ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.
ಗುಪ್ತಚರ ಇಲಾಖೆ ನೀಡಿದ ಈ ಮಾಹಿತಿಯಿಂದ ಜೆಡಿಎಸ್ ನಾಯಕರು ಎಚ್ಚೆತ್ತುಕೊಂಡಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಅತೃಪ್ತರ ಮನೆಗೆ ಸಚಿವ ಎಚ್.ಡಿ. ರೇವಣ್ಣ ಕುಟುಂಬ ತೆರಳಿ ಬೆಂಬಲ ಕೋರಲು ನಿರ್ಧರಿಸಿದೆ. ಅತ್ತ ಹಾಸನದಲ್ಲೂ ನಿಖಿಲ್ ಕುಮಾರಸ್ವಾಮಿಗೆ ಎದುರಾಳಿಯಾಗಿ ನಿಂತಿರುವ ಸುಮಲತಾ ಅಂಬರೀಶ್ಗೆ ಬಿಜೆಪಿ ಬೆಂಬಲ ನೀಡಿರುವುದರಿಂದ ಪೈಪೋಟಿ ಹೆಚ್ಚಾಗಲಿದೆ.
ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಭಾರೀ ರಣತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಭದ್ರಕೋಟೆಯಾಗಿದ್ದ ಹಾಸನದಲ್ಲಿ ಮತದಾರರನ್ನು ಕಮಲದ ಕಡೆ ವಾಲುವಂತೆ ಮಾಡಲು ಎ. ಮಂಜು ಪ್ರಯತ್ನಿಸುತ್ತಿದ್ದಾರೆ. ಈ ಬಾರಿ ಹಾಸನದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸ್ಪರ್ಧೆಯಿಲ್ಲದ ಕಾರಣ ಜೆಡಿಎಸ್ ಗೆ ಹೊಡೆತ ಬೀಳುವ ಸಾಧ್ಯತೆಯಿದೆ. ಅಲ್ಲದೆ, ಪ್ರಜ್ವಲ್ ಸ್ಪರ್ಧೆಗೆ ಕಾಂಗ್ರೆಸ್ ಕಾರ್ಯಕರ್ತರೂ ಅಸಮಾಧಾನ ಹೊಂದಿರುವ ಕಾರಣದಿಂದ ಎ. ಮಂಜು ಅವರಿಗೆ ಒಳಗೊಳಗೆ ಬೆಂಬಲ ನೀಡುವ ಸಾಧ್ಯತೆಯೂ ಇದೆ. ಗುಪ್ತಚರ ಇಲಾಖೆ ನೀಡಿರುವ ವರದಿಯಲ್ಲಿಯೂ ಕಾಂಗ್ರೆಸ್ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಯಿದೆ ಎಂಬ ಮಾಹಿತಿ ಇರುವುದರಿಂದ ಜೆಡಿಎಸ್ ನಾಯಕರಿಗೆ ಚಡಪಡಿಕೆ ಶುರುವಾಗಿದೆ.
Comments are closed.