ಹಾಸನ: ಹಾಸನ ಲೋಕಸಭಾ ಚುನಾವಣೆಯಲ್ಲಿ ತೀವ್ರ ಪೈಪೋಟಿ ನಡೆಯುತ್ತಿದ್ದು, ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಭರಾಟೆ ಜೋರಾಗಿದೆ. ಮತದಾರರನ್ನ ಸೆಳೆಯಲು ಚಿತ್ರ ನಟಿ ತಾರಾ ಅವರು ಬಿಜೆಪಿ ಅಭ್ಯರ್ಥಿ ಎ. ಮಂಜು ಪರ ಮತಯಾಚನೆ ಮಾಡಿದರು. ರೋಡ್ ಷೋ ಮೂಲಕ ಮತದಾರರ ಗಮನ ಸೆಳೆದ ಅವರು ಕುಟುಂಬ ರಾಜಕಾರಣವನ್ನು ತರಾಟೆಗೆ ತೆಗೆದುಕೊಂಡರು.
ತ್ರೀಜಿ, ಫೋರ್ ಜೀ ಎಲ್ಲವನ್ನೂ ಕೆಳಗಿಳಿಸಿ ಮೂರ್ನಾಲ್ಕು ತಲೆಮಾರಿನಿಂದ ಅಧಿಕಾರ ಹಿಡಿದಿರುವವರನ್ನ ಸೋಲಿಸಿ ಎಲ್ಲರೂ ಒಂದಾಗಿ ಮತ ಚಲಾಯಿಸಿ. ಈಗ ಬದಲಾವಣೆ ಗಾಳಿ ಬೀಸಿದೆ ಎಂದು ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ದ ವಾಗ್ದಾಳಿ ನಡೆಸಿದರು. ಬಿಜೆಪಿಗೆ ಮತ ನೀಡಿ, ದೇಶಕ್ಕಾಗಿ ಮೋದಿಗಾಗಿ ಮತ ನೀಡಿ. ಎ. ಮಂಜು ಅವರಿಗೆ ಮತ ನೀಡಿ ಎಂದು ತಾರಾ ಮನವಿ ಮಾಡಿದರು.
ಅರಕಲಗೂಡಿನ ಗಣಪತಿ ದೇವಾಲಯದಿಂದ ರಾಮನಾಥಪುರ ರಸ್ತೆಯ ಜಂಕ್ಷನ್ನಲ್ಲಿರುವ ಖಾಸಗಿ ಕಲ್ಯಾಣ ಮಂಟಪದವರೆಗೆ ರೋಡ್ ಷೋ ನಡೆಸಲಾಯತು. ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಳಿಕ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತೆರೆದ ವಾಹನದಲ್ಲಿ ಅಭ್ಯರ್ಥಿ ಎ. ಮಂಜು, ನಟಿ ತಾರಾ ಮತ್ತು ಶಾಸಕ ಪ್ರೀತಮ್ ಗೌಡರವರು ರೋಡ್ ಷೋ ಮೂಲಕ ಮತದಾರರ ಗಮನ ಸೆಳೆದರು. ನಟಿ ತಾರಾ ಮಾತನಾಡಿ ಮೋದಿ ಅವರನ್ನ ರಾಜಕುಮಾರ್ ಅವರಿಗೆ ಹೋಲಿಕೆ ಮಾಡಿದರು.
ಕಳೆದ 2014 ರ ಚುನಾವಣೆಗಿಂತಲೂ ಈ ಬಾರಿ ಮೋದಿ ಅಲೆ ಹೆಚ್ಚಾಗಿದೆ. ಇದು ಮೋದಿಯ ಹೆಸರು ನಮ್ಮ ರಾಜ್ಯದಲ್ಲಿ ವರನಟ ರಾಜಕುಮಾರ್ ಅವರ ಹೆಸರಿನಂತೆ ಶಕ್ತಿಯಾಗಿದೆ ಎಂದು ಹೇಳಿದರು.
ಇನ್ನು, ಹೆಚ್.ಡಿ. ರೇವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಸಚಿವರ ಸ್ವಾತಿ ನಕ್ಷತ್ರದ ಹೇಳಿಕೆಗೆ ತಿರುಗೇಟು ನೀಡಿದರು.
