ಕರ್ನಾಟಕ

ರಾಜ್ಯದೆಲ್ಲೆಡೆ ಮುಖ್ಯಮಂತ್ರಿ ಕಾಣೆ, ಮಂಡ್ಯದಲ್ಲಿ ಮಾತ್ರ ಕಾಣಿಸುತ್ತಿದ್ದಾರೆ: ಬಿಜೆಪಿ ಲೇವಡಿ

Pinterest LinkedIn Tumblr


ಮೈಸೂರು: ರಾಜ್ಯದಲ್ಲಿ ಮುಖ್ಯಮಂತ್ರಿಯೇ ಕಾಣೆಯಾಗಿದ್ದಾರೆ. ಕೇವಲ ಮಂಡ್ಯದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರವಾಗಿ ಪ್ರಚಾರ ನಡೆಸಿದ ವೇಳೆ ಮಾಜಿ ಸಚಿವ ಸುರೇಶ್ ಕುಮಾರ್ ಲೇವಡಿ ಮಾಡಿದ್ದಾರೆ.

ಮಂಡ್ಯ ಲೋಕಸಭೆ ಚುನಾವಣೆ ಅಭ್ಯರ್ಥಿ ಆಗಿರುವ ನಿಖಿಲ್ ಕುಮಾರಸ್ವಾಮಿ ಅವರ ತಂದೆಯಾಗಿರುವ ಎಚ್‌ ಡಿ ಕುಮಾರಸ್ವಾಮಿ ಅವರು ತಾವೊಬ್ಬ ಮುಖ್ಯಮಂತ್ರಿ ಎಂಬುದನ್ನು ಮರೆತಿದ್ದಾರೆ. ಕೇವಲ ನಿಖಿಲ್ ತಂದೆಯಾಗಿ ಮಂಡ್ಯದಲ್ಲಿ ಮಾತ್ರ ಕಾಣಿಸಿಕೊಳ್ತಿದ್ದಾರೆ ಎಂದು ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಸುಮಲತಾ ಎಂಬ ಮಹಿಳೆಯ ಬಗ್ಗೆ ಉಪಯೋಗಿಸುತ್ತಿರುವ ಪದಗಳು, ವ್ಯಕ್ತಪಡಿಸುತ್ತಿರುವ ಭಾವನೆಗಳು ರಾಜಕೀಯ ಕ್ಷೇತ್ರಕ್ಕೆ ಶೋಭೆ ತರುವಂತಹದ್ದಲ್ಲ. ಜಾತ್ಯಾತೀತ ಜನತಾದಳ ಅನ್ನೊ ಹೆಸರಿಟ್ಟುಕೊಂಡು ಬರೀ ಜಾತಿ ಆಧಾರಿತ ಚಿಂತನೆ ಮಾಡುತ್ತಿದ್ದಾರೆ. ನನಗೆ ಜಾತ್ಯಾತೀತತೆಗೆ ಅರ್ಥ ಹುಡುಕಬೇಕು ಎಂದು ಅನಿಸುತ್ತಿದೆ ಎಂದಿದ್ದಾರೆ.

ನಿಖಿಲ್ ಕುಮಾರಸ್ವಾಮಿ ತಂದೆಯಾಗಿ ಮಾತ್ರವಲ್ಲದೆ ರಾಜ್ಯದ ಮುಖ್ಯಮಂತ್ರಿಯಾಗಿ ಕೂಡ ಕೆಲಸ ಮಾಡಿ. ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ ಆ ಕಡೆ ಗಮನ ಕೊಡಿ. ಕೇವಲ ಒಂದು ಪಕ್ಷದ ನಾಯಕರಾಗಿ ನಡೆದುಕೊಳ್ಳುತ್ತಿರೋದು ಸರಿಯಲ್ಲ ಎಂದು ಸಿಎಂ ಕುಮಾಸ್ವಾಮಿ ಅವರಿಗೆ ಸುರೇಶ್‌ ಕುಮಾರ್‌ ಸಲಹೆ ನೀಡಿದ್ದಾರೆ.

ಚಿತ್ರನಟರು ನಮ್ಮ ಜೊತೆ ಇದ್ರೆ ಜೋಡೆತ್ತುಗಳು. ನಮ್ಮ ಜೊತೆಯಲ್ಲಿ ಇಲ್ಲದಿದ್ರೆ ಅವ್ರು ಕಳ್ಳ ಎತ್ತುಗಳು ಅನ್ನೋದು ಸರಿಯಲ್ಲ. ಪ್ರತಿಯೊಬ್ಬರನ್ನು ಗೌರವಿಸೊದನ್ನು ಕಲಿಯಬೇಕು. ತಮ್ಮಜವಾಬ್ದಾರಿಯನ್ನು ಕುಮಾರಸ್ವಾಮಿ ಮರೆತಿದ್ದಾರೆ. ಬಿಜೆಪಿಯನ್ನು ಕಂಡ್ರೆ ಮೈತ್ರಿ ಸರ್ಕಾರಕ್ಕೆ ಭಯ. ಮೈತ್ರಿ ಎಫೆಕ್ಟ್ ನಿಂದಾಗಿ ಅವರಿಗೆ ತೊಂದರೆ ಆಗುತ್ತಿದೆ, ಆದರೂ ಮೈತ್ರಿ ಎಫೆಕ್ಟ್ ನಮಗಿಲ್ಲ ಎನ್ನುತ್ತಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷರಿಗೆ ಸಮನ್ವಯ ಸಾಧಿಸಲಿಕ್ಕೆ ಆಗುತ್ತಿಲ್ಲ ಎಂದಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಚಾರವಾಗಿ ಪ್ರತಿಕ್ರಿಯಿಸಿದ ಸುರೇಶ್‌ ಕುಮಾರ್‌, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ತೇಜಸ್ವಿ ಸೂರ್ಯ ಒಬ್ಬ ಯುವ ನಾಯಕ. ಅವರಿಗೆ ಅಪಾರ ಜನ ಬೆಂಬಲವಿದೆ ಎಂದರು.

Comments are closed.