ಬೆಂಗಳೂರು: ರಾಜ್ಯದಲ್ಲೀಗ ಮಂಡ್ಯ ಲೋಕಸಭಾ ಚುನಾವಣೆಯದ್ದೇ ಭಾರೀ ಸದ್ದು. ಒಂದೆಡೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕಿಳಿದಿರುವ ನಿಖಿಲ್ ಕುಮಾರಸ್ವಾಮಿಯವರು ಭರ್ಜರಿ ಮತಬೇಟೆ ಮಾಡುತ್ತಿದ್ದರೇ, ಇನ್ನೊಂದೆಡೆ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ನಟ ಯಶ್- ದರ್ಶನ್ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಅಲ್ಲದೇ ಮಂಡ್ಯ ಜನರಲ್ಲಿ ತಮಗೆ ಮತ ಚಲಾಯಿಸುವಂತೆ ಇಬ್ಬರ ತಂಡಗಳು ಮನವಿ ಮಾಡುತ್ತಿವೆ.
ಇನ್ನು ಸುಮಲತಾ ಸ್ಪರ್ಧೆಯಿಂದ ಜೆಡಿಎಸ್ ವರಿಷ್ಠರು ಸೋಲಿನ ಭೀತಿಯಲಿದ್ದಾರೆ. ಈಗಾಗಲೇ ನಟ ದರ್ಶನ್, ಯಶ್, ಸುಮಲತಾ, ಅಭಿಶೇಕ್ ಅಂಬರೀಶ್ ಪ್ರಚಾರ ಮಾಡುವ ಮೂಲಕ ಮಂಡ್ಯದಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಹೀಗಾಗಿ ಸಿಎಂ ಪುತ್ರ ನಿಖಿಲ್ ಅವರನ್ನು ಜೆಡಿಎಸ್ ಭಾರೀ ತಂತ್ರ ರೂಪಿಸುತ್ತಿದೆ. ಖುದ್ದು ಸಿಎಂ ಕುಮಾರಸ್ವಾಮಿಯವರೇ ಗುಪ್ತಚರ ಇಲಾಖೆಯಿಂದ ದಿನಕ್ಕೆ ಎರಡು ಬಾರಿ ಮಂಡ್ಯದ ವರದಿ ತರಿಸಿಕೊಳ್ಳುತ್ತಿದ್ಧಾರೆ.
ಸಿಎಂ ಎಚ್.ಡಿ ಕುಮಾರಸ್ವಾಮಿಯವರ ಸೂಚನೆ ಮೇರೆಗೆ ಮಂಡ್ಯದಲ್ಲಿ ಗುಪ್ತಚರ ಇಲಾಖೆ ತಂಡ ಬೀಡುಬಿಟ್ಟಿದೆ. ಇಲ್ಲಿ ನಡೆಯುತ್ತಿರುವ ಇಂಚಿಂಚೂ ಮಾಹಿತಿಯನ್ನು ಸಿಎಂ ಅವರಿಗೆ ಪ್ರತಿದಿನ ವರದಿ ಮಾಡಲಾಗುತ್ತಿದೆ. ಈ ಮಧ್ಯೆ ಸಚಿವ ಪುಟ್ಟರಾಜು ನೇತೃತ್ವದ ಮತ್ತೊಂದು ತಂಡ ಬೇರೆಯದ್ದೇ ರೀತಿ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಗೂಢಚಾರಿಕೆ ಮಾಡುತ್ತಿರುವ ಈ ಪುಟ್ಟರಾಜು ತಂಡ ದರ್ಶನ, ಯಶ್, ಸುಮಲತಾ ,ಅಭಿ ಹಿಂದೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಸದ್ದಿಲ್ಲದೇ ಮೂವರ ಜೊತೆಯಲ್ಲೇ ಇರುವ ಮೂಲಕ ಎಲ್ಲರ ಚಲನವಲನ ಗಮನಿಸುತ್ತಿದೆ. ಇದಕ್ಕಾಗಿಯೇ ಐದು ಜನರ ತಂಡ ಕೆಲಸ ಮಾಡುತ್ತಿದ್ದು, ಮೂವರು ಮಾಡುವ ಯಡವಟ್ಟುಗಳನ್ನು ಮೊಬೈಲ್ ವಿಡಿಯೋ ಮಾಡಲಾಗುತ್ತಿದೆ. ಜತೆಗೆ ಸುಮಲತಾರಿಗೆ ಯಾವ ನಾಯಕರ ಬೆಂಬಲವಿದೆ? ಕೈ ಕಾರ್ಯಕರ್ತರು ಯಾರಿದ್ದಾರೆ? ಯಾವ ಊರಲ್ಲಿ ಎಷ್ಟು ಜನ ಸೇರಿದ್ರು? ಇವರಾಗೇ ಕರೆಸಿದ್ರಾ? ಅವರಾಗೇ ಬಂದ್ರಾ? ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ ಎಂಬ ಎಕ್ಸ್ಕ್ಲೂಸಿವ್ ಮಾಹಿತಿ ಲಭ್ಯವಾಗಿದೆ.
ಆರಂಭದಿಂದಲೂ ಜೆಡಿಎಸ್ ನಾಯಕರು ನಿಖಿಲ್ ಕುಮಾರಸ್ವಾಮಿ ಎದುರಾಳಿಯಾಗಿ ಕಣಕ್ಕೆ ಇಳಿದಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಜೆಡಿಎಸ್ ನಾಯಕರ ಆಪ್ತರ ಮನೆಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರ ಹಿಂದೆ ಸುಮಲತಾ ಅಂಬರೀಶ್ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಅದಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಸುಮಲತಾ ಸ್ಪಷ್ಟನೆ ನೀಡಿದ್ದಾರೆ.
ಹೇಗಾದರೂ ಮಾಡಿ ತನ್ನ ಮಗ ನಿಖಿಲ್ನನ್ನು ಗೆಲ್ಲಿಸಲೇಬೇಕೆಂಬ ಜಿದ್ದಿಗೆ ಬಿದ್ದಿರುವ ಸಿಎಂ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ಧಾರೆ. ಮಗನ ರಾಜಕೀಯಕ್ಕೆ ಸುಮಲತಾ ಪ್ರವೇಶ ಮುಳುವಾಗಲಿದೆ ಎಂದು ಭಾವಿಸಿದ್ದ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ಭಾರೀ ತಂತ್ರ ಹೆಣೆದಿದ್ದಾರೆ. ಗುಪ್ತಚರ ಇಲಾಖೆ ಮೂಲಕ ವರದಿ ತರಿಸಿಕೊಳ್ಳುವ ಮೂಲಕ ಸುಮಲತಾ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗುತ್ತಿದೆ.
Comments are closed.