“ನನ್ನದು ಸ್ವಾತಿ ನಕ್ಷತ್ರ. ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ. ಆದರೆ, ನನ್ನದು ಶತಬಿಷ ನಕ್ಷತ್ರ. ನನ್ನನ್ನೂ ಯಾರು ಏನೂ ಮಾಡಲು ಸಾಧ್ಯವಿಲ್ಲ. ಬಿಜೆಪಿಯ ಯಾವ ಕಾರ್ಯಕರ್ತರನ್ನೂ ಏನು ಮಾಡಲು ಸಾಧ್ಯವಿಲ್ಲಾ. ಪ್ರತಿಯೊಬ್ಬ ಜನಸಾಮಾನ್ಯನಿಗೂ ನಕ್ಷತ್ರವಿದೆ. ಅವರನ್ನೂ ಏನೂ ಮಾಡಲಾಗುವುದಿಲ್ಲ” ಎಂದು ನಟಿ ತಾರಾ ಟೀಕಿಸಿದರು.
“ಮೈತ್ರಿ ಸರ್ಕಾರ ದ್ವೇಷದ ಸರ್ಕಾರ. ನಮ್ಮ ಕೇಂದ್ರ ಸರ್ಕಾರ ದೇಶದ ಸರ್ಕಾರ. ದೇಶ ಬೇಕೋ ದ್ವೇಷ ಬೇಕೋ ನೀವೇ ನಿರ್ಧಾರ ಮಾಡಿ” ಎಂದು ಜನರಲ್ಲಿ ತಾರಾ ಮನವಿ ಮಾಡಿದರು.
ಜೆಡಿಎಸ್ಗೆ ಇಲ್ಲ ಅಡ್ಜಸ್ಟ್ಮೆಂಟ್ಸ್, ಈಗ ಎಲ್ಲಾ ನೇರಾನೇರ: ಎ. ಮಂಜು
ಬಿಜೆಪಿ ಅಭ್ಯರ್ಥಿ ಎ. ಮಂಜು ಮಾತನಾಡಿ, ದೇವೇಗೌಡರ ಕುಟುಂಬದ ವಿರುದ್ದ ಮತ್ತೆ ವಾಗ್ದಾಳಿ ನಡೆಸಿದ್ರು. “ಎರಡನೇ ಸಾಲಿನವರು ರಾಜಕೀಯದ ಮುನ್ನೆಲೆಗೆ ಬರಬೇಕಾದರೆ, ಈ ಕುಟುಂಬವನ್ನ ಸೋಲಿಸಿದರೆ ಮಾತ್ರ ಸಾಧ್ಯ. ದೇವೇಗೌಡರ ಕುಟುಂಬದವರು ಯಾವಾಗಲೂ ಎಲ್ಲರನ್ನೂ ಅಡ್ಜೆಸ್ಟ್ಮೆಂಟ್ ಮಾಡಿಕೊಂಡು ಚುನಾವಣೆ ಮಾಡುತ್ತಿದ್ದರು. ಈಗ ಯಾವುದೇ ಅಡ್ಜೆಸ್ಟ್ ಮೆಂಟ್ ಇಲ್ಲ. ಎಲ್ಲಾ ನೇರಾ ನೇರ” ಎಂದು ಮಾಜಿ ಸಚಿವರು ಕುಟುಕಿದರು.
ಜೆಡಿಎಸ್ ಅಭ್ಯರ್ಥಿಗೆ ಸಂಸ್ಕೃತಿ ಗೊತ್ತಿಲ್ಲ. ಹಿರಿಯರಿಗೆ ಗೌರವ ಕೊಡುವುದು ಗೊತ್ತಿಲ್ಲಾ ಎನ್ನುವ ಮೂಲಕ ಹೆಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ವಿರುದ್ಧ ಕಿಡಿ ಕಾರಿದರು.
ದೇವೇಗೌಡರು ಕಣ್ಣೀರಿಟ್ಟಿದ್ದು ಜೆಡಿಎಸ್ ಗೆಲ್ಲಿಸಿ ಅಂತ ಅಲ್ಲ. ನನ್ನನ್ನ ಹಾಸನದಿಂದ ತಳ್ಳುತ್ತಿದ್ದಾರೆ. ಹಾಸನ ಬಿಟ್ಟು ಹೋಗಬೇಕಲ್ಲ ಅಂತಾ ದೇವೇಗೌಡರು ಕಣ್ಣೀರಿಟ್ಟರು ಎಂದೂ ರೇವಣ್ಣ ಕುಟುಂಬದವರ ವಿರುದ್ದ ಪರೋಕ್ಷ ಆರೋಪ ಮಾಡಿದರು.
“ಕಳೆದ ಚುನಾವಣೆಯಲ್ಲಿ ನನಗೆ ಎಲ್ಲರೂ ಕೈಕೊಟ್ಟರು. ಇಲ್ಲಿ ಮಂತ್ರಿ ಆಗಲ್ಲ ಎಂದು ನನ್ನನ್ನ ಸೋಲಿಸಿದಿರಿ. ಈಗ ಇವರೇ ಹೇಳಿದ್ದಾರೆ ಅಲ್ಲಿ ಕೇಂದ್ರದಲ್ಲಿ ಮಂತ್ರಿಯಾಗುತ್ತೇನೆಂದು. ನನ್ನನ್ನ ಗೆಲ್ಲಿಸಿ ಅಲ್ಲಿ ಮಂತ್ರಿಯಾಗುವುದನ್ನ ನೋಡಿ. ನಿಮ್ಮ ಸೇವೆ ಮಾಡುತ್ತೇನೆ” ಎಂದು ಮಂಜು ಮನವಿ ಮಾಡಿದ್ರು.
