ಮಂಡ್ಯ: “ಮಂಡ್ಯ ಜಿಲ್ಲೆಯ ಋಣ ನನ್ನ ಮೇಲಿದೆ. ಅವರ ಋಣ ತೀರಿಸುವ ಉದ್ದೇಶದಿಂದ ನಾನು ಮಂಡ್ಯದಲ್ಲಿ ಚುನಾವಣೆಗೆ ನಿಲ್ಲುತ್ತಿದ್ದೇನೆ,” ಎಂದು ಸುಮಲತಾ ಅಂಬರೀಶ್ ಹೇಳುತ್ತಾ ಬಂದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ಸಚಿವ ಡಿಸಿ ತಮ್ಮಣ್ಣ ಟಾಂಗ್ ನೀಡಿದ್ದು, ಮೊಸಳೆ ಕಣ್ಣಿರು ಹಾಕಿಕೊಂಡು ಋಣ ತೀರಿಸುತ್ತೇನೆ ಎನ್ನುವುದಲ್ಲ ಎಂದರು.
ಹೊನ್ನಲಗೆಯಲ್ಲಿ ನಿಖಿಲ್ ಕುಮಾರಸ್ವಾಮಿ ಪ್ರಚಾರದ ವೇಳೆ ಡಿಸಿ ತಮ್ಮಣ್ಣ ಮಾತನಾಡಿದ್ದಾರೆ. ಈ ವೇಳೆ ಸುಮಲತಾ ಅವರ ವಿರುದ್ಧ ಪರೋಕ್ಷವಾಗಿ ತಮ್ಮಣ್ಣ ಹರಿಹಾಯ್ದರು. “ಮೊಸಳೆ ಕಣ್ಣೀರು ಹಾಕಿಕೊಂಡು ಋಣ ಇದೆ ಎಂದು ಹೇಳುವುದಲ್ಲ. 70 ವರ್ಷ ಆಡಳಿತ ನಡೆಸಿದ ಎಲ್ಲರ ಮೇಲೂ ನಿಮ್ಮ ಋಣ ಇದೆ. ಆದರೆ, ಅದನ್ನು ತೀರಿಸಿದವರೆಷ್ಟು ಮಂದಿ ಇದ್ದಾರೆ ಎಂಬುದನ್ನು ಲೆಕ್ಕ ಹಾಕಬೇಕು. ಅದು ತುಂಬ ಮುಖ್ಯವಾದುದು. ಈ ರೀತಿ ಮಾಡುವವರ ಸಂಖ್ಯೆ ತುಂಬಾ ಕಡಿಮೆ,” ಎಂದರು ಅವರು.
“ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ ಕೇವಲ ಒಂಬತ್ತು ತಿಂಗಳಲ್ಲಿ ಸಾವಿರಾರು ಕೋಟಿ ರೂ. ಹಣವನ್ನು ಮಂಡ್ಯ ಭಾಗಕ್ಕೆ ನೀಡಿದರು. ಸಾಕಷ್ಟು ಯೋಜನೆಗಳಿಗೆ ಶಂಕುಸ್ಥಾಪನೆ ಕೂಡ ಮಾಡಿದರು. ಯಾವ ಮುಖ್ಯಮಂತ್ರಿ ಈ ರೀತಿ ಮಾಡಿದ್ದಾರೆ ಎಂದು ತೋರಿಸಿ. ಒಂದೊಮ್ಮೆ ಹಾಗೆ ಯಾರಾದರೂ ಇರುವುದನ್ನು ತೋರಿಸಿದರೆ ನಾನು ರಾಜಕೀಯ ಬಿಟ್ಟು ಹೋಗುತ್ತೇನೆ,” ಎಂದರು.
ಅಂಬರೀಶ್ ಅವರು ಮಂಡ್ಯ ಭಾಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಜನರ ಋಣ ನಮ್ಮ ಮೇಲಿದೆ. ಅದನ್ನು ತೀರಿಸಲು ನಾನು ಚುನಾವಣೆ ನಿಲ್ಲುತ್ತಿದ್ದೆನೆ ಎಂದು ಸುಮಲತಾ ಈ ಮೊದಲು ಹೇಳಿಕೊಂಡಿದ್ದರು.
Comments are closed.