ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಒಡೆಯುವ ಕೆಲಸ ಮಾಡಿದರು. ಆದರೆ ನಾವು ದೇಶವನ್ನು ಒಟ್ಟುಗೂಡಿಸುವ ಕೆಲವ ಮಾಡುತ್ತೇವೆ ಎಂದು ಘೋಷಿಸಿದವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ. ಬೆಂಗಳೂರಿನ ನೆಲಮಂಗಲದಲ್ಲಿ ನಡೆದ ಮೈತ್ರಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ, ಕೇಂದ್ರ ಸರ್ಕಾರ ದೇಶದ ಜನರಲ್ಲಿ ಒಡಕನ್ನು ಉಂಟು ಮಾಡುವ ಕೆಲಸ ಮಾಡುತ್ತಿದೆ. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದವರನ್ನು ಒಟ್ಟುಗೂಡಿಸುವ ಕೆಲಸ ಮಾಡಲಿದೆ ಎಂದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ವಿಂಳಬವಾದ್ದರಿಂದ ಸಮಾವೇಶಕ್ಕೆ ಬರಲು ತಡವಾಯಿತು. ಅದಕ್ಕಾಗಿ ಎಲ್ಲರಲ್ಲೂ ಕ್ಷಮೆಯಾಚಿಸುತ್ತೇನೆ ಎಂದರು.
ಮೋದಿ ಅವರು ಚೌಕಿದಾರ ಎಂದು ಹೇಳಿಕೊಂಡು ತಮ್ಮ 15-20 ಮಿತ್ರರಿಗೆ ಮಾತ್ರ ನೆರವು ನೀಡಿದ್ದಾರೆ. ಅನಿಲ್ ಅಂಬಾನಿ ಅವರಿಗೆ 30 ಸಾವಿರ ಕೋಟಿ ರೂ.ನ ರಫೇಲ್ ಡೀಲ್ ನೀಡಿದ್ದಾರೆ. ಆದರೆ ರೈತರ ಸಾಲ ಮನ್ನಾ ಮಾಡಲು ಹೇಳಿದರೆ ಹಣ ಎಲ್ಲಿಂದ ತರುವುದು ಎಂದು ಪ್ರಶ್ನಿಸುತ್ತಾರೆ. ಇದುವೇ ಪ್ರಧಾನಿಯ ನೀತಿಯಾಗಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಅದೇ ಕರ್ನಾಟಕದಲ್ಲಿ ನಮ್ಮ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ರಾಜಸ್ಥಾನ ಹಾಗೂ ಮಧ್ಯಪ್ರದೇಶ, ಛತ್ತೀಸ್ಗಡ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರಗಳು ಹೀಗೆ ರೈತರಿಗೆ ನೆರವಾಗಿವೆ. ಹೀಗೆ ರೈತರಿಗೆ ನೆರವಾಗಲು ನಮಗೆ ಎಲ್ಲಿಂದ ದುಡ್ಡು ಬಂತು? ಎಂದು ಪ್ರಶ್ನಿಸಿದರು. ರೈತರ, ಕಾರ್ಮಿಕರ ಸಾಲಮನ್ನಾ ಮಾಡಿ ಎಂದು ಮೋದಿ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಕೇಳಿಕೊಂಡರೆ ಹಣ ಇಲ್ಲ ಅಂತಾರೆ. ಅದೇ ಶ್ರೀಮಂತ ಉದ್ಯಮಿಗಳ 3 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡುತ್ತಾರೆ. ಇದು ಹೇಗೆ ಸಾಧ್ಯವಾಯಿತು ಎಂದು ರಾಹುಲ್ ಕೇಂದ್ರ ಸರ್ಕಾರದ ಧೋರಣೆಯನ್ನು ವ್ಯಂಗ್ಯವಾಡಿದರು.
ಇನ್ನು ಮಾಜಿ ಸಿಎಂ ಯಡಿಯೂರಪ್ಪ 1,800 ಕೋಟಿ ರೂ ಹಣವನ್ನು ಕೇಂದ್ರದ ನಾಯಕರುಗಳಿಗೆ ನೀಡಿದ್ದಾರೆ. ಈ ಹಣವೆಲ್ಲಾ ಎಲ್ಲಿಂದ ಬಂತು? ರಾಜನಾಥ್ ಸಿಂಗ್, ಅಡ್ವಾಣಿ ಸೇರಿದಂತೆ ಎಲ್ಲರಿಗೂ ಕೋಟಿ ರೂ. ಅದೆಲ್ಲ ಎಲ್ಲಿಂದ ಬಂತು. ಇದೆಲ್ಲಾ ಯಾರಿಗೆ ಸೇರಿದ್ದು ಗೊತ್ತಾ? ಅದು ಕರ್ನಾಟಕದ ರೈತರ ಹಣ. ಮೋದಿ ಅವರಿಗೆ ಶ್ರೀಮಂತರಿಗೆ ಸಹಾಯ ಮಾಡಲು ಸಾಧ್ಯವಾಗುವುದಾದರೆ ನಮಗೆ ರೈತರಿಗೆ ಹಾಗೂ ಕಾರ್ಮಿಕರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ.