ಇನ್ನೂ ಮುಂದುವರೆದು ಮಾತನಾಡಿದ ಮಾಜಿ ಶಾಸಕ ಮಂಜು ಅವರು, ಅರಕಲಗೂಡಿನ ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರು.
ಅರಕಲಗೂಡು ಶಾಸಕರು ಯಾಕೋ ಮಾತಾಡ್ತಿಲ್ಲ. ಅವರನ್ನ ಮಾತಾಡೋಕೇ ಬಿಡುತ್ತಿಲ್ಲ. ಪಾಪ ಆ ಶಾಸಕರಿಗೂ ದೇವೇಗೌಡರ ಮೊಮ್ಮಗ ಸ್ಪರ್ಧೆ ಮಾಡೋದು ಇಷ್ಟ ಇಲ್ಲ ಎಂದು ಮಾಜಿ ಸಚಿವರೂ ಆದ ಮಂಜು ವಿಷಾದಿಸಿದರು.
ದೇವೇಗೌಡರಿಗೆ ಒಕ್ಕಲಿಗರು ಜಿಪಿಎ ಬರೆದುಕೊಟ್ಟಿಲ್ಲ: ಪ್ರೀತಮ್ ಗೌಡ
ಹಾಸನ ಶಾಸಕ ಪ್ರೀತಮ್ ಗೌಡ ಮಾತನಾಡಿ, ಹಾಸನದಿಂದ ಮಂಜಣ್ಣ ಗೆದ್ದರೆ ಕೇಂದ್ರದಲ್ಲಿ ಸಚಿವರಾಗುತ್ತಾರೆ ಎಂದು ಭವಿಷ್ಯ ನುಡಿದರು. “ದೇವೇಗೌಡರ ಕುಟುಂಬ ಪ್ರೈವೇಟ್ ಲಿಮಿಟೆಡ್, ನಮ್ಮದು ಪಬ್ಲಿಕ್ ಲಿಮಿಟೆಡ್ ಕಂಪನಿಯಾಗಿದೆ. ದೇವೇಗೌಡರಿಗೆ ಒಕ್ಕಲಿಗರು ಯಾರೂ ಜಿಪಿಎ ಬರೆದುಕೊಟ್ಟಿಲ್ಲ” ಎಂದು ಪ್ರೀತಮ್ ಗೌಡ ವಾಗ್ದಾಳಿ ನಡೆಸಿದರು.
ಅರಕಲಗೂಡು ಸಮಾವೇಶದಲ್ಲಿ ಎಲ್ಲರೂ ಭಾಷಣದುದ್ದಕ್ಕೂ ದೇವೇಗೌಡರ ಕುಟುಂಬದ ವಿರುದ್ದ ಟೀಕಾಸ್ತ್ರ ಪ್ರಯೋಗ ಮಾಡಿದರು. ಅರಕಲಗೂಡು ಎ. ಮಂಜು ಅವರ ಸ್ವಕ್ಷೇತ್ರವಾಗಿದ್ದು ಕಳೆದ ಬಾರಿ ಇವರು ಸೋತಿದ್ದರಿಂದ ಈ ಬಾರಿ ಅನುಕಂಪದ ಅಲೆ ಹೆಚ್ಚಾಗಿದ್ದಂತಿದೆ. ಸಮಾವೇಶದಲ್ಲಿ ನೆರೆದಿದ್ದ ಜನಸಾಗರವನ್ನ ನೋಡಿದ್ರೆ ಈ ಪ್ರದೇಶದಲ್ಲಿ ಬಿಜೆಪಿಗೆ ಅತೀ ಹೆಚ್ಚು ಮತಗಳು ಅಂತರ ಬರುವ ನಿರೀಕ್ಷೆ ಇದೆ. ಒಟ್ಟಾರೆ ಎ. ಮಂಜು ಮತ ಪ್ರಚಾರ ಮಾಡುವಾಗಲೆಲ್ಲಾ ಬಹುತೇಕ ಕಾಂಗ್ರೆಸ್ ಕಾರ್ಯಕರ್ತರು ಎ. ಮಂಜುಗೆ ಭಾರೀ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
(ವರದಿ: ಡಿಎಂಜಿ ಹಳ್ಳಿ ಅಶೋಕ್)
Comments are closed.