ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರ ನಾನಾ ಕಾರಣಗಳಿಂದ ಸದ್ದು ಮಾಡುತ್ತಿದೆ. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನಡುವೆ ನೇರ ಹಣಾಹಣಿ ಏರ್ಪಟ್ಟಿರುವುದರಿಂದ ಈ ಕ್ಷೇತ್ರ ಭಾರೀ ಕುತೂಹಲ ಮೂಡಿಸಿದೆ.
ಇತ್ತೀಚೆಗಷ್ಟೇ ಮಂಡ್ಯ ಜಿಲ್ಲಾ ಚುನಾವಣಾಧಿಕಾರಿ ರಾಜ್ಯ ಸರ್ಕಾರದ ಹಿತಾಸಕ್ತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಸುಮಲತಾ ಅಂಬರೀಶ್ ಗಂಭೀರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆಗಿರುವ ಮಂಡ್ಯದ ಜಿಲ್ಲಾಧಿಕಾರಿ ಮಂಜುಶ್ರೀ ಸುಮಲತಾಗೆ ನೋಟಿಸ್ ನೀಡಿದ್ದರು. ಇದೆಲ್ಲದರ ಬೆನ್ನಲ್ಲೇ ಇನ್ನೊಂದು ಬೆಳವಣಿಗೆ ನಡೆದಿದ್ದು, ಮತಯಂತ್ರದ ಕ್ರಮಸಂಖ್ಯೆಯಲ್ಲೂ ಭೇದಭಾವ ಮಾಡಲಾಗಿದೆ ಎಂಬ ಆಕ್ಷೇಪಗಳು ಕೇಳಿಬಂದಿವೆ.
ಸುಮಲತಾ ಅಂಬರೀಶ್ಗೆ ಬಿಜೆಪಿ ಬೆಂಬಲ ನೀಡಿದ್ದೇ ತಡ ಜೆಡಿಎಸ್ ನಾಯಕರು ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದ್ದರು. ಹೀಗಾಗಿ, ಸುಮಲತಾ ಅಂಬರೀಶ್ ಜೊತೆಗೆ ಇನ್ನೂ ಮೂವರು ಸುಮಲತಾರನ್ನು ಹುಡುಕಿ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಸಲಾಗಿತ್ತು. ಇದರಿಂದ ಮತದಾರರಿಗೆ ಗೊಂದಲ ಉಂಟುಮಾಡುವುದು ವಿರೋಧಿ ಬಣದವರ ಉದ್ದೇಶವಾಗಿತ್ತು. ಅದಕ್ಕೆ ತಕ್ಕಂತೆ ಎ. ಸುಮಲತಾ ಅವರ ಜೊತೆಗೆ ಸುಮಲತಾ, ಎಂ. ಸುಮಲತಾ, ಪಿ. ಸುಮಲತಾ ಅವರು ಮಂಡ್ಯ ಲೋಕಸಭಾ ಅಖಾಡದಲ್ಲಿದ್ದಾರೆ.
ಸದ್ಯಕ್ಕೆ ಮಂಡ್ಯದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಅಭ್ಯರ್ಥಿಗಳಿಗೆ ನೀಡಲಾಗಿರುವ ಕ್ರಮಸಂಖ್ಯೆಯಲ್ಲೂ ಚುನಾವಣಾಧಿಕಾರಿ ತಾರತಮ್ಯ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ಚುನಾವಣಾಧಿಕಾರಿ ಮಂಜುಶ್ರೀ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಈ ಹಿಂದೆ ಸುಮಲತಾ ಅಂಬರೀಶ್ ಆರೋಪಿಸಿದ್ದರು. ಅದಕ್ಕೆ ಪೂರಕವೆಂಬಂತೆ ಇದೀಗ ಇವಿಎಂಗಳಲ್ಲಿ ನೀಡಲಾಗಿರುವ ಅಭ್ಯರ್ಥಿಗಳ ಕ್ರಮಸಂಖ್ಯೆಯಲ್ಲೂ ನಿಖಿಲ್ ಕುಮಾರಸ್ವಾಮಿಗೆ 1ನೇ ಸ್ಥಾನ ನೀಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ನಿಯಮದ ಪ್ರಕಾರ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯ ಹೆಸರು ಮೊದಲು ಬರಬೇಕು. ಆ ಪ್ರಕಾರ ನೋಡುವುದಾದರೆ ಜೆಡಿಎಸ್ಗಿಂತಲೂ ಬಿಎಸ್ಪಿ ಅತಿದೊಡ್ಡ ರಾಷ್ಟ್ರೀಯ ಪಕ್ಷವಾಗಿದೆ. ಹೀಗಾಗಿ, ಬಿಎಸ್ಪಿ ಪಕ್ಷದ ಅಭ್ಯರ್ಥಿ ನಂಜುಂಡಸ್ವಾಮಿ ಅವರಿಗೆ ಕ್ರಮಸಂಖ್ಯೆಯಲ್ಲಿ ಮೊದಲ ಸ್ಥಾನ ಸಿಗಬೇಕಾಗಿತ್ತು. ವರ್ಣಾಕ್ಷರದ ಪ್ರಕಾರ ನೋಡುವುದಾದರೂ ನಿಖಿಲ್ಗೆ ಮೊದಲ ಸ್ಥಾನ ಸಿಗಲು ಸಾಧ್ಯವಿಲ್ಲ. ಆದರೆ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ 1ನೇ ಕ್ರಮಸಂಖ್ಯೆ ನೀಡಿ, ಬಿಎಸ್ಪಿ ಅಭ್ಯರ್ಥಿಗೆ 2ನೇ ಕ್ರಮಸಂಖ್ಯೆ ನೀಡಲಾಗಿದೆ. ಈ ಮೂಲಕ ಕಾನೂನುಬಾಹಿರವಾಗಿ ನಿಖಿಲ್ಗೆ 1ನೇ ಕ್ರಮಸಂಖ್ಯೆ ನೀಡಲಾಗಿದೆ ಎಂಬ ಆರೋಪವನ್ನು ಜಿಲ್ಲಾಧಿಕಾರಿ ಹೊತ್ತಿದ್ದಾರೆ.
ಸುಮಲತಾ ಮಟ್ಟಹಾಕಲು ಜೆಡಿಎಸ್ ಸಂಚು?:
ಇದಿಷ್ಟೇ ಅಲ್ಲದೆ, ಜೆಡಿಎಸ್ ಪ್ರತಿಸ್ಪರ್ಧಿಯಾಗಿರುವ ಸುಮಲತಾ ಅಂಬರೀಶ್ ಅವರ ಹೆಸರನ್ನು ಕೊನೆಯಿಂದ ಮೂರನೇ ಅಭ್ಯರ್ಥಿಯನ್ನಾಗಿ ಇವಿಎಂನಲ್ಲಿ ಹಾಕಲಾಗಿದೆ. ಅಲ್ಲದೆ, ಸುಮಲತಾ ಅಂಬರೀಶ್ ಅವರ ಮೊದಲಿಗೆ ಸುಮಲತಾ ಎಂಬ ಪಕ್ಷೇತರ ಅಭ್ಯರ್ಥಿಯ ಹೆಸರು, ನಂತರ ಸುಮಲತಾ ಎಂ, ಸುಮಲತಾ ಪಿ ಎಂಬ ಅಭ್ಯರ್ಥಿಯ ಹೆಸರು ಹಾಕುವ ಮೂಲಕ ನಾಲ್ವರಲ್ಲಿ ಯಾವ ಸುಮಲತಾ ಎಂಬ ಬಗ್ಗೆ ಮತದಾರರಲ್ಲಿ ಗೊಂದಲ ಮೂಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸುಮಲತಾ ಅಂಬರೀಶ್ ಅವರಿಗೆ ರಣ ಕಹಳೆ ಊದುತ್ತಿರುವ ವ್ಯಕ್ತಿ ಚಿಹ್ನೆ ಸಿಕ್ಕಿದ್ದು, ಈ ಬಾರಿ ಇವಿಎಂನಲ್ಲಿ ಅಭ್ಯರ್ಥಿಯ ಫೋಟೋ ಕೂಡ ಇರುವುದರಿಂದ ಮತದಾರರಿಗೆ ಹೆಚ್ಚಿನ ಗೊಂದಲ ಉಂಟಾಗುವ ಸಾಧ್ಯತೆಯಿಲ್ಲ ಎಂಬ ಮಾತೂ ಕೇಳಿಬರುತ್ತಿದೆ. ಈಗಾಗಲೇ ಮಂಡ್ಯದಲ್ಲಿ ಪ್ರಚಾರಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಪರಸ್ಪರ ಕೆಸರೆರಚಾಟ ಶುರುವಾಗಿದೆ.
Comments are closed.