ನಿಮಗೆ 15 ಲಕ್ಷ ರೂ. ನೀಡುತ್ತೇವೆ ಎಂದು ಮೋದಿ ಹೇಳಿದ್ದರು. ಇದು ನಿಮಗೆ ಲಭಿಸಿದೆಯೇ?. ಆದರೆ ನಾವು ಅಧಿಕಾರಕ್ಕೆ ಬಂದರೆ ನ್ಯಾಯ್ ಯೋಜನೆಯ ಮೂಲಕ ಬಡತನ ರೇಖೆಗಿಂತ ಕೆಳ ಸ್ಥರದಲ್ಲಿರೋ ಶೇ.20 ಕುಟುಂಬಗಳಿಗೆ ವಾರ್ಷಿಕ ₹72 ಸಾವಿರ ಹಣ ನೀಡುತ್ತೇವೆ. ಇದನ್ನು ನಾವು ಪ್ರತಿ ವರ್ಷ ನೀಡಲಿದ್ದೇವೆ. ಇದು 25 ಕೋಟಿ ಜನರಿಗೆ ಐದು ಕೋಟಿ ಕುಟುಂಬಗಳಿಗೆ ಈ ಯೋಜನೆ ತಲುಪಲಿದೆ. ಇದು ಬಡವರ ಮೇಲಿನ ಸರ್ಜಿಕಲ್ ಸ್ಟ್ರೈಕ್ ಎಂದು ರಾಹುಲ್ ಗಾಂಧಿ ಆಶ್ವಾಸನೆ ನೀಡಿದರು.
ಮೋದಿ ಅವರು ನೋಟು ಬ್ಯಾನ್ ಮೂಲಕ ನಿಮ್ಮ ಜೇಬಿಗೆ ಕನ್ನ ಹಾಕಿದರು. ಯಾರು ನೋಟು ಅಮ್ಯಾಣೀಕರಣದಿಂದ ಉಳಿದುಕೊಂಡರೊ, ಅವರ ಮೇಲೆ ಜಿಎಸ್ಟಿ ತೆರಿಗೆ ಮೂಲಕ ದಾಳಿ ಮಾಡಿದರು. ಐದು ಬೇರೆ ಬೇರೆ ರೀತಿಯ ತೆರಿಗೆಯನ್ನು ಜಾರಿಗೆ ತಂದರು. ಒಂದು ಕಡೆ ತೆರಿಗೆ, ಮತ್ತೊಂದೆಡೆ ಪೆಟ್ರೊಲ್ ಬೆಲೆ ಏರಿಕೆ. ಈ ಗಬ್ಬರ್ ಸಿಂಗ್ ಟ್ಯಾಕ್ಸ್ ಬದಲು ಸರಳ ತೆರಿಗೆಯನ್ನು ನಮ್ಮ ಸರ್ಕಾರ ಜಾರಿಗೆ ತರಲಿದೆ ಎಂದು ರಾಹುಲ್ ತಿಳಿಸಿದರು.
ನರೇಂದ್ರ ಮೋದಿ ಅವರು ಬ್ಯಾಂಕಿನ ಕೀಲಿ ಕೈಯನ್ನು ವಿಜಯ ಮಲ್ಯ, ನೀರವ್ ಮೋದಿ ಅವರಿಗೆ ನೀಡಿದರು. ನಾವು ಮರಳಿ ಅಧಿಕಾರಕ್ಕೇರುವ ಮೂಲಕ ಆ ಕೀಲಿಕೈಯನ್ನು ಜನಸಾಮಾನ್ಯರಿಗೆ ನೀಡುವಂತಹ ಕೆಲಸ ಮಾಡಲಿದ್ದೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲ ಯುವ ಉದ್ದಿಮೆದಾರರಿಗೆ ಯಾವುದೇ ಪರವಾನಗಿ ಪಡೆಯದೇ 3 ವರ್ಷ ಉದ್ಯಮ ನಡೆಸಲು ಅವಕಾಶ ಮಾಡಿಕೊಡಲಿದೆ.
ರಾಜ್ಯದ 28 ಕ್ಷೇತ್ರಗಳ ಪೈಕಿ ಜೆಡಿಎಸ್ ಅಭ್ಯರ್ಥಿಗಳು ಎಲ್ಲೆಲ್ಲಿ ಸ್ಪರ್ಧಿಸಿದ್ದಾರೆ. ಅಲ್ಲೆಲ್ಲಾ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಬೆಂಬಲಿಸಬೇಕು. ಅದೇ ರೀತಿ, ಜಿಡಿಎಸ್ ಕಾರ್ಯತಕರ್ತರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಬೇಕು. ಈ ಒಗ್ಗಟ್ಟಿನ ಮೂಲಕ ಮೋದಿ ನೇತೃತ್ವದ ಬಿಜೆಪಿ ಪಕ್ಷವನ್ನು ಸೋಲಿಸಬೇಕಿದೆ ಎಂದು ಜಂಟಿ ಪಕ್ಷಗಳ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ರಾಹುಲ್ ಗಾಂಧಿ ಅವರ ಈ ಭಾಷಣವನ್ನು ಕಾಂಗ್ರೆಸ್ ನಾಯಕ ಬಿ.ಎಲ್ ಶಂಕರ್ ತರ್ಜುಮೆ ಮಾಡಿದರು. ಈ ವೇಳೆ ವೇದಿಕೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂ ಸಿದ್ಧರಾಮಯ್ಯ, ಸಚಿವ ಡಿ.ಕೆ ಶಿವಕುಮಾರ್ ಸೇರಿದಂತೆ ಮೈತ್ರಿ ಸರ್ಕಾರದ ಪ್ರಮುಖ ನಾಯಕರುಗಳು ಹಾಜರಿದ್ದರು.
Comments are closed.